ಹಾವೇರಿ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಬಂದಿದ್ದ ಹಣವನ್ನು ಕೂಡಿಟ್ಟಿದ್ದ ಅತ್ತೆಯೊಬ್ಬರು, ಅದೇ ಹಣದಲ್ಲಿ ತಮ್ಮ ಸೊಸೆಗಾಗಿ ಫ್ಯಾನ್ಸಿ ಮಳಿಗೆ ತೆರೆದು ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ನೀರಲಗಿ ಗ್ರಾಮದ ದಾಕ್ಷಾಯಿಣಿ ಪಾಟೀಲ ಹಾಗೂ ಅವರ ಸೊಸೆ ಕುಮಾರಿ ಶಿವನಗೌಡ ಪಾಟೀಲ ಅವರ ಬಾಂಧವ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ, ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಹಣವನ್ನು ಬಳಸಿಕೊಂಡು ಸ್ವಾವಲಂಬಿಯಾಗಿ ಮಳಿಗೆ ಸ್ಥಾಪಿಸಿರುವ ಇಬ್ಬರ ಕೆಲಸಕ್ಕೂ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ 10 ಕಂತಿನಲ್ಲಿ ಬಂದಿದ್ದ ₹20 ಸಾವಿರ ಹಣವನ್ನು ದಾಕ್ಷಾಯಿಣಿ ಅವರು ಬ್ಯಾಂಕ್ ಖಾತೆಯಲ್ಲಿಯೇ ಕೂಡಿಟ್ಟಿದ್ದರು. ಯಾವುದಕ್ಕೂ ಹಣವನ್ನು ಖರ್ಚು ಮಾಡಿರಲಿಲ್ಲ. ಸ್ವಂತ ಉದ್ಯೋಗ ಆರಂಭಿಸಲು ಯೋಚಿಸಿದ್ದ ಸೊಸೆ ಕುಮಾರಿ, ‘ಬಳೆ ಹಾಗೂ ಇತರೆ ವಸ್ತುಗಳ ವ್ಯಾಪಾರ ಆರಂಭಿಸಲು ಫ್ಯಾನ್ಸಿ ಮಳಿಗೆ ತೆರೆಯಬೇಕು’ ಎಂದು ಅತ್ತೆಗೆ ಇತ್ತೀಚೆಗೆ ಹೇಳಿದ್ದರು.
ಸೊಸೆಯ ಆಸೆ ಈಡೇರಿಸಲು ಮುಂದಾದ ದಾಕ್ಷಾಯಿಣಿ, ಬ್ಯಾಂಕ್ ಖಾತೆಯಲ್ಲಿದ್ದ ₹20 ಸಾವಿರ ಹಣವನ್ನು ಮಳಿಗೆ ತೆರೆಯಲು ನೀಡಿದ್ದರು. ಅದೇ ಹಣದಲ್ಲಿ ಫ್ಯಾನ್ಸಿ ವಸ್ತುಗಳನ್ನು ಖರೀದಿಸಿದ್ದ ಸೊಸೆ, ತಮ್ಮ ಮನೆಯಲ್ಲಿಯೇ ಇದೀಗ ‘ಸ್ನೇಹಾ ಜನರಲ್ ಸ್ಟೋರ್ ಆ್ಯಂಡ್ ಬ್ಯಾಂಗಲ್ಸ್ ಸ್ಟೋರ್ಸ್’ ಮಳಿಗೆ ತೆರೆದು ವ್ಯಾಪಾರ ಆರಂಭಿಸಿದ್ದಾರೆ.
ಶ್ರಾವಣ ಮಾಸದ ಕಡೇ ಮಂಗಳವಾರದಂದು ಫ್ಯಾನ್ಸಿ ಮಳಿಗೆಯನ್ನು ವಿಶೇಷ ಪೂಜೆಯೊಂದಿಗೆ ಉದ್ಘಾಟಿಸಲಾಗಿದೆ. ಪಡಿತರ ಚೀಟಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕವನ್ನೂ ಪೂಜೆಗೆ ಇರಿಸಿ ನಮಿಸಲಾಗಿದೆ. ಮೊದಲ ದಿನವೇ ಗ್ರಾಮದ ಹಲವು ಮಹಿಳೆಯರು, ಮಳಿಗೆಗೆ ಬಂದು ಬಳೆ ಹಿಡಿಸಿಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಹಣವನ್ನು ಸದ್ಬಳಕೆ ಮಾಡಿಕೊಂಡ ಅತ್ತೆ–ಸೊಸೆ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.