ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | 585 ಹೆಕ್ಟೇರ್‌ನಲ್ಲಿ ಹೆಸರು: ಖರೀದಿ ಕೇಂದ್ರ ಆರಂಭ

ಸವಣೂರಿನಲ್ಲಿ ಖರೀದಿಗೆ ವ್ಯವಸ್ಥೆ: ಪ್ರತಿ ಕ್ವಿಂಟಲ್‌ಗೆ ₹ 8,682 ದರ
Published : 27 ಆಗಸ್ಟ್ 2024, 14:06 IST
Last Updated : 27 ಆಗಸ್ಟ್ 2024, 14:06 IST
ಫಾಲೋ ಮಾಡಿ
Comments

ಹಾವೇರಿ: ‘ಜಿಲ್ಲೆಯ 585 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಕಾಳು ಬೆಳೆಯಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಉತ್ಪನ್ನ ಖರೀದಿಸಲು ಮೊದಲ ಹಂತದಲ್ಲಿ ಸವಣೂರ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಕೇಂದ್ರ ತೆರೆಯಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಪ್ರತಿ ಕ್ವಿಂಟಲ್‌ಗೆ ₹8,682 ದರದಲ್ಲಿ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ. ಆಗಸ್ಟ್ 24ರಿಂದ ಮುಂದಿನ 45 ದಿನಗಳವರೆಗೆ ರೈತರ ನೋಂದಣಿ ಆರಂಭಿಸಬೇಕು. 90 ದಿನಗಳವರೆಗೆ ಖರೀದಿಸಬೇಕು. ಖರೀದಿ ಕೇಂದ್ರದ ಮುಂದೆ ಫಲಕ ಅಳವಡಿಸಬೇಕು. ಕರಪತ್ರಗಳ ಮೂಲಕ ರೈತರಿಗೆ ಕೇಂದ್ರದ ಮಾಹಿತಿ ನೀಡಬೇಕು’ ಎಂದರು.

‘ಸವಣೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಕೇಂದ್ರ ತೆರೆಯಬೇಕು. ರೈತರಿಂದ ಖರೀದಿಸುವ ಹೆಸರುಕಾಳಿನ ಎಫ್.ಎ.ಕ್ಯೂ ಗುಣಮಟ್ಟ ಪರಿಶೀಲಿಸಲು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದು ಸೂಚಿಸಿದರು.

‘ರೈತರಿಂದ ಹೆಸರುಕಾಳು ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ ಎರಡು ಕ್ವಿಂಟಲ್‌ನಂತೆ ಹಾಗೂ ಪ್ರತಿಯೊಬ್ಬ ರೈತರಿಂದ 10 ಕ್ವಿಂಟಲ್‌ವರೆಗೂ ಹೆಸರುಕಾಳು ಖರೀದಿಗೆ ಅವಕಾಶವಿದೆ. ಹೆಸರುಕಾಳು ಖರೀದಿ ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಜಿಲ್ಲೆಯಲ್ಲಿ 2024–25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 585 ಹೆಕ್ಟೇರ್ ಪ್ರದೇಶದಲ್ಲಿ ಹೆಸರಕಾಳು ಬೆಳೆಯಲಾಗಿದೆ. ಸವಣೂರ ತಾಲ್ಲೂಕಿನ 420 ಹೆಕ್ಟೇರ್ ಹಾಗೂ ರಾಣೆಬೆನ್ನೂರ ತಾಲ್ಲೂಕಿನಲ್ಲಿ 90 ಹೆಕ್ಟೇರ್ ಪ್ರದೇಶದಲ್ಲಿ ಹೆಸರುಕಾಳು ಬೆಳೆದಿರುವ ಮಾಹಿತಿ ಇದೆ’ ಎಂದರು.

ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ, ಜಂಟಿ ಕೃಷಿ ನಿರ್ದೇಶಕ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT