ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್‌ ರಾಜಕಾರಣದಲ್ಲಿ ಹೊಸ ಮನ್ವಂತರ

ಸಿ.ಎಂ.ಉದಾಸಿ– ಮನೋಹರ ತಹಸೀಲ್ದಾರ್‌ ರಾಜಕೀಯ ಯುಗಾಂತ್ಯ
Last Updated 3 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಹಾನಗಲ್: ಕ್ಷೇತ್ರದ ಚುನಾವಣಾ ಅಖಾಡದಲ್ಲಿ40 ವರ್ಷಗಳ ಕಾಲ ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ಸಿ.ಎಂ.ಉದಾಸಿ ಮತ್ತು ಮನೋಹರ ತಹಶೀಲ್ದಾರ್ ರಾಜಕೀಯ ಯಗ ಅಂತ್ಯಗೊಂಡಿದೆ. ತಾರಕೇಶ್ವರನ ನಾಡಿನಲ್ಲಿ ರಾಜಕೀಯದ ಹೊಸ ಮನ್ವಂತರ ಆರಂಭವಾಗಿದೆ.

‘ನಾನೊಮ್ಮೆ–ನೀನೊಮ್ಮೆ’ ಎಂಬಂತೆ ಹಾನಗಲ್ ಶಾಸಕರಾಗಿ ಆಯ್ಕೆಗೊಳ್ಳುತ್ತಿದ್ದ ಸಿ.ಎಂ.ಉದಾಸಿ ಮತ್ತು ಮನೋಹರ ತಹಶೀಲ್ದಾರ್‌ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು. ಶಾಸಕರಾಗಿ, ಸಚಿವರಾಗಿ ಅಧಿಕಾರ ಸಿಕ್ಕ ಸಮಯದಲ್ಲೆಲ್ಲ ಕ್ಷೇತ್ರದ ಅಭಿವೃದ್ಧಿಗೆ ಪೈಪೋಟಿಗೆ ಇಳಿದವರಂತೆ ಬದ್ಧತೆಯಿಂದ ಕೆಲಸ ಮಾಡಿದವರು. ಕ್ಷೇತ್ರದಲ್ಲಿ ತಮ್ಮದೇ ಹೆಜ್ಜೆ ಗುರುತುಗಳನ್ನು ಮೂಡಿಸಿದ ಧೀಮಂತರು.

ಸತತ 9 ಬಾರಿ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿದ್ದ ಮನೋಹರ ತಹಸೀಲ್ದಾರ್‌ ಅವರಿಗೆ ವಯಸ್ಸಾದ ಹಿನ್ನೆಲೆ ಹಾಗೂ ಇತರ ಕಾರಣಗಳಿಂದ 2018ರ ಸಾರ್ವತ್ರಿಕ ಚುನಾವಣೆ ಮತ್ತು ಈ ಬಾರಿ ನಡೆದ ಉಪಚುನಾವಣೆಯಲ್ಲಿ ಟಿಕೆಟ್‌ ಕೈ ತಪ್ಪಿತು.

ಸಿ.ಎಂ.ಉದಾಸಿ ಅವರು 9 ಚುನಾವಣೆಗಳನ್ನು ಎದುರಿಸಿ, 6 ಬಾರಿ ಗೆದ್ದು, 3 ಬಾರಿ ಸೋತಿದ್ದರು. 2018ರ ಚುನಾವಣೆಯಲ್ಲಿ ಗೆದ್ದು ಕ್ಷೇತ್ರದ ಶಾಸಕರಾಗಿದ್ದರು. ಕೆಲವು ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ, ಅಧಿಕಾರವಧಿಗೂ ಮುನ್ನವೇ ಇಹಲೋಕ ತ್ಯಜಿಸಿದರು.

ಹೊಸ ಮುಖಕ್ಕೆ ಮಣೆ: ನಲವತ್ತು ವರ್ಷಗಳ ನಂತರ ಹೊಸ ಮುಖಕ್ಕೆ ಕ್ಷೇತ್ರದ ಜನರು ಮಣೆ ಹಾಕಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿಯ ಶಿವರಾಜ ಸಜ್ಜನರ ವಿರುದ್ಧ 7373 ಮತಗಳ ಅಂತರದ ಜಯಭೇರಿ ಬಾರಿಸಿ, ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಎಂ.ಉದಾಸಿ ವಿರುದ್ಧ ಪರಾಭವಗೊಂಡ ಬಳಿಕ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದ ಮಾನೆ ಅವರಿಗೆ ಎದುರಾದ ಮೊದಲ ಪರೀಕ್ಷೆ ಪುರಸಭೆ ಚುನಾವಣೆ. ಬಿಜೆಪಿ ಹಿಡಿತದಲ್ಲಿದ್ದ ಪುರಸಭೆಗೆ ಕಾಂಗ್ರೆಸ್ ಬಹುಮತ ತಂದುಕೊಟ್ಟ ಇವರ ನಾಯಕತ್ವಕ್ಕೆ ತಾಲ್ಲೂಕಿನ ಮತದಾರ ಪ್ರಭು ಈಗ ಶಾಸಕ ಸ್ಥಾನ ದಯಪಾಲಿಸಿದ್ದಾನೆ.

2023ರಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗಲಿದೆ. ಈಗ ಸಿಕ್ಕಿರುವ ಅಲ್ಪ ಅವಧಿಯಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸವಾಲು ಶ್ರೀನಿವಾಸ ಮಾನೆ ಅವರ ಮುಂದಿದೆ.

ಬಿಜೆಪಿಯಿಂದ ಆತ್ಮಾವಲೋಕನ: ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಬಿಜೆಪಿ ಉಪಚುನಾವಣೆಯ ಕದನದಲ್ಲಿ ಮುಗ್ಗರಿಸಿದೆ.ಕ್ಷೇತ್ರದಲ್ಲಿ ಬಿಜೆಪಿ ಅಲೆ ಇದ್ದರೂ, ಸೋಲು ಅನುಭವಿಸಿದ ಬಿಜೆಪಿ ಈಗ ಆತ್ಮಾವಲೋಕನಕ್ಕೆ ಮುಂದಾಗಿದೆ. ‘ಕೈ’ ಮುಂದೆ ಕಮಲ ಮುದುಡಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಮುಖಂಡರು ಚರ್ಚೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT