ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭ ತರಲು ಯೋಜನೆ ರೂಪಿಸಿ

ಪರವಾನಗಿ ರಹಿತ ಖಾಸಗಿ ವಾಹನಗಳಿಗೆ ಕಡಿವಾಣ ಹಾಕಿ: ಸಚಿವ ಲಕ್ಷ್ಮಣ ಸವದಿ ಸೂಚನೆ
Last Updated 29 ಮೇ 2020, 13:27 IST
ಅಕ್ಷರ ಗಾತ್ರ

ಹಾವೇರಿ: ಕೋವಿಡ್ ಲಾಕ್‍ಡೌನ್ ಸಡಿಲಿಕೆ ನಂತರ ತ್ರೈಮಾಸಿಕ ಯೋಜನೆಗಳನ್ನು ರೂಪಿಸಿಕೊಂಡು ಸಾರಿಗೆ ನಷ್ಟವನ್ನು ಸರಿದೂಗಿಸಿ ಲಾಭ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಇಲಾಖಾ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಪ್ರತಿ ಮೂರು ತಿಂಗಳಿಗೊಮ್ಮೆ ಕ್ರಿಯಾ ಯೋಜನೆಗಳನ್ನು ಸಿದ್ಧ ಮಾಡಿಕೊಳ್ಳಬೇಕು. ಉತ್ತಮ ಸೇವೆ ಜೊತೆಗೆ ಸಾರಿಗೆ ನಷ್ಟ ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಯಾವ ಯಾವ ಮಾರ್ಗದಲ್ಲಿ ಸಾರಿಗೆ ಬಸ್‍ಗಳು ಓಡಾಡುತ್ತಿವೆ, ಯಾವ ಮಾರ್ಗಗಳು ಲಾಭದಾಯಕ, ಯಾವ ಮಾರ್ಗಗಳಲ್ಲಿ ನಷ್ಟ ಉಂಟಾಗುತ್ತಿದೆ, ಎಲ್ಲಿ ಹೆಚ್ಚುವರಿ ಬಸ್‍ಗಳು ಓಡಾಡುತ್ತವೆ ಎಂಬುದನ್ನು ವಿಭಾಗವಾರು ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಮಾರ್ಗಗಳಲ್ಲಿ ಲಾಭ ತರುವ ನಿಟ್ಟಿನಲ್ಲಿ ಯೋಜನೆಯನ್ನು ತಯಾರಿಸಿ. ಪ್ರತಿ ಮೂರು ತಿಂಗಳಿಗೊಮ್ಮೆ ಪ್ಲಾನ್‍ ಮಾಡಿ ಸ್ಥಳೀಯ ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕ್ರಮವಹಿಸಿ ಎಂದು ಸೂಚನೆ ನೀಡಿದರು.

ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಬೇಕು, ಸವಕಳಿ ವೆಚ್ಚವನ್ನು ಕಡಿಮೆ ಮಾಡಬೇಕು, ಆದಾಯ ಸೋರಿಕೆ ತಡೆಯಬೇಕು. ರಸ್ತೆ ಸಾರಿಗೆ ಸಂಸ್ಥೆಗಳಿಗೆ ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ಸ್ವಚ್ಛತೆ, ಸಮಯಕ್ಕೆ ಸರಿಯಾಗಿ ವಾಹನ ಓಡಿಸುವ ಕೆಲಸವನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ರದ್ದು ಮಾಡಿ:

ಸಾರಿಗೆ ಬಸ್ ನಿಲ್ದಾಣದ ಸಮೀಪ 500 ಮೀಟರ್ ವ್ಯಾಪ್ತಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು, ಇಳಿಸುವುದು ಹಾಗೂ ಸಾಮರ್ಥ್ಯಕ್ಕೆ ಮೀರಿ ಪ್ರಯಾಣಿಕರನ್ನು ಕರೆದೊಯ್ಯುವುದು, ಪರವಾನಗಿ ಪಡೆಯದೆ ಬಸ್, ಟ್ರ್ಯಾಕ್ಸ್, ಟೆಂಪೋ ಟ್ರಾವೆಲರ್ಸ್‌‌ ಓಡಾಟಕ್ಕೆ ಕಡಿವಾಣ ಹಾಕಬೇಕು. ಇಂತಹ ವಾಹನಗಳ ಪರಿವಾನಗಿಗಳನ್ನು ರದ್ದುಮಾಡಿ ಮೊಕದ್ದಮೆ ದಾಖಲಿಸಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ವಾಯವ್ಯ ಸಾರಿಗೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಮಾಡಿ ಇವುಗಳಿಗೆ ಕಡಿವಾಣ ಹಾಕಿದರೆ ನಷ್ಟ ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಸಚಿವರಿಗೆ ಮನವಿ:

ಸಂಸದರಾದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಅರುಣಕುಮಾರ ಗುತ್ತೂರ ಅವರು ತಮ್ಮ ಕ್ಷೇತ್ರದ ರಸ್ತೆ ಸಾರಿಗೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಗೂ ಬೇಡಿಕೆಗಳನ್ನು ಸಲ್ಲಿಸಿದರು.

ರಾಣೇಬೆನ್ನೂರು ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವನ್ನು ನಗರದ ಹೊರ ವಲಯಕ್ಕೆ ಸ್ಥಳಾಂತರಿಸಬೇಕು. ಸವಣೂರು ಬಸ್ ನಿಲ್ದಾಣ, ಗುತ್ತಲ ಬಸ್ ನಿಲ್ದಾಣ ನವೀಕರಣ, ಹಾವೇರಿ ಬಸ್ ನಿಲ್ದಾಣದ ವಿಸ್ತರಣೆ ಹಾಗೂ ಕದರಮಂಡಲಗಿಗೆ ಹೊಸ ಬಸ್ ನಿಲ್ದಾಣ ನಿರ್ಮಾಣ, ಸವಣೂರು ಹೊಸ ಬಸ್ ಡಿಪೋ, ಹಾವೇರಿ ಕೇಂದ್ರೀಯ ವಿದ್ಯಾಲಯ ಸೇರಿದಂತೆ ಜಿಲ್ಲೆಯ ಸಾರಿಗೆ ಸಂಪರ್ಕವಿಲ್ಲದ ಮಾರ್ಗಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವುದು, ಲಾಕ್‍ಡೌನ್ ಮುಗಿಯುವವರೆಗೂ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಟೋಲ್ ಫೀ ಸಂಗ್ರಹಿಸದಂತೆ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಸಾರಿಗೆ ಸಚಿವರ ಗಮನ ಸೆಳೆದರು.

ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಎಸ್.ಬಿ.ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿದ್ದರಾಜ ಕಲಕೋಟಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗ ಹಾಗೂ ಹುಬ್ಬಳ್ಳಿ ವಿಭಾಗದ ವಿವಿಧ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT