ಮಂಗಳವಾರ, ಆಗಸ್ಟ್ 3, 2021
21 °C
ಜಿಲ್ಲೆಯಲ್ಲಿ 181ಕ್ಕೆ ಏರಿಕೆಯಾದ ಪ್ರಕರಣಗಳು: ಅಮ್ಮ–ಮಗಳಿಗೂ ಹರಡಿದ ಸೋಂಕು

ಕಾನ್‌ಸ್ಟೆಬಲ್‌ ಸೇರಿ 6 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಬಾಣಂತಿ, ಪೊಲೀಸ್ ಕಾನ್‍ಸ್ಟೆಬಲ್‌, ಖಾಸಗಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಸೇರಿ ಆರು ಮಂದಿಗೆ ಮಂಗಳವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 181 ಪಾಸಿಟಿವ್ ಪ್ರಕರಣ ದೃಢಗೊಂಡಿವೆ. 58 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ. 121 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.

ಹಾವೇರಿ ಶಿವಾಜಿನಗರ ಮೂರನೇ ಕ್ರಾಸ್‍ನ ಎರಡು ವರ್ಷದ ಹೆಣ್ಣು ಮಗು (ಎಚ್‌ವಿಆರ್‌ -176) ಹಾಗೂ 32 ವರ್ಷದ ಮಹಿಳೆ (ಎಚ್‌ವಿಆರ್‌ -177), ಅಶ್ವಿನಿ ನಗರದ 32 ವರ್ಷದ ಪುರುಷ (ಎಚ್‌ವಿಆರ್‌-178), ಹಾನಗಲ್ ತಾಲ್ಲೂಕಿನ ಜಾನಗುಂಡಿಕೊಪ್ಪದ 30 ವರ್ಷದ ಬಾಣಂತಿ (ಎಚ್‌ವಿಆರ್‌ -179), ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸವಣೂರ ತಾಲ್ಲೂಕು ಕುಣಿಮೆಳ್ಳಿಹಳ್ಳಿ ಗ್ರಾಮದ 38 ವರ್ಷದ ಪೊಲೀಸ್ ಕಾನ್‍ಸ್ಟೆಬಲ್‌ (ಎಚ್‌ವಿಆರ್‌ -180) ಹಾಗೂ ಹಾವೇರಿ ಅಶ್ವಿನಿ ನಗರದ ನಿವಾಸಿಯಾದ 23 ವರ್ಷದ ಖಾಸಗಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಮಹಿಳೆಗೆ (ಎಚ್‌ವಿಆರ್‌ -181) ಕೋವಿಡ್ ಸೋಂಕು ದೃಢಗೊಂಡಿದೆ.

ಪ್ರವಾಸ ಹಿನ್ನೆಲೆ:

ಶಿವಾಜಿನಗರದ 32 ವರ್ಷದ (ಎಚ್‌ವಿಆರ್‌-177) ಮಹಿಳೆ ತನ್ನ ಎರಡು ವರ್ಷದ (ಎಚ್‌ವಿಆರ್‌-176) ಮಗಳೊಂದಿಗೆ ಜೂನ್ 9 ರಿಂದ 28ರವರೆಗೆ ಬಳ್ಳಾರಿ ಜಿಲ್ಲೆ ಹೊಸಪೇಟೆಯ ತನ್ನ ತಂದೆ ಮನೆಗೆ ಬೇಸಿಗೆ ರಜೆ ಕಳೆಯಲು ತೆರಳಿದ್ದು, ಜೂನ್ 28ರಂದು ಮರಳಿ ಹಾವೇರಿಗೆ ಬಂದಿರುತ್ತಾರೆ. ಜೂನ್ 30 ರಂದು ತನ್ನ ತಂದೆಗೆ ಬಳ್ಳಾರಿಯಲ್ಲಿ ಕೋವಿಡ್ ಪಾಸಿಟಿವ್ ಎಂದು ವರದಿ ಬಂದ ಕಾರಣ ಜುಲೈ 3ರಂದು ಹಾವೇರಿಯಲ್ಲಿ ಮಗಳೊಂದಿಗೆ ಕೋವಿಡ್ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದಾರೆ. ಜುಲೈ 6ರಂದು ಮಧ್ಯರಾತ್ರಿ ತಾಯಿ ಮಗಳಿಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದೆ. 

ಹಾವೇರಿ ಅಶ್ವಿನಿ ನಗರದ 1ನೇ ಕ್ರಾಸ್‍ನ 32 ವರ್ಷದ (ಎಚ್‌ವಿಆರ್‌-178) ಪುರುಷ ಐ.ಎಲ್.ಐ. ಲಕ್ಷಣಗಳ ಕಾರಣ ಗಂಟಲು ದ್ರವ ಪರೀಕ್ಷೆಗೆ ಕೋರಿಕೊಂಡಾಗ ಜುಲೈ 4ರಂದು ಪ್ರಯೋಗಾಲಯಕ್ಕೆ ವರದಿ ಕಳುಹಿಸಿದ್ದು, ಜುಲೈ 6ರಂದು ಪಾಸಿಟಿವ್ ವರದಿ ಬಂದಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈತನ ಪ್ರಾಥಮಿಕ ಸಂಪರ್ಕಿತರನ್ನಾಗಿ ನಾಲ್ಕು ಜನ ಹಾಗೂ ದ್ವಿತೀಯ ಸಂಪರ್ಕಿತರನ್ನಾಗಿ ಆರು ಜನರನ್ನು ಗುರುತಿಸಿ ಎಲ್ಲರನ್ನೂ ಗೃಹಪ್ರತ್ಯೇಕತೆಯಲ್ಲಿ ಇರಿಸಲಾಗಿದೆ.

ಸದರಿ ಸೋಂಕಿತರ ನಿವಾಸದ 100 ಮೀ. ಪ್ರದೇಶವನ್ನು ಕಂಟೈನ್‍ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ. ನಗರದ ಪ್ರದೇಶದಲ್ಲಿ ವಾಸಿಸುವ ಸೋಂಕಿತರ ನಿವಾಸದ 200 ಮೀಟರ್ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶವಾದ ಕುಣಿಮೆಳ್ಳಿಹಳ್ಳಿ ಗ್ರಾಮವನ್ನು ಸಂಪೂರ್ಣವಾಗಿ ಬಫರ್ ಜೋನ್ ಆಗಿ ಪರಿಗಣಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಆಯಾ ತಾಲ್ಲೂಕು ತಹಶೀಲ್ದಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.