ಸೋಮವಾರ, ಜೂನ್ 1, 2020
27 °C

ಹಾವೇರಿ: ಹುತಾತ್ಮರ ವೀರಸೌಧದಲ್ಲಿ ನೀರವ ಮೌನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಭಾರತದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಮೈಲಾರ ಮಹಾದೇವ, ತಿರಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ತ್ರಿವಳಿಗಳು ಜೀವ ಬಲಿದಾನ ಮಾಡಿದ ದಿನ. ಪ್ರತಿ ವರ್ಷ ಅತ್ಯಂತ ಹೃದಯ ಸ್ಪರ್ಶಿಯಾಗಿ ಅವರ ಸ್ಮರಣೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾದ ಕರಾಳ ನೆರಳಿನಿಂದಾಗಿ ವೀರಸೌಧದಲ್ಲಿ ನೀರವ ಮೌನ ಆವರಿಸಿತ್ತು.

ಸತತ 77 ವರ್ಷಗಳಿಂದ ಏಪ್ರಿಲ್‌ 1 ಅನ್ನು ಮೈಲಾರರ ಅನುಯಾಯಿಗಳು, ಜನಪ್ರತಿನಿಧಿಗಳು, ಸಮಾಜ ಸೇವಕರು ಹಾಗೂ ಸಾಹಿತಿ ಕಲಾವಿದರು ಪಾಲ್ಗೊಂಡು ಹುತಾತ್ಮರ ಸ್ಮರಣೆ ನಡೆಸಲಾಗುತ್ತಿತ್ತು. 

ಸಾವಿರಾರು ಅಭಿಮಾನಿಗಳು ಮುಕ್ತಿಧಾಮಕ್ಕೆ ಸ್ವಯಂ ಪ್ರೇರಣೆಯಿಂದ ಬಂದು ನೂರಾರು ಹಾರ ಹಾಕುವುದು, ಗದ್ದುಗೆಗೆ ಹೂವಿನ ಅಲಂಕಾರ ಮಾಡುವುದು, ಉಪನ್ಯಾಸ, ದೇಶ ಭಕ್ತಿಗೀತೆ, ಕವಿಗೋಷ್ಠಿ ಒಮ್ಮೊಮ್ಮೆ ನಾಟಕ ಪ್ರದರ್ಶನ ನಡೆಯುತ್ತಿದ್ದವು. ಏಳು ದಶಕಗಳ ಸುದೀರ್ಘ ಪರಂಪರೆಗೆ ಇದೇ ಮೊದಲ ಬಾರಿ ಅಡ್ಡಿಯಾಗಿದೆ ಎಂದು ಮೈಲಾರ ಮಹಾದೇವಪ್ಪನವರ ಟ್ರಸ್ಟ್‌ನ ಹಿರಿಯ ಸದಸ್ಯರಾದ ವಿ.ಎನ್‌. ತಿಪ್ಪನಗೌಡ ತಿಳಿಸಿದ್ದಾರೆ.  

ವೀರಸೌಧಕ್ಕೆ ಟ್ರಸ್ಟ್‌ ಸದಸ್ಯರಾದ ಸತೀಶ ಕುಲಕರ್ಣಿ, ಹಿರಿಯ ಸ್ವಾತಂತ್ರ್ಯ ಯೋಧ ಬ್ಯಾಡಗಿಯ ಷಡಕ್ಷರಪ್ಪ ಮಹಾರಾಜಪೇಟರ ಪುತ್ರ ಡಾ.ಜಗದೀಶ ಮಹಾರಾಜಪೇಟ, ವೀರಪ್ಪ ವಲ್ಟರ, ಪರಮೇಶಪ್ಪ ಮಡ್ಲೂರ ಹಾಗೂ ಅಲ್ಲಿಯೇ ಕೊರೊನಾ ಕರ್ತವ್ಯ ನಿರತ ಕಲಾವಿದ ಕರಿಯಪ್ಪ ಹಂಚಿನಮನಿ ಕೆಲವೇ ಕೆಲವರು ಸಮಾಧಿ ಸ್ಥಳದ ಹೊರಬಾಗಿಲಿಗೆ ಬರಿಗೈಯಿಂದ ಬಂದು ನಮಸ್ಕರಿಸಿ ಹೋದದ್ದು ಬಿಟ್ಟರೆ ಎಲ್ಲವೂ ನೀರವ ಮೌನದಲ್ಲಿ ಮುಳುಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು