ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಸಾಲಕ್ಕೆ ‘ಹೆಸರು’ ಸಮ: ಕೇಂದ್ರಕ್ಕೆ ಬಾರದ ರೈತರು

ರಾಜ್ಯ ಸರ್ಕಾರದ ಸೂಚನೆಯಂತೆ ಸವಣೂರಿನಲ್ಲಿ ತೆರೆದಿರುವ ಕೇಂದ್ರ: ವ್ಯಾ‍ಪಾರಿಗಳಿಗೆ ಹೆಸರು ಕಾಳು ಮಾರಾಟ
Published : 20 ಸೆಪ್ಟೆಂಬರ್ 2024, 5:21 IST
Last Updated : 20 ಸೆಪ್ಟೆಂಬರ್ 2024, 5:21 IST
ಫಾಲೋ ಮಾಡಿ
Comments

ಹಾವೇರಿ: ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಖರೀದಿಸಲು ರಾಜ್ಯ ಸರ್ಕಾರವು ಸವಣೂರು ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ತೆರೆದು ತಿಂಗಳಾಗಿದ್ದು, ಸಿಬ್ಬಂದಿಯನ್ನೂ ನಿಯೋಜಿಸಿದೆ. ಆದರೆ, ಈವರೆಗೆ ರೈತರು ಅತ್ತ ಸುಳಿದಿಲ್ಲ. 

ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ಸವಣೂರು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಸಹಯೋಗದಲ್ಲಿ ಸರ್ಕಾರಿ ಬೆಂಬಲ ಬೆಲೆಯ ಹೆಸರು ಕಾಳು ಖರೀದಿ ಕೇಂದ್ರ ತೆರೆಯಲಾಗಿದೆ.

‘ಅಕ್ಟೋಬರ್ 9ರ ವರೆಗೆ ರೈತರ ಹೆಸರು ನೋಂದಣಿಗೆ ಅವಕಾಶವಿದೆ. ಬಳಿಕ  ನವೆಂಬರ್ 25ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ. ಆದರೆ, ಈವರೆಗೆ ರೈತರು ಖರೀದಿ ಕೇಂದ್ರಕ್ಕೆ ಬಂದಿಲ್ಲ’ ಎಂದು ಕೇಂದ್ರದ ನಿರ್ವಹಣೆ ಹೊತ್ತ ಸಂಘದ ವ್ಯವಸ್ಥಾಪಕ ಸುರೇಶ ಕುರವತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಫ್ಎಕ್ಯೂ ಗುಣಮಟ್ಟದ ಹೆಸರುಕಾಳಿಗೆ ಪ್ರತಿ ಕ್ವಿಂಟಲ್‌ಗೆ ₹ 8,682 ದರ ನಿಗದಿಪಡಿಸಲಾಗಿದೆ. ಒಬ್ಬ ರೈತನಿಂದ ಗರಿಷ್ಠ 10 ಕ್ವಿಂಟಲ್ (ಪ್ರತಿ ಎಕರೆಗೆ 2 ಕ್ವಿಂಟಲ್) ಖರೀದಿಗೆ ಮಾತ್ರ ಅವಕಾಶವಿದೆ. ಜಿಲ್ಲೆಯಲ್ಲಿ ಮಳೆಯಿಂದ ಬಹುತೇಕ ಕಡೆ ಹೆಸರು ಬೆಳೆ ಹಾನಿಯಾಗಿದೆ. ಇಳುವರಿಯೂ ಕಡಿಮೆಯಾಗಿದೆ’ ಎಂದರು.

‘ಕೆಲ ವ್ಯಾಪಾರಿಗಳು ಮತ್ತು ಉದ್ಯಮಿಗಳು, ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ರೈತರಿಂದ ಹೆಸರುಕಾಳು ಖರೀದಿಸಿದ್ದಾರೆ. ಖರೀದಿ ಕೇಂದ್ರ ತೆರೆದಿರುವ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಹೆಚ್ಚು ಪ್ರಚಾರ ಮಾಡಿಲ್ಲ. ಹೀಗಾಗಿ, ರೈತರು ತಮಗೆ ಗೊತ್ತಿರುವ ವ್ಯಾಪಾರಿಗಳಿಗೆ ಹೆಸರುಕಾಳು ಮಾರಾಟ ಮಾಡುತ್ತಿತ್ತಾರೆ’ ಎಂದು ರೈತ ಮುಖಂಡರು ದೂರಿದ್ದಾರೆ.

ಸಾಲ ಕೊಟ್ಟವರಿಗೆ ಮಾರಾಟ: ಜಿಲ್ಲೆಯ ಬಹುತೇಕ ರೈತರು ಸ್ಥಳೀಯ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಂದ ಕೈಸಾಲ ಪಡೆದು ಕೃಷಿ ಚಟುವಟಿಕೆ ನಡೆಸುತ್ತಾರೆ. ಕಟಾವಿನ ನಂತರ ಬೆಳೆಯನ್ನು ಸಾಲ ಕೊಟ್ಟವರಿಗೆ, ಅವರು ಹೇಳಿದ ದರಕ್ಕೆ ಮಾರಾಟ ಮಾಡಬೇಕಾದ ಸ್ಥಿತಿಯಿದೆ.

‘ವ್ಯಾಪಾರಿಯೊಬ್ಬರಿಂದ ಕೈಸಾಲ ಪಡೆದು 2 ಎಕರೆಯಲ್ಲಿ ಹೆಸರು ಬೆಳೆದಿದ್ದೇನೆ. ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಂಟಲ್‌ಗೆ ₹8,682 ದರ ಇದೆ. ಆದರೆ, ಕ್ವಿಂಟಲ್‌ಗೆ ₹7,600 ಕೊಡುವುದಾಗಿ ವ್ಯಾಪಾರಿಗಳು ಹೇಳುತ್ತಾರೆ. ಬಡ್ಡಿ ಸಮೇತ ಸಾಲ ವಾಪಸು ಕೊಡಬೇಕಿದೆ. ಹೀಗಾಗಿ, ದರ ಕಡಿಮೆಯಾದರೂ ಪರಿಚಯಸ್ಥ ವ್ಯಾಪಾರಿಗೆ ಹೆಸರುಕಾಳು ಮಾರಾಟ ಮಾಡಿದ್ದೇನೆ’ ಎಂದು ಹಳ್ಯಾಳ ಗ್ರಾಮದ ರೈತರ ಬಸವಂತಪ್ಪ ಹೇಳಿದರು.

ರೈತರಿಂದ ಹೆಸರುಕಾಳು ಖರೀದಿಸಲು‌ ಖರೀದಿ ಕೇಂದ್ರ ತೆರೆಯಲಾಗಿದೆ. ಸದ್ಯಕ್ಕೆ ರೈತರು ಬಂದಿಲ್ಲ. ಮುಂದಿನ ದಿನಗಳಲ್ಲಿ ರೈತರು ಬರುವ ನಿರೀಕ್ಷೆ ಇದೆ
ಡಾ.ವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT