ಹಾವೇರಿ: ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಜಿಲ್ಲೆಯಲ್ಲಿ ಗರಿಗೆದರಿವೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಇದುವರೆಗೆ ಒಟ್ಟಾರೆ ₹61.74 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನೀತಿಸಂಹಿತೆ ಜಾರಿಯಾಗುವ ಮುನ್ನವೇ ರಾಜಕೀಯ ಪಕ್ಷಗಳು ಮತ್ತು ಕೆಲವು ಟಿಕೆಟ್ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ವಾಮಮಾರ್ಗ ಹಿಡಿದಿದ್ದರು. ಇದನ್ನು ಮನಗಂಡ ಕೇಂದ್ರ ಚುನಾವಣಾ ಆಯೋಗವು ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿತ್ತು. ಆಯೋಗದ ಆದೇಶದಂತೆ, ನಿಯೋಜಿತ ಚುನಾವಣಾ ಸಿಬ್ಬಂದಿ ಮತ್ತು ಪೊಲೀಸರು ಚುನಾವಣಾ ಅಕ್ರಮಗಳನ್ನು ತಡೆಹಿಡಿಯಲು ವಿವಿಧ ಕಡೆ ದಾಳಿ, ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ನಡೆಸುವ ಮೂಲಕ ನಗದು ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
₹26.36 ಲಕ್ಷ ನಗದು, ₹4.94 ಲಕ್ಷ ಮೌಲ್ಯದ 12.85 ಕೆ.ಜಿ ಬೆಳ್ಳಿ, ₹2.34 ಲಕ್ಷ ಮೌಲ್ಯದ 572 ಲೀಟರ್ ಅಕ್ರಮ ಮದ್ಯ, ₹4,400 ಮೊತ್ತದ ಗಾಂಜಾ, ₹28.05 ಲಕ್ಷ ಮೌಲ್ಯದ 18,924 ಉಚಿತ ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ₹3.37 ಲಕ್ಷ , ಶಿಗ್ಗಾವಿ–₹29.29 ಲಕ್ಷ , ಹಾವೇರಿ (ಮೀಸಲು)– ₹5.41 ಲಕ್ಷ, ಬ್ಯಾಡಗಿ– ₹2.57 ಲಕ್ಷ, ಹಿರೇಕೆರೂರು–₹18,872 ರಾಣೆಬೆನ್ನೂರು–₹20.90 ಲಕ್ಷ ಮೌಲ್ಯದ ವಸ್ತುಗಳು ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ ₹61.74 ಲಕ್ಷ ಮೌಲ್ಯದ ವಸ್ತುಗಳನ್ನು ನಿಯೋಜಿತ ಚುನಾವಣಾ ಸಿಬ್ಬಂದಿ ಮತ್ತು ಪೊಲೀಸರು ಜಪ್ತಿ ಮಾಡಿದ್ದಾರೆ.
ತಂಡಗಳ ರಚನೆ: ಹಣ, ವಸ್ತ್ರ, ಮದ್ಯ, ಉಡುಗೊರೆ ಮುಂತಾದವುಗಳನ್ನು ಕೊಡುವ ಮೂಲಕ ಮತದಾರರ ಮೇಲೆ ಆಮಿಷವೊಡ್ಡುವ ಅಭ್ಯರ್ಥಿಗಳು ಮತ್ತು ಅವರ ಹಿಂಬಾಲಕರ ಚಲನವಲನಗಳ ಮೇಲೆ ಜಿಲ್ಲಾ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಚುನಾವಣಾ ನೀತಿಸಂಹಿತೆ ಮೇಲೆ ನಿಗಾವಹಿಸಲು 12 ವಿಡಿಯೊ ಸರ್ವಲನ್ಸ್ ತಂಡ, ಆರು ವಿಡಿಯೊ ವಿಂಗ್ ತಂಡ, ಆರು ಅಕೌಂಟ್ ತಂಡ, ಆರು ಸಹಾಯಕ ವೆಚ್ಚ ವೀಕ್ಷಕರ ತಂಡ ಹಾಗೂ 141 ಸೆಕ್ಟರ್ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದ್ದಾರೆ.
ವಿಶೇಷ ತಂಡ ರಚನೆ: ಆದಾಯ ತೆರಿಗೆ ಇಲಾಖೆ ಪ್ರತಿ ಜಿಲ್ಲೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ನಿಯಂತ್ರಣ ಕೊಠಡಿ ತೆರೆದಿದೆ. ಯಾವುದೇ ವ್ಯಕ್ತಿ ಹಾಗೂ ಪಕ್ಷಗಳು ನಗದು ವಿತರಣೆ ಹಾಗೂ ಯಾವುದೇ ರೀತಿಯ ವಸ್ತುಗಳನ್ನು ಹಂಚುತ್ತಿದ್ದರೆ ಶುಲ್ಕ ರಹಿತ ಸಹಾಯವಾಣಿಗೆ ಅಥವಾ ಇ-ಮೇಲ್ ಮೂಲಕ ಮಾಹಿತಿ ನೀಡಬಹುದು.
ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿ ಇರಿಸಲಾಗುವುದು. ದೂರು ನೀಡಬೇಕಾದ ಸಂಪರ್ಕ ಸಂಖ್ಯೆ 1800-425-2115/ 080-22861126/ 080-22866916, ಮೊ:8277422825, 827413614 ಸಂಪರ್ಕಿಸಿ ಮಾಹಿತಿ ನೀಡಲು ತಿಳಿಸಿದರು.
‘ಅಕ್ರಮ ಕಂಡುಬಂದರೆ ದೂರು ನೀಡಿ’
ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ಜಿಲ್ಲಾ ಕ್ಷೇತ್ರದಲ್ಲಿ ಕ್ಷೇತ್ರವಾರು ಹಾಗೂ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.
ಹಾನಗಲ್ ಕ್ಷೇತ್ರಕ್ಕೆ ದೂ:08375-200390, ಶಿಗ್ಗಾವಿ ಕ್ಷೇತ್ರಕ್ಕೆ ದೂ:08375-200391, ಹಾವೇರಿ ಕ್ಷೇತ್ರಕ್ಕೆ ದೂ: 08375-200392, ಬ್ಯಾಡಗಿ ಕ್ಷೇತ್ರಕ್ಕೆ ದೂ:08375-200393, ಹಿರೇಕೆರೂರು ಕ್ಷೇತ್ರಕ್ಕೆ ದೂ:08375-200394 ಹಾಗೂ ರಾಣೆಬೆನ್ನೂರು ಕ್ಷೇತ್ರಕ್ಕೆ ದೂ.08375-200395 ಹಾಗೂ ಜಿಲ್ಲಾ ಮಟ್ಟದಲ್ಲಿ 1950 ಸಂಖ್ಯೆಗೆ ಉಚಿತ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
***
ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮ ಚಟುವಟಿಕೆಗಳು ಕಂಡುಬಂದರೆ ಕೂಡಲೇ ದೂರು ನೀಡಬಹುದು. ದೂರು ನೀಡಿದವರ ಹೆಸರನ್ನು ಗೋಪ್ಯವಾಗಿಡಲಾಗುವುದು
– ರಘುನಂದನ ಮೂರ್ತಿ, ಜಿಲ್ಲಾ ಚುನಾವಣಾ ಅಧಿಕಾರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.