ಸೋಮವಾರ, ನವೆಂಬರ್ 30, 2020
21 °C
ವರ್ಚುವಲ್‌ ಪ್ಲಾಟ್‌ಫಾರಂ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಾಲನೆ

ಮೆಡಿಕಲ್‌ ಕಾಲೇಜು ಶಂಕುಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಬಹು ನಿರೀಕ್ಷಿತ ಹಾವೇರಿ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡದ ಶಂಕುಸ್ಥಾಪನೆಯನ್ನು ವರ್ಚುವಲ್ ಪ್ಲಾಟ್ ಪಾರ್ಮ್ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನ.13ರಂದು ನೆರವೇರಿಸಲಿದ್ದಾರೆ.

ಸಂಜೆ 4.30 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭ ದೇವಗಿರಿ ಯಲ್ಲಾಪುರ ಗ್ರಾಮದ ವೈದ್ಯಕೀಯ ಕಾಲೇಜು ನಿವೇಶನದಲ್ಲಿ ಆಯೋಜಿಸಲಾಗಿದೆ. ಸ್ಥಳೀಯವಾಗಿ ಕಾರ್ಯಕ್ರಮದ ವೀಕ್ಷಣೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿನ ನಿವೇಶನದಲ್ಲಿ ಎಲ್.ಇ.ಡಿ. ಪರದೆ ಸೇರಿದಂತೆ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ 200 ಮಂದಿಗೆ ಸೀಮಿತಗೊಳಿಸಿ ಆಸನ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ ಪಾಲ್ಗೊಳ್ಳಲಿದ್ದಾರೆ. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಯು.ಬಿ.ಬಣಕಾರ, ಜಿ.ಪಂ.ಅಧ್ಯಕ್ಷ ಏಕನಾಥ ಬಾನುವಳ್ಳಿ, ಸಂಸದ ಶಿವಕುಮಾರ ಉದಾಸಿ, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಗಣ್ಯರು ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ ಇತರರು ಹಾಜರಿರಲಿದ್ದಾರೆ. 

478 ಕೋಟಿ ವೆಚ್ಚ: ನೂತನ ವೈದ್ಯಕೀಯ ಕಾಲೇಜು ಆರಂಭದಿಂದ ಜಿಲ್ಲೆಯಲ್ಲಿ ಉನ್ನತ ವೈದ್ಯಕೀಯ ಸೌಲಭ್ಯಗಳ ಜೊತೆಗೆ 890 ವೈದ್ಯಕೀಯ ಮತ್ತು ವೈದ್ಯಕೇತರ ಸಿಬ್ಬಂದಿ ಸೇವೆ ಜಿಲ್ಲೆಗೆ ದೊರಕಲಿದೆ. 2021-22ನೇ ಶೈಕ್ಷಣಿಕ ಸಾಲಿನಿಂದ ಕಾಲೇಜು ತರಗತಿಗಳು ಆರಂಭಿಸಲಾಗುವುದು. ಪ್ರತಿ ವರ್ಷ 150 ವೈದ್ಯಕೀಯ ವಿದ್ಯಾರ್ಥಿಗಳು ಪ್ರವೇಶಾವಕಾಶ ಕಲ್ಪಿಸಲಾಗುವುದು.

ಹಾವೇರಿ ವೈದ್ಯಕೀಯ ಕಾಲೇಜಿಗೆ ಈಗಾಗಲೇ 56.10 ಎಕರೆ ಜಮೀನನ್ನು ದೇವಗಿರಿ ಯಲ್ಲಾಪೂರದಲ್ಲಿ ಮಂಜೂರು ಮಾಡಲಾಗಿದೆ. ಈ ವಿಶಾಲ ಜಾಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ ₹478.75 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲಾಗುವುದು. ಈಗಾಗಲೇ ಸರ್ಕಾರ ₹37.23 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕಾಲೇಜಿನ ಉಸ್ತುವಾರಿಗೆ ಆಡಳಿತ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಕಟ್ಟಡ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶಂಕುಸ್ಥಾಪನೆ ನೆರವೇರಿದ ತಕ್ಷಣವೇ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ. 

ನಾಲ್ಕು ಅಂತಸ್ತು: ವೈದ್ಯಕೀಯ ಕಾಲೇಜಿನ ಮುಖ್ಯ ಕಟ್ಟಡವನ್ನು ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ವಿನ್ಯಾಸಗೊಳಿಸಲಾಗಿದ್ದು, 4.04 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿದೆ. 70 ಹಾಸಿಗೆಗಳ ಸಾಮರ್ಥ್ಯದ ಶಸ್ತ್ರಚಿಕಿತ್ಸಾ ಸಂಕೀರ್ಣ, ತುರ್ತು ನಿಗಾ ಘಟಕ ಹಾಗೂ ಆರ್ಥೋ ಘಟಕಗಳ ಸಂಕೀರ್ಣ ನಿರ್ಮಾಣಕ್ಕೆ ಯೋಜಿಸಲಾಗಿದೆ. 375 ವಿದ್ಯಾರ್ಥಿಗಳು ಹಾಗೂ 375 ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು.

ಎರಡನೇ ಹಂತದಲ್ಲಿ 1000 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಸೆಂಟರ್, ಟ್ರಾಮಾ ಸೆಂಟರ್ ಆರಂಭಕ್ಕೆ ಉದ್ದೇಶಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.