ಯತ್ತಿನಹಳ್ಳಿ ಎಂಕೆ(ಹಂಸಬಾವಿ): ನಸುಕಿನ ಸುಮಾರು 4 ಗಂಟೆಯ ಹೊತ್ತು. ಕಿಕ್ಕಿರಿದು ಸೇರಿದ್ದ ಪ್ರೇಕ್ಷಕ ವರ್ಗದ ದೃಷ್ಟಿ ಕ್ರೀಡಾಂಗಣದತ್ತ ನೆಟ್ಟಿತ್ತು. ಎದುರಾಳಿ ತಂಡದ ಓಟಗಾರರನ್ನು ಹಿಡಿಯಲು ಜಿಗಿಯುತ್ತ, ಓಡುತ್ತ ನಿರಂತರ ಪ್ರಯತ್ನದಲ್ಲಿದ್ದ ಆಟಗಾರ ಕೊನೆಗೂ ಯಶಸ್ವಿಯಾಗಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದಾಗ ಶಿಳ್ಳೆ, ಚಪ್ಪಾಳೆಯ ಸುರಿಮಳೆ...
ಇಲ್ಲಿಗೆ ಸಮೀಪದ ಯತ್ತಿನಹಳ್ಳಿ ಎಂಕೆ ಗ್ರಾಮದ ಬ್ರಹ್ಮಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಈಚೆಗೆ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕೊಕ್ಕೊ ಟೂರ್ನಿಯ ರೋಚಕ ಪೈನಲ್ ಹಣಾಹಣಿಯಲ್ಲಿ ಶಿವಮೊಗ್ಗ ಹಾಗೂ ಬ್ಯಾಡಗಿ ತಂಡಗಳ ನಡುವಿನ ಸೆಣಸಾಟದ ದೃಶ್ಯ ಕಂಡುಬಂದಿದ್ದು ಹೀಗೆ.
ಗೌರಿ -ಗಣೇಶ ವಿಸರ್ಜನೆಯ ಅಂಗವಾಗಿ ಪ್ರತೀ ವರ್ಷದಂತೆ ಈ ಬಾರಿಯೂ ಟೂರ್ನಿ ನಡೆಯಿತು. ಪಂದ್ಯಾವಳಿಯಲ್ಲಿ ಸಂತೆಕಡೂರ, ಶಿವಮೊಗ್ಗ, ಹುಬ್ಬಳ್ಳಿ, ಸಮ್ಮಸಗಿ, ಗದಗ ಬೆಟಗೇರಿ, ಬ್ಯಾಡಗಿ, ಹುಲ್ಲಿನಕೊಪ್ಪ, ಮಲ್ಲೇನಹಳ್ಳಿ ಸೇರಿದಂತೆ 22 ತಂಡಗಳು ಭಾಗವಹಿಸಿದ್ದವು.
ಬ್ಯಾಡಗಿ ತಂಡವನ್ನು ಮಣಿಸಿ ಶಿವಮೊಗ್ಗ ತಂಡ ಪ್ರಥಮ ಸ್ಥಾನವನ್ನು(₹15,001) ಮುಡಿಗೇರಿಸಿಕೊಂಡಿತು.
ತರೆದಹಳ್ಳಿ ತಂಡ ದ್ವಿತೀಯ (₹12,001), ಹುಬ್ಬಳ್ಳಿ ತಂಡ ತೃತೀಯ (₹8,001) ಹಾಗೂ ಆತಿಥೇಯ ಯತ್ತಿನಹಳ್ಳಿ ಎಂಕೆ ಬ್ರಹ್ಮಲಿಂಗೇಶ್ವರ ತಂಡ ಚತುರ್ಥ ಬಹುಮಾನ (5001) ಪಡೆದವು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಪಿ ಹಾಗೂ ನಗದು ವಿತರಿಸಲಾಯಿತು.
ಇದಕ್ಕೂ ಮೊದಲು ಟೂರ್ನಿ ಉದ್ಘಾಟಿಸಿದ ಶಿವಮೂರ್ತೆಪ್ಪ ಬಣಕಾರ ಮಾತನಾಡಿ, ಇಂದಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಲು ಇಂತಹ ಪಂದ್ಯಾವಳಿಗಳು ಸಹಕಾರಿಯಾಗಲಿವೆ ಎಂದರು.
ಈ ವೇಳೆ ಭರಮಗೌಡ ಸಣ್ಣಕ್ಕಿ, ಮಲ್ಲೇಶಪ್ಪ ಸಾತೇನಹಳ್ಳಿ, ಚನ್ನಪ್ಪ ಹಾಲಿಕಟ್ಟಿ, ಮಲ್ಲಪ್ಪ ಮುಚುಡಿ, ಕೆಂಚಪ್ಪ ಹಾರೋಮುಚುಡಿ, ಮಿಯಾಸಾಬ್, ಓಮನಗೌಡ ಸಣ್ಣಕ್ಕಿ ಗ್ರಾಮಸ್ಥರು ಇದ್ದರು.