ಸೋಮವಾರ, ಮೇ 17, 2021
31 °C

ಸಂಭ್ರಮದ ಮುಳ್ಳುಗದ್ದುಗೆ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಸಾವಿರಾರು ಭಕ್ತರ ಭಾವೈಕ್ಯ ಸಂಗಮದಂತಿರುವ ತಾಲ್ಲೂಕಿನ ಸುಕ್ಷೇತ್ರ ಹನುಮನಹಳ್ಳಿ ಗ್ರಾಮದ ಸದ್ಗುರು ಹಾಲಸ್ವಾಮಿ ಮಠದಲ್ಲಿ ವಾರ್ಷಿಕ ಜಾತ್ರೆ ಆರಂಭಗೊಂಡಿದ್ದು, ಶ್ರೀಮಠದ ಪ್ರಮುಖ ಆಚರಣೆಯಾಗಿರುವ ಮುಳ್ಳುಗದ್ದುಗೆ ಉತ್ಸವ ಗುರುವಾರ ರಾತ್ರಿ ಸಡಗರದಿಂದ ನಡೆಯಿತು.

ಕಳೆದ ಬಾರಿ ಕೊವಿಡ್ ಕಾರಣದಿಂದ ಜಾತ್ರೆಯು ಸ್ಥಗಿತಗೊಂಡಿತ್ತು. ಈ ಬಾರಿ ಶ್ರೀಮಠದ ಸಣ್ಣ ಹಾಲಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಶ್ರೀಗಳ ಮುಳ್ಳುಗದ್ದುಗೆ ಉತ್ಸವಕ್ಕೆ ಹಲಗಿ ಬಾರಿಸುವವರು, ಸಮಾಳ ಕಲಾ ತಂಡದವರು, ಡೊಳ್ಳು, ಕಂಸಾಳೆ ಹಾಗೂ ಲಂಬಾಣಿ ನೃತ್ಯ ತಂಡದವರು ಸಾಥ್ ನೀಡಿದರು.

ಸ್ವಾಮಿಗಳು ಕಳೆದ 9 ದಿನಗಳ ಉಪವಾಸ ವ್ರತ ಆಚರಣೆ ಮಾಡಿ ಗುರುವಾರ ಬೆಳಿಗ್ಗೆಯಿಂದ ತಪಸ್ಸನ್ನು ಆಚರಿಸಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಮಠದ ಆವರಣದಿಂದ ಆರಂಭವಾದ ಮೆರವಣಿಗೆಯು ಸತತ ಮೂರು ಗಂಟೆಗಳವರೆಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಬೆಳಗಿನ ಜಾವ ಮೂಲ ಸ್ಥಳಕ್ಕೆ ಆಗಮಿಸಿ ಸಂಪನ್ನಗೊಂಡಿತು.

ಮುಳ್ಳುಗದ್ದುಗೆ ಉತ್ಸವದಲ್ಲಿ ಸ್ಥಳೀಯರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಾದ ಕನವಳ್ಳಿ, ಕಾಟೆನಹಳ್ಳಿ, ಭರಡಿ, ಕೂರಗುಂದ, ಅಗಡಿ, ನೂಕಾಪುರ, ಕಂಚಾರಗಟ್ಟಿ, ಕೆಂಗೊಂಡ, ಕಳ್ಳಿಹಾಳ, ತಿಮ್ಮೇನಹಳ್ಳಿ, ಬಸಾಪುರ, ಬೂದಗಟ್ಟಿ, ಬಸವನಕಟ್ಟಿ, ಸೋಮನಕಟ್ಟಿ, ಅರಬಗೊಂಡ, ಕಲ್ಲೆದೇವರ, ಹನುಮಾಪುರ ಸೇರಿದಂತೆ ಜಿಲ್ಲೆಯ ವಿವಿಧಡೆಯಿಂದ ಭಕ್ತರು ಬಂದಿದ್ದರು. 

ಶ್ರೀ ಮಠದ ಸಿದ್ಧರಾಮ ಹಾಲಶಿವಯೋಗಿಗಳು, ಹಾಲ ಮುದುಕೇಶ್ವರ ಶ್ರೀಗಳು, ಶಂಭುಲಿಂಗ ಮಹಾಸ್ವಾಮಿಗಳು, ಅಭಿನವ ಹಾಲಶ್ರೀಗಳು, ಡೋಣಿ ಮಠದ ಮೌನ ಋಷಿ ಸ್ವಾಮೀಜಿ ಸೇರಿದಂತೆ ಹಿರೇಹಡಗಲಿ, ಸಂಕಧಾಳ, ರಾಂಪುರ, ಗುಂಡೇರಿ ಕ್ಷೇತ್ರಗಳ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.