ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾತಂತ್ರದ ಮೌಲ್ಯ ಉಳಿಸಲು ಪ್ರಯತ್ನಿಸೋಣ: ಶಾಸಕ ಮಾನೆ

Published 6 ಅಕ್ಟೋಬರ್ 2023, 14:18 IST
Last Updated 6 ಅಕ್ಟೋಬರ್ 2023, 14:18 IST
ಅಕ್ಷರ ಗಾತ್ರ

ಅಕ್ಕಿಆಲೂರ: ಪ್ರಜಾತಂತ್ರ ವ್ಯವಸ್ಥೆಯನ್ನು ತಳ ಹಂತದಿಂದಲೇ ಗಟ್ಟಿಗೊಳಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮೌಲ್ಯಗಳನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ. ಶಾಲೆ, ಕಾಲೇಜು ಹಂತಗಳಿಂದಲೇ ವಿದ್ಯಾರ್ಥಿಗಳಿಗೆ ಸಂಸತ್ತಿನ ಪರಿಕಲ್ಪನೆ ನೀಡಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ ತಾಲ್ಲೂಕಿನ ಮಹರಾಜಪೇಟೆ ಗ್ರಾಮದ ಜವಾಹರ ನವೋದಯ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 25ನೇ ರಾಷ್ಟ್ರೀಯ ಯುವ ಸಂಸತ್ತು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನ ಕಾಲದಲ್ಲಿ ಅನುಭವ ಮಂಟಪದ ರೂಪದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದು, ಅಲ್ಲಮಪ್ರಭುಗಳು ಅದರ ಮುಖ್ಯಸ್ಥರಾಗಿದ್ದರು. ಸಂವಿಧಾನ ರಚನೆಗೂ ಮೊದಲೇ ಭಾರತದಲ್ಲಿ ಗಣತಂತ್ರ ವ್ಯವಸ್ಥೆ ಜಾರಿಯಲ್ಲಿತ್ತು. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡ ನಮ್ಮ ಸಂವಿಧಾನ ಆಧರಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ. ಪ್ರತಿಯೊಬ್ಬರಲ್ಲಿಯೂ ಸಂವಿಧಾನ ಮತ್ತು ಅದರ ಆಶಯಗಳ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಅತಿಥಿ, ಉತ್ತರ ಕನ್ನಡದ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ಅಶೋಕನ್ ಮಾತನಾಡಿ, ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು ಮತ್ತು ಕರ್ತವ್ಯಗಳ ಬಗೆಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಯುವ ಸಂಸತ್ತು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಶೇಖರಬಾಬು ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿಯ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ವಿ.ಅರವಿಂದ, ಉಪನ್ಯಾಸಕ ರವಿ ಗುಬ್ಬಚ್ಚಿ ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳು ಪ್ರದರ್ಶಿಸಿದ ಸಂಸತ್ತಿನ ಅಣಕು ಪ್ರದರ್ಶನ ಗಮನ ಸೆಳೆಯಿತು. ಸದಸ್ಯರ ಪ್ರಮಾಣ ವಚನ ಸ್ವೀಕಾರ, ಪ್ರಶ್ನೋತ್ತರ, ಕಲಾಪಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿ ಸೈ ಎನಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT