ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ದರ ಅಗ್ಗ; ಗ್ರಾಹಕರಿಗೆ ಸುಗ್ಗಿ

₹ 10ಕ್ಕೆ ಎರಡು ಕೆ.ಜಿ.ಟೊಮೆಟೊ, ಹಣ್ಣುಗಳ ದರ ಸ್ಥಿರ
Last Updated 6 ಫೆಬ್ರುವರಿ 2020, 12:41 IST
ಅಕ್ಷರ ಗಾತ್ರ

ಹಾವೇರಿ: ನಗರದ ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಇಳಿಕೆಯಾಗಿದ್ದು, ಗ್ರಾಹಕರ ಖರೀದಿ ಜೋರಾಗಿದೆ. ಹಣ್ಣುಗಳ ದರ ಸ್ಥಿರವಾಗಿದೆ.

ಮಾರುಕಟ್ಟೆಗೆ ಸ್ಥಳೀಯವಾಗಿ ರೈತರು ಬೆಳೆದ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿರುವುದರಿಂದ ಬೆಲೆ ಇಳಿಕೆಯಾಗಿದೆ. ಮುಂದಿನ ದಿನದಲ್ಲಿ ಅವುಗಳ ಬೆಲೆ ಸುಧಾರಿಸಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಹಿಂದಿನ ವರ್ಷ ನೆರೆಯಿಂದ ತರಕಾರಿ ಬೆಳೆ ಸಂಪೂರ್ಣ ಹಾಳಾಗಿತ್ತು. ಆಗ ಬೆಲೆ ಏರಿಕೆ ಕಂಡಿತ್ತು. ಈಗ ಮಾರುಕಟ್ಟೆಗೆ ಸ್ಥಳೀಯ ರೈತರು ಬೆಳೆದ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಅದರೊಟ್ಟಿಗೆ ಬೇರೆ ಬೇರೆ ಜಿಲ್ಲೆಯಿಂದಲೂ ಪೂರೈಕೆಯಾಗುತ್ತಿರುವುದಕ್ಕೆ ಬೆಲೆ ಇಳಿಕೆಯಾಗಿರಬಹುದು ಎಂದು ತರಕಾರಿ ವ್ಯಾಪಾರಿ ಮುರ್ನಾಸಾಬ್‌ ತಿಳಿಸಿದರು.

ನಗರದ ಮಾರುಕಟ್ಟೆಗೆ ಜಿಲ್ಲೆಯ ರೈತರು ಬೆಳೆದ ಟೊಮೆಟೊ ಆವಕವಾಗುತ್ತಿದೆ. ಅದರಿಂದಾಗಿ ಉತ್ತಮ ಗುಣಮಟ್ಟದ ಕೆ.ಜಿ. ಟೊಮೆಟೊಗೆ ₹10 ಇದೆ. ಇನ್ನೂ ಕೆಲವು ಕಡೆ ₹10ಕ್ಕೆ ಎರಡು ಕೆ.ಜಿ. ಮಾರಾಟ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದರು.

ಹಿಂದಿನ ವಾರ ಬೀನ್ಸ್ ಕೆ.ಜಿ.ಗೆ ₹ 40ರಂತೆ ಮಾರಾಟವಾಗುತ್ತಿತ್ತು. ಈ ವಾರ ₹ 30 ರಂತೆ ಮಾರಾಟ ಮಾಡಲಾಗುತ್ತಿದೆ. ಆಲೂಗಡ್ಡೆ ಬೆಲೆಯೂ ಇಳಿಕೆಯಾಗಿದ್ದು ₹ 30 ರಂತೆ ಮಾರಾಟವಾಗುತ್ತಿದೆ ಎಂದು ಅವರು ತಿಳಿಸಿದರು.

ಈರುಳ್ಳಿ ದರ ಸ್ಥಿರ:

ಹಿಂದಿನ ವಾರ ಕೆ.ಜಿ.ಗೆ ₹25 ರಿಂದ ₹40ರಂತೆ ಮಾರಾಟವಾಗುತ್ತಿದ್ದು ಅದೇ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಮುಂದಿನ ದಿನದಲ್ಲಿಯೂ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿ ಇಸ್ಮಾಯಿಲ್‌ ತಿಳಿಸಿದರು.

ಈ ವಾರ ಮಾರುಕಟ್ಟೆಯಲ್ಲಿ ಸೌತೆಕಾಯಿ ಕೆ.ಜಿ.ಗೆ ₹ 20, ಬದನೆಕಾಯಿ (ಮುಳಗಾಯಿ) ₹30, ಮೆಣಸಿನಕಾಯಿ ₹ 30, ಚವಳಿಕಾಯಿ ₹ 30, ಹೀರೇಕಾಯಿ ₹40, ಬೆಂಡೆಕಾಯಿ ₹ 40, ಹಾಗಲಕಾಯಿ ₹ 60, ಇದೆ. ಅಲ್ಲದೆ, ಕ್ಯಾರೆಟ್‌ ₹ 40, ಬೀಟ್‌ರೂಟ್‌ ₹30 ರಂತೆ ಮಾರಾಟವಾಗುತ್ತಿದೆ’ ಎಂದು ವ್ಯಾಪಾರಿ ತೌಸಿಫ್‌ ಮಾಹಿತಿ ನೀಡಿದರು.

‘ಹಣ್ಣಿನ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದೆ. ಹಿಂದಿನ ವಾರದ ಬೆಲೆಯಲ್ಲಿಯೇ ಮಾರಾಟವಾಗುತ್ತಿದೆ. ಸೇಬು ₹ 100ರಿಂದ ₹ 120, ದಾಳಿಂಬೆ ₹ 100 ರಿಂದ ₹80, ಜವಾರಿ ಕಿತ್ತಳೆ ₹ 100, ಮೂಸಂಬಿ ₹ 100, ಚಿಕ್ಕು (ಸಪೋಟಾ) ₹50, ಆರೆಂಜ್‌ ₹60, ಸ್ಟ್ರಾಬೆರಿ ಬಾಕ್ಸ್‌ಗೆ ₹ 60, ಕಿವಿ ಹಣ್ಣು ಬಾಕ್ಸ್‌ಗೆ ₹ 80ರಂತೆ ಮಾರಾಟವಾಗುತ್ತಿದೆ’ ಎಂದು ವ್ಯಾಪಾರಿ ಮಹಮ್ಮದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT