ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠೇವಣಿ ಕಳೆದುಕೊಂಡ 12 ಅಭ್ಯರ್ಥಿಗಳು!

ಹಾವೇರಿ ಲೋಕಸಭಾ ಚುನಾವಣೆ: ‘ನೋಟಾ’ ಚಲಾಯಿಸಿದ 10,865 ಮತದಾರರು
Published 4 ಜೂನ್ 2024, 16:23 IST
Last Updated 4 ಜೂನ್ 2024, 16:23 IST
ಅಕ್ಷರ ಗಾತ್ರ

ಹಾವೇರಿ: ಹಾವೇರಿ ಲೋಕಸಭಾ ಚುನಾವಣೆಯ ಕಣದಲ್ಲಿದ್ದ 14 ಅಭ್ಯರ್ಥಿಗಳಲ್ಲಿ 12 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ವಿಶೇಷವೆಂದರೆ ‘ನೋಟಾ’ ಮತಗಳಷ್ಟೂ ಈ ಅಭ್ಯರ್ಥಿಗಳು ಮತಗಳನ್ನು ಪಡೆದಿಲ್ಲ. 

ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ –7,05,538 ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ– 6,62,025 ಮತಗಳನ್ನು ಪಡೆದಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳನ್ನು ಹೊರಡುಪಡಿಸಿದರೆ ವಿವಿಧ ಪಕ್ಷಗಳ ಉಮೇದುವಾರರು ಹಾಗೂ ಪಕ್ಷೇತರ ಸ್ಪರ್ಧಾಳುಗಳು ಠೇವಣಿ ಇಟ್ಟ ₹25 ಸಾವಿರ ಮೊತ್ತವನ್ನು ಕಳೆದುಕೊಂಡಿದ್ದಾರೆ. 

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿ ಅಭ್ಯರ್ಥಿ ₹25 ಸಾವಿರ ಭದ್ರತಾ ಠೇವಣಿ ಇಡಬೇಕು. ಯೋಗ್ಯ ಅಭ್ಯರ್ಥಿಗಳೇ ಚುನಾವಣಾ ಕಣಕ್ಕಿಳಿಯಬೇಕು.‌ ಯಾರೂ ಪ್ರಚಾರಕ್ಕಾಗಿ, ಬೇಕಾಬಿಟ್ಟಿ ಸ್ಪರ್ಧಿಸಬಾರದೆಂಬ ಉದ್ದೇಶದೊಂದಿಗೆ ಚುನಾವಣಾ ಆಯೋಗ ಅಭ್ಯರ್ಥಿಗಳಿಂದ ಭದ್ರತಾ ಠೇವಣಿ ಪಡೆಯುತ್ತದೆ.

ಅಭ್ಯರ್ಥಿ ತಾನು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಅರ್ಹ ಮತಗಳ 1/6 ಕ್ಕಿಂತ ಹೆಚ್ಚಿಗೆ ಮತ ಗಳಿಸಬೇಕು. ಅಷ್ಟು ಮತಗಳಿಸಿದರೆ ಚುನಾವಣಾಧಿಕಾರಿಗೆ ಪಾವತಿಸಿದ ಠೇವಣಿ ಹಣ ಅಭ್ಯರ್ಥಿಗೆ ಮರಳಿಸಲಾಗುತ್ತದೆ.‌ ಒಂದು ವೇಳೆ ಅಭ್ಯರ್ಥಿ 1/6 ಕ್ಕಿಂತ ಕಡಿಮೆ ಮತ ಗಳಿಸಿದರೆ ಆತನ ಠೇವಣಿಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕುತ್ತದೆ. 

10,865 ಮತದಾರರಿಂದ ನೋಟಾ!

ಕಣದಲ್ಲಿರುವ ಅಭ್ಯರ್ಥಿಗಳನ್ನು ತಿರಸ್ಕರಿಸುವ ಅಧಿಕಾರ ನೀಡಿದ ‘ನೋಟಾ’ ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಅಸ್ತ್ರವಾಗಿ ಬಳಕೆಯಾಗಿದೆ. ಹಾವೇರಿ ಮತ್ತು ಗದಗ ಜಿಲ್ಲೆಗಳ 8 ವಿಧಾನಸಭಾ ಕ್ಷೇತ್ರಗಳ ಒಟ್ಟು 10,865 ಮತದಾರರು ‘ನೋಟಾ’ ಆಯ್ಕೆ ಮಾಡಿಕೊಂಡು ಗಮನ ಸೆಳೆದಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 17,92,774 ಮತದಾರರಿದ್ದು, ಈ ಪೈಕಿ 13,91,214 ಜನರು ಹಕ್ಕು ಚಲಾಯಿಸಿದ್ದರು. ಇದರಲ್ಲಿ ಶೇ 0.78 ಮತದಾರರು ‘ನೋಟಾ’ ಒತ್ತಿ ಅಭಿಪ್ರಾಯ ಪ್ರಕಟಿಸಿದ್ದಾರೆ.

ಏನಿದು ನೋಟಾ?

‘ನೋಟಾ’ (NOTA) ಎಂದರೆ ‘ಮೇಲಿನ ಯಾರೂ ಅಲ್ಲ’ (None of the above) ಎಂದರ್ಥ. ಚುನಾವಣಾ ಕಣದಲ್ಲಿರುವ ಯಾರೊಬ್ಬರೂ ಮತ ಪಡೆಯಲು ಅರ್ಹರಲ್ಲ ಎಂದೂ ಹೇಳಬಹುದು. ಮತಯಂತ್ರದಲ್ಲಿ ಈ ಆಯ್ಕೆ ಕೊನೆಯಲ್ಲಿ ಇರುತ್ತದೆ. ಪಕ್ಷ, ಪಕ್ಷೇತರ ಅಭ್ಯರ್ಥಿಗಳಲ್ಲಿ ಯಾರೂ ಇಷ್ಟವಿಲ್ಲ ಎಂಬ ಅಭಿಪ್ರಾಯವನ್ನು ಈ ಮೂಲಕ ಮತದಾರರು ದಾಖಲಿಸಿದ್ದಾರೆ.

‘ನೋಟಾ’ದ ಮತಗಳಿಗೆ ಸಿಂಧುತ್ವವಿಲ್ಲ. ಒಂದು ವೇಳೆ ಎಲ್ಲ ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತ ಬಿದ್ದರೂ ಉಳಿದ ಅಭ್ಯರ್ಥಿಗಳಲ್ಲಿ ಹೆಚ್ಚು ಮತ ಪಡೆದವರನ್ನು ವಿಜೇತರೆಂದು ಘೋಷಿಸಲಾಗುತ್ತದೆ. ‘ನೋಟಾ’ಗೆ ಪ್ರಾಶಸ್ತ್ಯ ಇಲ್ಲದೇ ಇದ್ದರೂ ಕಣದಲ್ಲಿರುವ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ಹೊರಹಾಕಲು ಇದೊಂದು ಪ್ರಬಲ ಅಸ್ತ್ರವಾಗುತ್ತಿದೆ.

2013ರ ಚುನಾವಣೆ ಉತ್ತರ ಭಾರತದಲ್ಲಿ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಮೊದಲ ಬಾರಿಗೆ ಚುನಾವಣಾ ಆಯೋಗ ‘ನೋಟಾ’ ಅವಕಾಶ ಕಲ್ಪಿಸಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ‘ನೋಟಾ’ ಆಯ್ಕೆ ನೀಡಲಾಯಿತು.‌‌

ಅಭ್ಯರ್ಥಿಗಳು ಪಡೆದ ಮತಗಳ ವಿವರ

ಕ್ರ.ಸಂ.;ಅಭ್ಯರ್ಥಿಗಳು;ಪಕ್ಷ;ಪಡೆದ ಮತಗಳು 1;ಬಸವರಾಜ ಬೊಮ್ಮಾಯಿ;ಬಿಜೆಪಿ;7055382;ಆನಂದಸ್ವಾಮಿ ಗಡ್ಡದೇವರಮಠ;ಕಾಂಗ್ರೆಸ್;6620253;ಸುನಂದಾ ಕರಿಯಪ್ಪ ಶಿರಹಟ್ಟಿ;ಪಕ್ಷೇತರ;47074;ಖಾಜಾಮೋಹಿದ್ದೀನ್ ಗುಡಗೇರಿ;ಸೋಷಿಯಲಿಸ್ಟ್ ಪಾರ್ಟಿ(ಇಂಡಿಯಾ);34015;ಗಂಗಾಧರ ಬಡಿಗೇರ;ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್);22706;ರುದ್ರಪ್ಪ ಬಸಪ್ಪ ಕುಂಬಾರ;ಪಕ್ಷೇತರ;13567;ಪ್ರಜಾಕೀಯ ಸಚಿನಕುಮಾರ ಕರ್ಜೆಕಣ್ಣನವರ;ಉತ್ತಮ ಪ್ರಜಾಕೀಯ ಪಾರ್ಟಿ;10728;ಬಸವರಾಜ ಬಿ. ಹಾದಿ;ಪಕ್ಷೇತರ;10719;ಡಾ.ಜಿ.ಎಚ್.ಇಮ್ರಾಪೂರ;ಪಕ್ಷೇತರ;95310;ಜಗದೀಶ ಯಲ್ಲಪ್ಪ ಬಂಕಾಪೂರ;ಪಕ್ಷೇತರ;67411;ತನು ಚಿಕ್ಕಣ್ಣ ಯಾದವ್;ಕರ್ನಾಟಕ ರಾಷ್ಟ್ರ ಸಮಿತಿ;63612;ಎಚ್.ಕೆ.ನರಸಿಂಹಪ್ಪ;ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ);44613;ವಿಶ್ವನಾಥ ಶೀರಿ;ಏಕಂ ಸನಾತನ ಭಾರತ ದಳ;40114;ರಶೀದಾ ಬೇಗಂ;ಇಂಡಿಯನ್ ಮೂವ್‍ಮೆಂಟ್ ಪಾರ್ಟಿ;397

686 ಮತಗಳು ತಿರಸ್ಕೃತ

ಹಾವೇರಿ: 18ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಲ್ಲಿ 5985 ಅಂಚೆ ಮತದಾನ ಚಲಾವಣೆಗೊಂಡಿವೆ. ಈ ಪೈಕಿ 686 ಮತಗಳು ತಿರಸ್ಕೃತಗೊಂಡಿವೆ. 5299 ಮತಗಳು ಸ್ವೀಕೃತ ಮತಗಳಾಗಿವೆ. 34 ಮತಗಳು ನೋಟಾಕ್ಕೆ ಚಲಾವಣೆಗೊಂಡಿವೆ. ಆನಂದಸ್ವಾಮಿ ಗಡ್ಡದೇವರಮಠ(ಕಾಂಗ್ರೆಸ್) 1834 ಮತಗಳು ಹಾಗೂ ಬಸವರಾಜ ಬೊಮ್ಮಾಯಿ(ಬಿಜೆಪಿ) 3349 ಅಂಚೆ ಮತಗಳನ್ನು ಪಡೆದಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT