ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ನಿರ್ವಹಣೆ ಕೊರತೆ; ನೀರಿನ ಘಟಕ ಸ್ಥಗಿತ

ಅಶುದ್ಧ ನೀರಿನ ಸೇವನೆಯಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Last Updated 25 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ತಿಳವಳ್ಳಿ:ಅಧಿಕಾರಿಗಳು, ಟೆಂಡರ್‌ದಾರರ ನಿರ್ಲಕ್ಷ್ಯ ಮತ್ತು ಅಸಮರ್ಪಕ ನಿರ್ವಹಣೆಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸದೇ ದುಸ್ಥಿತಿಯಲ್ಲಿವೆ. ಹೀಗಾಗಿ, ಜನರ ಪಾಲಿಗೆ ಇದ್ದೂ ಇಲ್ಲದಂತಾಗಿವೆ.

ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದಿಂದ ಸರ್ಕಾರ ತಿಳವಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯಡಿ ಟೆಂಡರ್ ಮೂಲಕ ಪ್ರತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.

ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಶುದ್ಧ ನೀರು ಕುಡಿದು ರೋಗ ಮುಕ್ತ ಜೀವನ ಸಾಗಿಸುವಂತೆ ಗ್ರಾಮೀಣ ಭಾಗಗಳಲ್ಲಿ ಡಂಗುರ ಸಾರಿ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಸರ್ಕಾರ ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಿಕೊಟ್ಟರೂ, ಅಸಮರ್ಪಕವಾಗಿ ನಿರ್ವಹಣೆ ಮಾಡುತ್ತಿರುವ ಖಾಸಗಿ ಕಂಪನಿಗಳ ವಿರುದ್ಧ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

ರೋಗ ಭೀತಿಯಲ್ಲಿ ಜನರು: ‘ದೇಶದಾದ್ಯಂತ ಕೊರೊನಾ ವೈರಸ್‌ ತಲ್ಲಣ ಮೂಡಿಸುತ್ತಿದೆ. ಇದರಿಂದ ಕೇಂದ್ರ ಸರ್ಕಾರವು ದೇಶದ ಜನತೆಗೆ ಶುದ್ಧ ನೀರನ್ನು ಕುಡಿಯಿರಿ ಮತ್ತು ಗ್ರಾಮೀಣ ಭಾಗದ ಜನತೆಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಿ ಕೊಡಬೇಕೆಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ರಾಜ್ಯ ಸರ್ಕಾರ ಮತ್ತು ಸ್ಥಳೀಯ ಗ್ರಾಮ ಪಂಚಾಯ್ತಿಗಳು ಶುದ್ಧ ನೀರಿನ ಘಟಕಗಳನ್ನು ರಿಪೇರಿ ಮಾಡದೇ ಇರುವುದು ದುರದೃಷ್ಟಕರ. ನೀರನ್ನು ಶುದ್ಧೀಕರಿಸದೆ ಕುಡಿದ ಪರಿಣಾಮವಾಗಿ ಸ್ಥಳೀಯರಲ್ಲಿ ಮೂತ್ರ ಪಿಂಡ ರೋಗ, ಇನ್ನುಳಿದ ಸಾಂಕ್ರಾಮಿಕ ರೋಗಗಳು ಉಂಟಾಗುತ್ತಿವೆ’ ಎಂದು ಹುಲ್ಲಗಡ್ಡಿ ಗ್ರಾಮದ ಚಂದ್ರಪ್ಪ ತಲ್ಲೂರ ತಮ್ಮ ಅಳಲು ತೋಡಿಕೊಂಡರು.

ಅಧಿಕಾರಿಗಳ ನಿರ್ಲಕ್ಷ್ಯ: ಕೆಲವು ಕಡೆ ಆರಂಭವಾದ ಎರಡು ತಿಂಗಳು ಮಾತ್ರ ನೀರಿನ ಘಟಕಗಳು ಕಾರ್ಯನಿರ್ವಹಿಸಿದವು. ಇನ್ನೂ ಕೆಲವು ಸ್ಥಾಪನೆಯಾದಾಗಿನಿಂದ ಇಂದಿನವರೆಗೂ ನೀರು ಪೂರೈಕೆ ಮಾಡದೆ ಅನುಪಯುಕ್ತವಾಗಿವೆ.ಈ ಬಗ್ಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಾಗಲಿ ಗಮನ ಹರಿಸಿಲ್ಲ. ನಿರ್ವಹಣೆ ಹೊಣೆ ಹೊತ್ತ ಖಾಸಗಿ ಕಂಪನಿಗಳ ಸಿಬ್ಬಂದಿ ಸ್ಥಳಕ್ಕೆ ಬಾರದಿರುವುದರಿಂದ ಸರ್ಕಾರದ ಕೋಟ್ಯಂತರ ಮೌಲ್ಯದ ಯಂತ್ರಗಳು ತುಕ್ಕು ಹಿಡಿಯುವಂತಾಗಿವೆ.

‘ಕೆಲವು ನೀರಿನ ಘಟಕಗಳು ಹಾಳಾಗಿದ್ದು, ಅವುಗಳನ್ನು ಕೂಡಲೇ ರಿಪೇರಿ ಮಾಡುವಂತೆ ಟೆಂಡರ್‌ ಪಡೆದ ಖಾಸಗಿ ಕಂಪನಿಗಳಿಗೆ ಸೂಚನೆ ನೀಡುತ್ತೇವೆ.ಜನರಿಗೆ ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳುತ್ತೇವೆ’ ಎಂದುಕೆಲವರಕೊಪ್ಪ ಗ್ರಾಮ ಪಂಚಾಯ್ತಿ ಪಿಡಿಒ ಅರವಿಂದ ದೇಸಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT