ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಯೋಜನೆಯಲ್ಲಿ ತಾರತಮ್ಯ ಮಾಡಿಲ್ಲ

2023ರ ಚುನಾವಣೆಯಲ್ಲಿ ಬಿಜೆಪಿಗೆ 140 ಸ್ಥಾನ ತರಲು ರಾಜ್ಯದಾದ್ಯಂತ ಪ್ರವಾಸ: ಬಿ.ಎಸ್‌.ಯಡಿಯೂರಪ್ಪ
Last Updated 18 ನವೆಂಬರ್ 2021, 16:15 IST
ಅಕ್ಷರ ಗಾತ್ರ

ಹಾವೇರಿ: ‘ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದೆ. ಯೋಜನೆಗಳಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ ಎಂಬ ತಾರತಮ್ಯವನ್ನು ಮಾಡಲಿಲ್ಲ. ಅಲ್ಪಸಂಖ್ಯಾತರಿಗೆ ಎಂದಿಗೂ ಅನ್ಯಾಯ ಮಾಡಲಿಲ್ಲ. ತಾರತಮ್ಯ ಮಾಡಿದ್ದಕ್ಕೆ ಸಾಕ್ಷ್ಯ ನೀಡಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸವಾಲು ಹಾಕಿದರು.

ಬ್ಯಾಡಗಿ ತಾಲ್ಲೂಕು ಕಾಗಿನೆಲೆಯಲ್ಲಿ ಗುರುವಾರ ಏರ್ಪಡಿಸಿದ್ದ ‘ಬಿಜೆಪಿ ಜನಸ್ವರಾಜ್‌ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

ಭಾಗ್ಯಲಕ್ಷ್ಮಿ ಯೋಜನೆ:ನಾನು ಅಧಿಕಾರದಲ್ಲಿದ್ದಾಗ ಯಾವ ರೀತಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂಬುದಕ್ಕೆ ಕಾಗಿನೆಲೆ ಕ್ಷೇತ್ರವೇ ಸಾಕ್ಷಿ. ಕಾಗಿನೆಲೆ ಅಭಿವೃದ್ಧಿಗೆ ₹50 ಕೋಟಿ ಅನುದಾನ ನೀಡಿದ್ದೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೆ ತಂದೆ. ‘ಹೆಣ್ಣುಮಗು ಹುಟ್ಟಿದರೆ ಶಾಪ’ ಎಂದು ಕೆಲವರು ಅಂದುಕೊಳ್ಳುತ್ತಿದ್ದರು. ‘ಭಾಗ್ಯಲಕ್ಷ್ಮಿ’ ಯೋಜನೆ ಜಾರಿಗೊಳಿಸಿದ ಫಲವಾಗಿ20 ಲಕ್ಷ ಹೆಣ್ಣುಮಕ್ಕಳಿಗೆ ಪ್ರಯೋಜನವಾಗಿದೆ. ಮಹಿಳಾ ಸಬಲೀಕರಣಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಜನರ ಕಣ್ಣೀರು ಒರೆಸಿ:ಅಧಿಕಾರ ವಿಕೇಂದ್ರೀಕರಣದ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಶಕ್ತಿ ತುಂಬಲಾಗಿದೆ. ಜನಪ್ರತಿನಿಧಿಗಳು ಅನುದಾನವನ್ನು ಸದ್ಬಳಕೆ ಮಾಡಿಕೊಂಡು, ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಗ್ರಾ.ಪಂ. ಸದಸ್ಯರು ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸದೆ, ಹಣ ಬಯಸಿದರೆ ನೀವು ಜನಪ್ರತಿನಿಧಿಯಾಗಿರುವುದಕ್ಕೆ ಕಳಂಕ. ನಮಗೆ ನಾವೇ ದ್ರೋಹ ಮಾಡಿಕೊಂಡಂತೆ. ರಾಮರಾಜ್ಯದ ಕನಸು ನನಸು ಮಾಡಿ, ಮೋದಿ ಅವರಿಗೆ ಶಕ್ತಿ ತುಂಬಿ ಎಂದು ಹೇಳಿದರು.

ಬಿಜೆಪಿಗೆ 140 ಸ್ಥಾನ:ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬೇರೆಯವರಿಗೆ ಅವಕಾಶ ಸಿಗಲಿ ಎಂದು. ‘ನಮ್ಮ ಯಡಿಯೂರಪ್ಪ’ ಎಂದು ಇಂದಿಗೂ ಅದೇ ಪ್ರೀತಿ ತೋರುತ್ತಿದ್ದೀರಿ. ರಾಜ್ಯದಾದ್ಯಂತ ಪ್ರವಾಸ ಮಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲು ಶ್ರಮಿಸುತ್ತೇನೆ. ಜನರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮಗಳಿಗೆ ಬೇಕಾದ ಕ್ರಿಯಾ ಯೋಜನೆಗಳನ್ನು ರೂಪಿಸಲು ಅನುಕೂಲವಾಗಿದೆ. 100 ಮಾನವ ದಿನಗಳನ್ನು 150 ದಿನಗಳಿಗೆ ಹೆಚ್ಚಿಸಿ, ದುಡಿಯುವ ಕೈಗಳಿಗೆ ಉದ್ಯೋಗ ನೀಡಲಾಗಿದೆ. ಜಲಜೀವನ ಮಿಷನ್‌ ಯೋಜನೆಯಡಿ ಪ್ರತಿ ಹಳ್ಳಿಗೂ ನಲ್ಲಿ ನೀರು ಕಲ್ಪಿಸಲಾಗುತ್ತಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ₹10 ಸಾವಿರ ನೆರವು ನೀಡುತ್ತಿದ್ದು, 53 ಲಕ್ಷ ರೈತರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್ ಮಾತನಾಡುವಾಗ, ‘ಗ್ರಾಮ ಪಂಚಾಯಿತಿಗೆ ಏನು ಅನುದಾನ ಕೊಟ್ಟಿದ್ದೀರಿ, ನಮ್ಮ ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಎಂದು ಸಭಿಕರು ಕೂಗುತ್ತಿದ್ದ ದೃಶ್ಯ ಕಂಡು ಬಂದಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ.ನಂದೀಶ್‌, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಸುರೇಶಗೌಡ್ರ ಪಾಟೀಲ, ಲಿಂಗರಾಜ ಪಾಟೀಲ, ಶಶಿಧರ ಹೊಸಳ್ಳಿ, ಬಸವರಾಜ ಕೇಲಗಾರ, ಭಾರತಿ ಜಂಬಗಿ, ಪಾಲಾಕ್ಷಪ್ಪ ಪಾಟೀಲ ಹಾಗೂ ಕಾರ್ಯಕರ್ತರು ಇದ್ದರು.

ಪರಿಷತ್‌ ಚುನಾವಣೆ: ಬಿಜೆಪಿಗೆ 15 ಸ್ಥಾನ

2023ರ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ರಾಹುಲ್‌ ಗಾಂಧಿ ರಾಜಕಾರಣವನ್ನು ‘ಪಾರ್ಟ್‌ ಟೈಮ್‌’ ಮಾಡಿಕೊಂಡಿದ್ದಾರೆ. ಇಂದು ಆಲ್‌ ಟೈಮ್‌ ಲೀಡರ್ಸ್‌ ಬೇಕಾಗಿದೆ. ಬಿ.ಎಸ್‌.ಯಡಿಯೂರಪ್ಪ ಮತ್ತು ಮೋದಿ ಅವರು ಆಲ್‌ ಟೈಮ್ ಲೀಡರ್ಸ್‌. ದೇಶದಲ್ಲಿ ಜನರು ಕಾಂಗ್ರೆಸ್‌ ಅನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅವಧಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಹಳ್ಳಿಗಳನ್ನೂ ತಲುಪಲೇ ಇಲ್ಲ. ಹಳ್ಳಿಯಿಂದ ದೆಹಲಿವರೆಗೆ ಬಿಜೆಪಿ ಅಧಿಕಾರದಲ್ಲಿದ್ದರೆ, ದೆಹಲಿಯಲ್ಲಿ ಬಿಡುಗಡೆಯಾಗುವ ಒಂದು ರೂಪಾಯಿ ಕೂಡ ಸಂಪೂರ್ಣವಾಗಿ ಹಳ್ಳಿಯನ್ನು ತಲುಪುತ್ತದೆ ಎಂದು ಹೇಳಿದರು.

ಜಲಜೀವನ ಮಿಷನ್‌ ಯೋಜನೆಯಡಿ ಜಿಲ್ಲೆಯಲ್ಲಿ ₹494 ಕೋಟಿಯ ಕ್ರಿಯಾಯೋಜನೆ ತಯಾರಿಸಿದ್ದು, ₹80 ಕೋಟಿ ವೆಚ್ಚದ ಕಾಮಗಾರಿಯಾಗಿದೆ
– ಶಿವಕುಮಾರ ಉದಾಸಿ, ಸಂಸದ

ಕಾಂಗ್ರೆಸ್ ಸರ್ಕಾರವಿದ್ದಾಗ ರಸ್ತೆ ಮತ್ತು ಬೀದಿ ದೀಪ ರಿಪೇರಿಗೂ ಹಣವಿರಲಿಲ್ಲ. ಬಿಜೆಪಿ ಸರ್ಕಾರದಿಂದ ಪ್ರತಿ ಕ್ಷೇತ್ರಕ್ಕೆ ₹250 ಕೋಟಿ ಸಿಗುತ್ತಿದೆ
– ನೆಹರು ಓಲೇಕಾರ, ಹಾವೇರಿ ಶಾಸಕ

ಕಾಂಗ್ರೆಸ್ ಸರ್ಕಾರವಿದ್ದಾಗ ಗ್ರಾ.ಪಂ.ಗೆ ₹5 ಲಕ್ಷ ಕೂಡ ಬರುತ್ತಿರಲಿಲ್ಲ. ಇಂದು ಗ್ರಾ.ಪಂ.ಗೆ ₹4 ಕೋಟಿವರೆಗೂ ಅನುದಾನ ಬರುತ್ತಿದೆ
– ಎನ್‌.ರವಿಕುಮಾರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT