ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಕಾಪುರ: ಕಾಯಕಲ್ಪಕ್ಕೆ ಕಾದಿವೆ ಉದ್ಯಾನ

ನಿರ್ವಹಣೆ ಕೊರತೆ: ತುಕ್ಕುಹಿಡಿದ ಆಟದ ಸಾಮಗ್ರಿ: ಸಾರ್ವಜನಿಕರ ಆಕ್ರೋಶ
ಎಂ.ವಿ.ಗಾಡದ, ಶಿಗ್ಗಾವಿ
Published 5 ಫೆಬ್ರುವರಿ 2024, 6:07 IST
Last Updated 5 ಫೆಬ್ರುವರಿ 2024, 6:07 IST
ಅಕ್ಷರ ಗಾತ್ರ

ಶಿಗ್ಗಾವಿ: ಆರೋಗ್ಯಕರ ವಾತಾವರಣಕ್ಕೆ ಅನುಕೂಲವಾಗಲು ನಗರ, ಪಟ್ಟಣಗಳಲ್ಲಿ ಉದ್ಯಾನಗಳನ್ನು ತೆರೆಯುತ್ತಾರೆ. ಆದರೆ, ಕೆಲವೆಡೆ ನಿರ್ವಹಣೆ ಮಾಡುವುದಿಲ್ಲ. ಈಗ ಇದೇ ಪರಿಸ್ಥಿತಿ ಬಂಕಾಪುರ ಪಟ್ಟಣದ ಉದ್ಯಾನಕ್ಕಿದ್ದು, ನಿರ್ವಹಣೆ ಕೊರತೆಯಿಂದ ಸಂಪೂರ್ಣ ಹಾಳಾಗಿ ಹೋಗಿದೆ.

30 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಬಂಕಾಪುರ ಪಟ್ಟಣದಲ್ಲಿ ಜನರ ವಾಯುವಿಹಾರಕ್ಕೆ ಸರಿಯಾದ ಉದ್ಯಾನಗಳಿಲ್ಲ. ಇರುವ ಉದ್ಯಾನಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯ ಉದ್ಯಾನವು ನಿರ್ವಹಣೆ ಕೊರತೆಯಿಂದ ಹಾಳು ಕೊಂಪೆಯಂತಾಗಿದೆ. ಕಸ, ಮುಳ್ಳಿನ ಗಿಡಗಂಟಿಗಳು ಬೆಳೆದುಕೊಂಡಿವೆ. ಉದ್ಯಾನದಲ್ಲಿನ ಮಕ್ಕಳ ಆಟದ ಸಾಮಗ್ರಿಗಳು ತುಕ್ಕು ಹಿಡಿದು ಹಾಳಾಗಿವೆ. ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದೆ.

ಉದ್ಯಾನದಲ್ಲಿ ಕಸ ಬೆಳೆದಿರುವುದರಿಂದ ವಿಷಜಂತುಗಳ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಈ ಭಯದಿಂದ ಹಾಗೂ ಇಲ್ಲಿ ಮೂಲ ಸೌಕರ್ಯಗಳ ಅಭಾವದಿಂದ ಇಲ್ಲಿಗೆ ಬರಲು ಬಹುತೇಕ ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರಾದ ಚಂದ್ರಗೌಡ ಕರೆಗೌಡ್ರ.

ಬಂಕಾಪುರ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯ ಉದ್ಯಾನದಲ್ಲಿನ ಆಟದ ಸಾಮಗ್ರಿಗಳು ತುಕ್ಕು ಹಿಡಿದು ಹಾಳಾಗಿರುವುದು
ಬಂಕಾಪುರ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯ ಉದ್ಯಾನದಲ್ಲಿನ ಆಟದ ಸಾಮಗ್ರಿಗಳು ತುಕ್ಕು ಹಿಡಿದು ಹಾಳಾಗಿರುವುದು

ಪಟ್ಟಣದಲ್ಲಿ ವಯೋವೃದ್ಧರು ವಿಶ್ರಾಂತಿ ಪಡೆಯಲುಮ ವಾಯುವಿಹಾರಕ್ಕೆ ಉತ್ತಮವಾದ ಸ್ಥಳಗಳಿಲ್ಲ. ಹೀಗಾಗಿ ಜನರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿಯೇ ವಾಯುವಿಹಾರ ಮಾಡುವಂತಾಗಿದೆ. ಈ ಕುರಿತು ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳಿಗೆ ಲಿಖಿತವಾಗಿ, ಮೌಖಿಕವಾಗಿ ಮನವಿ ಮಾಡಲಾಗಿದೆ. ಆದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅಧಿಕಾರಗಳ ನಿರ್ಲಕ್ಷ್ಯ
ಪಟ್ಟಣವು ಜನಸಂಖ್ಯೆ ತಕ್ಕಂತೆ ಅಭಿವೃದ್ಧಿ ಕಂಡಿಲ್ಲ. ಉದ್ಯಾನಗಳು ಬಳಕೆಗೆ ಯೋಗ್ಯವಾಗಿರದೆ ಹಾಳುಬೀಳುವಂತಾಗಿವೆ. ಇದಕ್ಕೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ನಿರ್ಲಕ್ಷ್ಯವೇ ಕಾರಣವಾಗಿದೆ. ತಕ್ಷಣ ಪಟ್ಟಣದಲ್ಲಿರುವ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಇಲ್ಲಿನ ನಿವಾಸಿ ಚನ್ನುಕುಮಾರ ದೇಸಾಯಿ ಆಗ್ರಹಿಸಿದ್ದಾರೆ.
ಚನ್ನುಕುಮಾರ ದೇಸಾಯಿ ಸ್ಥಳೀಯ ನಿವಾಸಿ
ಚನ್ನುಕುಮಾರ ದೇಸಾಯಿ ಸ್ಥಳೀಯ ನಿವಾಸಿ
ಅನುದಾನ ಬೇರೆ ಕಾಮಗಾರಿಗೆ ಬಳಕೆ!
ಪುರಸಭೆ ಅಮೃತ 2.0 ಯೋಜನೆಯಡಿ ಉದ್ಯಾನದ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನವು ಬೇರೆ ಕಾಮಗಾರಿಗೆ ಬಳಕೆಯಾಗಿದೆ. ಹೀಗಾಗಿ ಪಟ್ಟಣದಲ್ಲಿ ಸುಮಾರು 10ರಿಂದ 15 ಹೊಸ ಲೇಔಟ್‌ಗಳು ಆರಂಭವಾಗಿವೆ. ಅವುಗಳಿಂದ ಸುಮಾರು 60ರಿಂದ 70 ಲಕ್ಷದ ವರೆಗೆ ವಂತಿಗೆ ಹಣ ಪಡೆದಿದ್ದಾರೆ. ಸರ್ಕಾರವು ಟೌನ್ ಪ್ಲ್ಯಾನ್ ನೀಡುವ ಸಂದರ್ಭದಲ್ಲಿ ಇವುಗಳ ಬಗ್ಗೆ ಗಮನ ಹರಿಸಬೇಕು. ಪ್ರತಿ ಉದ್ಯಾನದ ಹತ್ತಿರ ಅಂಗನವಾಡಿಗಳನ್ನು ತೆರೆದು ಆರೋಗ್ಯಕರ ವಾತಾವರಣ ಮೂಡಿಸಬೇಕು ಎನ್ನುತ್ತಾರೆ ಪುರಸಭೆ ಸದಸ್ಯ ಎಂ.ಎಂ.ಖಾಜಿ.
ಎಂ.ಎಂ.ಖಾಜಿ ಪುರಸಭೆ ಸದಸ್ಯ
ಎಂ.ಎಂ.ಖಾಜಿ ಪುರಸಭೆ ಸದಸ್ಯ
ಎ.ಶಿವಪ್ಪ ಪುರಸಭೆ ಮುಖ್ಯಾಧಿಕಾರಿ ಬಂಕಾಪುರ
ಎ.ಶಿವಪ್ಪ ಪುರಸಭೆ ಮುಖ್ಯಾಧಿಕಾರಿ ಬಂಕಾಪುರ
ಅಭಿವೃದ್ಧಿಗೆ ಶೀಘ್ರ ಕ್ರಮ
ಉದ್ಯಾನಗಳು ಎಲ್ಲರಿಗೂ ಅವಶ್ಯಕ. ಆರೋಗ್ಯಕರವಾಗಿ ಬದುಕಲು ಉದ್ಯಾನಗಳು ಬೇಕೇ ಬೇಕು. ಮಕ್ಕಳು ಆಟವಾಡಲು, ಯುವಕ– ಯುವತಿಯರು, ವಯಸ್ಕರು, ವಯೋವೃದ್ಧರು ವಾಯುವಿಹಾರ ಮಾಡಲು, ಕುಳಿತು  ವಿಶ್ರಾಂತಿ ಪಡೆಯಲು ಉದ್ಯಾನಗಳು ಸಹಕಾರಿಯಾಗಿವೆ. ಮುಂದಿನ ದಿನಗಳಲ್ಲಿ ಪುರಸಭೆಯ ಅನುದಾನ ಬಳಸಿಕೊಂಡು ಹಂತಹಂತವಾಗಿ ಪಟ್ಟಣದ ಉದ್ಯಾನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಹೆಚ್ಚಿನ ಗಮನ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎ.ಶಿವಪ್ಪ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT