ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿ ಕಡಲೆಗೆ ಮುಗಿಬಿದ್ದ ಗ್ರಾಹಕರು

ನಗರದ ಮಾರುಕಟ್ಟೆಯಲ್ಲಿ ಹಣ್ಣುಗಳ ದರ ಸ್ಥಿರ
Last Updated 19 ಡಿಸೆಂಬರ್ 2019, 13:08 IST
ಅಕ್ಷರ ಗಾತ್ರ

ಹಾವೇರಿ: ನಗರದ ಮಾರುಕಟ್ಟೆಗೆ ಕಡಲೆ ಗಿಡಗಳ ಆವಕ ಪ್ರಮಾಣ ಹೆಚ್ಚಾಗಿದ್ದು, ಗ್ರಾಹಕರಿಂದ ಖರೀದಿ ಭರಾಟೆ ಜೋರಾಗಿದೆ. ಇತ್ತ ಹಣ್ಣಿನ ಮಾರುಕಟ್ಟೆಯಲ್ಲಿ ದರ ಸ್ಥಿರವಾಗಿದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗೆ ಹಸಿ ಕಡಲೆ ಗಿಡಗಳು ಬರುತ್ತವೆ. ಆರಂಭದಲ್ಲಿ ಬೆಲೆ ಸಹಜವಾಗಿಯೇ ದುಬಾರಿಯಾಗಿದೆ. ಡಿಸೆಂಬರ್ ಕೊನೆಯಲ್ಲಿ ಬೆಲೆ ಇಳಿಕೆಯಾಗುವ ಸಂಭವವಿದೆ ಎನ್ನುತ್ತಾರೆ ವ್ಯಾಪಾರಿಗಳು.

ಕೆ.ಜಿ. ಹಸಿ ಕಡಲೆ ಗಿಡಕ್ಕೆ ₹50 ಇದೆ. ಹಾವೇರಿ ಮಾರುಕಟ್ಟೆಗೆ ಧಾರವಾಡ, ಗದಗ ಹಾಗೂ ಸುತ್ತಲಿನ ಪ್ರದೇಶದಿಂದ ತರಲಾಗುತ್ತದೆ. ಅಲ್ಲಿಂದ ನಾವು ಹೆಚ್ಚಿನ ಬೆಲೆಗೆ ಖರೀದಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ₹30ರವರೆಗೆ ಮಾರಾಟವಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿ ಸೈಯದ್ ಹುಸೇನಸಾಬ್ ಹೇಳಿದರು.

ಹಾವೇರಿ, ಬಂಕಾಪುರ, ಶಿಗ್ಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈಗಾಗಲೇ ಬೆಳೆ ಬಂದಿದ್ದು, ಅವುಗಳು ಮಾರುಕಟ್ಟೆ ಶೀಘ್ರ ಬರಲಿದೆ ಎಂದು ಅವರು ವಿವರಿಸಿದರು.

ಹಿಂದಿನ ವಾರ ತರಕಾರಿ ಪೂರೈಕೆಯಲ್ಲಿ ವ್ಯತ್ಯಾಸವಾಗಿರುವುದರಿಂದ ಬೆಲೆ ಏರಿಕೆಯಾಗಿತ್ತು. ಈ ವಾರ ಬೇಡಿಕೆಗೆ ತಕ್ಕಂತೆ ತರಕಾರಿ ಪೂರೈಕೆ ಆಗುತ್ತಿರುವುದರಿಂದ ದರ ಸ್ಥಿರವಾಗಿದೆ. ಹೀರೇಕಾಯಿ, ಹಾಗಲಕಾಯಿ ಹಾಗೂ ಸೌತೆಕಾಯಿ ಮುಂದಿನ ದಿನದಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿ ತೌಸಿಫ್ ಕೋಣನತಂಬಗಿ ಹೇಳಿದರು.

ಈ ವಾರ ಮಾರುಕಟ್ಟೆಯಲ್ಲಿ ಕೆ.ಜಿ. ಟೊಮೆಟೊ ₹10 ರಂತೆ ಮಾರಾಟವಾಗುತ್ತಿದೆ. ಮುಂದಿನ ದಿನದಲ್ಲಿ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಹಿಂದಿನ ವಾರ ₹60 ರಂತೆ ಮಾರಾಟವಾಗುತ್ತಿದ್ದ ಹೀರೇಕಾಯಿ, ಸೌತೆಕಾಯಿ ಹಾಗೂ ಹಾಗಲಕಾಯಿ ಅದೇ ಬೆಲೆಯಲ್ಲಿ ಮಾರಾಟವಾಗುತ್ತಿದೆ ಕೆ.ಜಿ. ಚವಳಿಕಾಯಿ ₹60, ಕ್ಯಾರೆಟ್ ₹40, ಕ್ಯಾಬೇಜ್ ₹40, ಮೆಣಸು ₹30, ಬೆಂಡೆಕಾಯಿ ₹40, ಆಲೂಗಡ್ಡೆ ₹30 ಇದೆ ಎಂದು ಅಬ್ದುಲ್ ತಿಳಿಸಿದರು.

ಹಣ್ಣಿನ ಮಾರುಕಟ್ಟೆಯಲ್ಲಿ ಎಲ್ಲ ಹಣ್ಣುಗಳ ದರ ಸ್ಥಿರವಾಗಿದ್ದು, ಕಿತ್ತಳೆ ಹಣ್ಣಿನ ಬೆಲೆ ಇಳಿಕೆಯಾಗಿದೆ. ಮಳೆಯಿಂದ ಹೆಚ್ಚಿ ಪ್ರಮಾಣದಲ್ಲಿ ಕಿತ್ತಳೆ ಹಣ್ಣು ಆವಕವಾಗುತ್ತಿದೆ. ಅಲ್ಲದೆ, ಮಾರಾಟಕ್ಕೆಂದು ತಂದ ಹಣ್ಣು ಹಾಳಾಗುತ್ತಿರುವ ಕಾರಣ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ ಎಂದು ವ್ಯಾಪಾರಿ ಮೆಹಬೂಬಲಿ ದೇವಗಿರಿ ತಿಳಿಸಿದರು.

ಮಾರುಕಟ್ಟೆಯಲ್ಲಿ ಕೆ.ಜಿ. ಸೇಬು ಹಣ್ಣು ₹100, ಚಿಕ್ಕು ₹50, ದಾಳಿಂಬೆ ₹100, ದ್ರಾಕ್ಷಿ ₹100, ಮೂಸಂಬಿ ₹120 ರಿಂದ ₹100 ಇದೆ. ಡಜನ್ ಏಲಕ್ಕಿ ಬಾಳೆ ₹30 ಹಾಗೂ ಪಚ್ಚ ಬಾಳೆ ₹35 ಇದೆ ಎಂದು ವ್ಯಾಪಾರಿ ರಸೂಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT