ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls: ಮಾಜಿ ಸಿಎಂಗೆ ಒಲಿದ BJP ಟಿಕೆಟ್‌, ರಾಷ್ಟ್ರ ರಾಜಕಾರಣದತ್ತ ಬೊಮ್ಮಾಯಿ

ಹಾವೇರಿ–ಗದಗ ಲೋಕಸಭಾ ಕ್ಷೇತ್ರ: ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಬೊಮ್ಮಾಯಿ
Published 15 ಮಾರ್ಚ್ 2024, 4:52 IST
Last Updated 15 ಮಾರ್ಚ್ 2024, 4:52 IST
ಅಕ್ಷರ ಗಾತ್ರ

ಹಾವೇರಿ: ಶಿಗ್ಗಾವಿ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಜಯಗಳಿಸಿ, ಶಾಸಕನಿಂದ ಮುಖ್ಯಮಂತ್ರಿ ಹುದ್ದೆಯವರೆಗೂ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿ–ಗದಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಸಿಕ್ಕಿದೆ. 

ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿರುವ ಬೊಮ್ಮಾಯಿ ಅವರು ಎದುರಿಸುತ್ತಿರುವ ಮೊದಲನೇ ಲೋಕಸಭಾ ಚುನಾವಣೆ ಇದಾಗಿದೆ. ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಸಾಧನೆ ಹಾಗೂ ಶಿಗ್ಗಾವಿ –ಸವಣೂರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಗೆಲುವಿನತ್ತ ಕೊಂಡೊಯ್ಯುತ್ತವೆ ಎಂದು ಬಸವರಾಜ ಬೊಮ್ಮಾಯಿ ಬಲವಾಗಿ ನಂಬಿದ್ದಾರೆ. 

ಕಾಂಗ್ರೆಸ್‌ ಈಗಾಗಲೇ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಟಿಕೆಟ್‌ ನೀಡಿದೆ. ಹೀಗಾಗಿ ಲೋಕಸಭಾ ಚುನಾವಣಾ ಕಣದಲ್ಲಿ ಗಡ್ಡದೇವರ ಮಠ ಮತ್ತು ಬೊಮ್ಮಾಯಿ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂಬ ವಿಶ್ವಾಸದಲ್ಲಿದ್ದಾರೆ ಗಡ್ಡದೇವರಮಠ.  

ಗೆಲ್ಲಿಸುವ ವಿಶ್ವಾಸವಿದೆ: ‘ನರೇಂದ್ರ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿಯಾಗಿ ಮಾಡಿ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂಬ ಬಯಕೆ ದೇಶದಾದ್ಯಂತ ಇರುವಂತೆ ಹಾವೇರಿ ಗದಗ ಕ್ಷೇತ್ರದ ಜನರಲ್ಲಿಯೂ ಇದೆ. ಹೀಗಾಗಿ ನನ್ನನ್ನು ಅತ್ಯಂತ ಹೆಚ್ಚು ಮತದಿಂದ ಗೆಲ್ಲಿಸಿ ಕಳಿಸುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ
ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಬುಧವಾರ ಮಾಧ್ಯಮ ಗಳೊಂದಿಗೆ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಸುಮಾರು ಆರು ತಿಂಗಳಿಂದ ಆ ಕ್ಷೇತ್ರದಲ್ಲಿ ಓಡಾಡಿದ್ದಾರೆ‌. ನಾನು ಪಾರ್ಲಿಮೆಂಟರಿ ಬೋರ್ಡ್‌ನಲ್ಲಿ ಕಾಂತೇಶ್ ಅವರಿಗೆ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಟಿಕೆಟ್ ಕೊಡಬೇಕು ಎಂದು ಮನವಿ ಮಾಡಿದ್ದೆ. ಪಕ್ಷದ ರಾಷ್ಟ್ರೀಯ ನಾಯಕರು ಗೆಲುವಿನ ಲೆಕ್ಕಾಚಾರ ಇಟ್ಟುಕೊಂಡು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು. 

ಈಶ್ವರಪ್ಪ ಅವರು ಹಿರಿಯರಿದ್ದಾರೆ. ಪಕ್ಷ ಅವರಿಗೆ ಸೂಕ್ತ ಗೌರವ ನೀಡುತ್ತದೆ ಎನ್ನುವ ವಿಶ್ವಾಸ ಇದೆ. ಕುರುಬ ಸಮುದಾಯದೊಂದಿಗೆ ನನಗೆ ಉತ್ತಮ ಸಂಬಂಧವಿದೆ ಎಂದು ಹೇಳಿದರು.

ಒಳ ಹೊಡೆತ ಆಗುವುದಿಲ್ಲ: ರಾಜಕಾರಣದಲ್ಲಿ ಅನುಭವದ ಜೊತೆಗೆ ಹೊಸ ಯುವಕರಿಗೆ ಅವಕಾಶ ಕೊಡಬೇಕೆಂಬ ಕಾರಣದಿಂದ ಹೊಸ ಮುಖಗಳಿಗೆ ನೀಡಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಬೆಂಗಳೂರು ಉತ್ತರದಲ್ಲಿ ಸದಾನಂದಗೌಡರು ಸ್ಪರ್ಧಿಸಬೇಕೆಂಬುದು ಅಲ್ಲಿನ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಇತ್ತು. ಅವರು ಮತ್ತು ಈಶ್ವರಪ್ಪ ಅವರ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರು ಒಳ್ಳೆಯ ಅವಕಾಶ ನೀಡುವ ಸಾಧ್ಯತೆ ಇದೆ. ಜಗದೀಶ್ ಶೆಟ್ಟರ್ ಅವರು ನಮ್ಮ ಪಕ್ಷದ ನಾಯಕರು. ಪಕ್ಷದಲ್ಲಿ ಯಾವುದೇ ಒಳ ಹೊಡೆತ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಸವರಾಜ ಬೊಮ್ಮಾಯಿ ವ್ಯಕ್ತಿ ಪರಿಚಯ

ಬಸವರಾಜ ಬೊಮ್ಮಾಯಿ ಅವರು ಹು‌ಬ್ಬಳ್ಳಿಯಲ್ಲಿ 28–01–1960ರಂದು ಜನಿಸಿದರು. ಇವರ ತಂದೆ ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ ಹಾಗೂ ತಾಯಿ ಗಂಗಮ್ಮ ಎಸ್‌.ಬೊಮ್ಮಾಯಿ.  ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ರೋಟರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಹುಬ್ಬಳ್ಳಿಯಲ್ಲಿ ಪಡೆದರು. ನಂತರ ಪಿ.ಸಿ.ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿಯು ವ್ಯಾಸಂಗ ಮಾಡಿದರು. ಎಂಜಿನಿಯರಿಂಗ್‌ ಪದವಿಯನ್ನು (ಬಿ.ಇ. ಮೆಕ್ಯಾನಿಕಲ್‌) ಬಿ.ವಿ.ಭೂಮರಡ್ಡಿ ವಿಜ್ಞಾನ ತಾಂತ್ರಿಕ ಮಹಾವಿದ್ಯಾಲಯ ಹುಬ್ಬಳ್ಳಿಯಲ್ಲಿ ಪಡೆದರು.  1995ರಲ್ಲಿ ರಾಜ್ಯದ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು. 1996ರಿಂದ 1997ರವರೆಗೆ ಮುಖ್ಯಮಂತ್ರಿಯಾಗಿದ್ದ ಜೆ.ಎಚ್‌.ಪಟೇಲ್‌ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.  1997 ಹಾಗೂ 2003ರಲ್ಲಿ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ–ಹಾವೇರಿ–ಗದಗ) ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ಆಯ್ಕೆಯಾಗಿದ್ದಾರೆ. 2008ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ಕ್ಷೇತ್ರದಿಂದ ಆಯ್ಕೆಯಾದರು.  2008ರಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್‌. ಯಡಿಯೂರಪ್ಪ ಡಿ.ವಿ. ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್‌ ಸಚಿವ ಸಂಪುಟದಲ್ಲಿ ಐದು ವರ್ಷ ಜಲಸಂಪನ್ಮೂಲ ಸಚಿವರಾಗಿದ್ದರು. 2013ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾವಿ ಕ್ಷೇತ್ರದಿಂದ ದ್ವಿತೀಯ ಬಾರಿಗೆ ಆಯ್ಕೆಯಾದರು.  2018ರಲ್ಲಿ ಶಿಗ್ಗಾವಿ ಕ್ಷೇತ್ರದಿಂದ ಮೂರನೇ ಬಾರಿ ಆಯ್ಕೆಯಾಗಿ ಬಿ.ಎಸ್‌.ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಗೃಹ ಸಚಿವ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.   2021ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸ್ವೀಕರಿಸಿದರು. 2023ರಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಆಯ್ಕೆಯಾಗಿ ಶಾಸಕರಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT