ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ, ವಿಶ್ವಾಸಗಳಿಂದ ಬದುಕಲು ಸಾಹಿತ್ಯ ಮಾರ್ಗದರ್ಶನವಾಗಲಿ: ಮಾನೆ

Last Updated 19 ಸೆಪ್ಟೆಂಬರ್ 2021, 16:39 IST
ಅಕ್ಷರ ಗಾತ್ರ

ಅಕ್ಕಿಆಲೂರ: ಕಾವ್ಯ ಹಾಗೂ ಜೀವನ ಸಂಬಂಧ ಬದುಕಿನ ಸಾರ್ಥಕತೆಗೆ ಸಹಕಾರಿಯಾಗುವಂತಿದ್ದರೆ ಸಮಾಜ ಸಮೃದ್ಧವಾದ ಸಾಂಸ್ಕøತಿಕ ನೆಲೆಯಲ್ಲಿ ಇರಲು ಸಾಧ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಹೇಳಿದರು.

ಶನಿವಾರ ಹಾನಗಲ್ ತಾಲ್ಲೂಕಿನ ನೀರಲಗಿ (ಎಂಎ) ಗ್ರಾಮದಲ್ಲಿ ನಡೆದ ಮಣಿಕಂಠ ಗೊದಮನಿ ಅವರ ಉರಿದೊಡಲ ಬೇಗೆ ಕವನ ಸಂಕಲನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಓದು ಹಾಗೂ ಜೀವನ ಪಥ ಒಂದೇ ಆಗಿರಬೇಕು. ಅನುಭವದ ಮಿತಿಯಲ್ಲಿ ನಮ್ಮ ಬರವಣಿಗೆ ಸಾಗಬೇಕು. ಪ್ರತಿಭೆ ಬೆಂಬಲಿಸಿದರೆ ಸೃಜನಶೀಲತೆ ಗಟ್ಟಿಯಾಗಿ ನಿಲ್ಲಬಲ್ಲದು. ಇರ್ಷೆ, ವೈಮನಸ್ಸು ಹೊಹಕಾಕಿ ಪ್ರೀತಿ, ವಿಶ್ವಾಸಗಳಿಂದ ಬದುಕಲು ಸಾಹಿತ್ಯ ಮಾರ್ಗದರ್ಶನವಾಗಬೇಕು. ಬಡತನ ಬದುಕಿಗೆ ಹಲವು ಪಾಠ ಕಲಿಸುತ್ತದೆ, ಆದರೆ ಬಡತನ ದೌರ್ಬಲ್ಯವಾಗಬಾರದು. ಆ ಮೂಲಕ ಹೊಸ ಜಗತ್ತು ಸೃಷ್ಟಿಸಿಕೊಳ್ಳುವ ಇಚ್ಛಾಶಕ್ತಿ ಹೊಂದಬೇಕು ಎಂದರು.

ಕವನ ಸಂಕಲನ ಲೋಕಾರ್ಪಣೆಗೊಳಿಸಿದ ಸಾಹಿತಿ ಸತೀಶ್ ಕುಲಕರ್ಣಿ ಮಾತನಾಡಿ, ಬರಹ ಮತ್ತು ಇರುವು ಒಂದೇ ಆಗಿದ್ದರೆ ಆ ಬರಹ, ವ್ಯಕ್ತಿತ್ವಕ್ಕೆ ಹೊಳಪು ಸಿಗುತ್ತದೆ. ಬರಹಕ್ಕೆ ಲಯಬದ್ಧ ಭಾಷೆ ಅಗತ್ಯ. ಸಾಮಾಜಿಕ ಚಿಂತನೆಗಳು ಕೃತಿಯನ್ನು ಎತ್ತರಕ್ಕೇರಿಸಬಲ್ಲವು. ಬರವಣಿಗೆಯ ಮೂಲಕ ಪುಸ್ತಕ ಹಾಗೂ ಕವಿಗೆ ಬೆಲೆ ಬರುವಂತಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬರಹಗಳು ಪ್ರಕಟವಾದರೂ ಪುಸ್ತಕ ರೂಪದಲ್ಲಿ ಕಾವ್ಯ ದಾಖಲಾದರೆ ಅದಕ್ಕೊಂದು ವಿಶೇಷ ಮಾನ್ಯತೆ ಸಿಗಲಿದೆ ಎಂದರು.

ಸಾಹಿತಿ ಪ್ರೊ.ಮಾರುತಿ ಶಿಡ್ಲಾಪುರ ಮಾತನಾಡಿ, ಕಾವ್ಯ ಒಂದು ಮನಸ್ಥಿತಿ. ಸಮಾಜದ ಓರೆ-ಕೋರೆ, ಬದುಕು-ಬವಣೆ, ಆಗು-ಹೋಗು ಇವುಗಳ ವಾಸ್ತವ ದಾಖಲೀಕರಣ. ಸೃಜನಶೀಲ ಬರಹಗಾರನಿಗೆ ಮುಕ್ತವಾದ ದೃಷ್ಟಿ ಬೇಕು. ನಿಷ್ಕಲ್ಮಷ ಭಾವನೆಗಳಿರಬೇಕು. ತನ್ನೊಳಗೆ ಈ ಸಮಾಜದ ಕಳಕಳಿ ಇರಬೇಕು. ಕಾವ್ಯ ಹಾಗೂ ಇತರ ಬರಹಗಳಿಗೆ ಉತ್ತಮ ಬೆಂಬಲ ನೀಡಿ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಮುಕ್ತವಾಗಿ ಬೆಂಬಲಿಸುವರ ಅಗತ್ಯವಿದೆ. ಸಾಹಿತ್ಯ ರಾಜಕಾರಣ ಸಾಕು, ಸಾತ್ವಿಕ, ಸಮಾಜಮುಖಿ ಬರಹ ಹಾಗೂ ಬೆಂಬಲ ಬೇಕು ಎಂದರು.

ಚನ್ನವೀರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಮಣಿಕಂಠ ಗೊದಮನಿ, ವೀಣಾ ಬನ್ನಿಮಟ್ಟಿ, ಪುಟ್ಟಪ್ಪ ಗೊದಮನಿ, ಕಮಲವ್ವ ಮಾಳಗಿಮನಿ, ಚಂದ್ರಪ್ಪ ಜಾಲಗಾರ, ರಮೇಶ್ ಶೇತಸನದಿ, ಪುಟ್ಟಪ್ಪ ನರೇಗಲ್, ನಾಗರಾಜ್ ದೊಡ್ಡಮನಿ, ಎಫ್.ಸಿ. ಕಾಡಪ್ಪನವರ, ಅಶೋಕ ಹೊಸಮನಿ, ಎಂ.ಎಫ್.ಗುಡಿಮನಿ, ಜಿ.ಎಸ್. ಚಂದ್ರಮ್ಮನವರ, ವಿ.ಎಸ್. ದೊಡ್ಡಮನಿ, ಎಂ.ಎಂ. ಮಲ್ಲೂರ, ಆನಂದ ಗ್ವಾಡಿಹಾಳ, ಅಜಿತ್‌ಜೈನರ್, ಮಹಾಬಳೇಶ್ವರಯ್ಯ ಚಿಕ್ಕಮಠ, ಚಂದ್ರಶೇಖರ ದೇವಗಿರಿ, ಶಂಭುಲಿಂಗ ಚಲ್ಲಾಳ, ಸುರೇಶ್ ಗೊದಮನಿ, ಈಶ್ವರ ಚೌಟಿ, ಸಂಕಪ್ಪ ದೊಡ್ಡಮನಿ, ಜಾಯೀದಾಬಾನು ಹುಲಿಕಟ್ಟಿ, ನಿರ್ಮಲವ್ವ ಜೈನರ್, ಫಕ್ಕೀರೇಶ್ ಜಾಡರ, ಚಂದ್ರಪ್ಪ ದೊಡ್ಡಮನಿ ಇದ್ದರು.

ಗಣೇಶ್ ಸಿಂಗಾಪೂರ ಪ್ರಾರ್ಥಿಸಿದರು. ಪ್ರಾಚಾರ್ಯ ಮಂಜುನಾಥ ಮರಿತಮ್ಮಣ್ಣನವರ ಪುಸ್ತಕ ಪರಿಚಯಿಸಿದರು. ಅಲ್ತಾಫ ಯತ್ನಳ್ಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT