ಭಾನುವಾರ, ನವೆಂಬರ್ 28, 2021
20 °C
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಮತ

‘ಒನ್‌ ನೇಷನ್‌, ಒನ್‌ ಎಲೆಕ್ಷನ್‌’ ಜಾರಿ ಅಗತ್ಯ: ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಪದೇ ಪದೇ ಚುನಾವಣೆ ನಡೆಯುವುದರಿಂದ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ‘ಒನ್‌ ನೇಷನ್‌, ಒನ್‌ ಎಲೆಕ್ಷನ್‌’ ಜಾರಿಯಾಗುವುದು ಅಗತ್ಯವಿದೆ. ಇದಕ್ಕೆ ಎಲ್ಲ ಪಕ್ಷಗಳ ಸಹಮತ ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. 

ಹಾನಗಲ್‌ನಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿದ್ದ ಕಾಂಗ್ರೆಸ್‌ಗೂ, ಈಗಿರುವ ಕಾಂಗ್ರೆಸ್‌ಗೂ ಅಜಗಜಾಂತರ ವ್ಯತ್ಯಾಸವಿದೆ. ಭ್ರಷ್ಟಾಚಾರಿಗಳ, ಜಾತಿವಾದಿಗಳ, ಭಾಷೆ ಹೆಸರಿನಲ್ಲಿ ನಾಡು ಒಡೆಯುವ, ನಕ್ಸಲರನ್ನು ಬೆಂಬಲಿಸುವ, ದೇಶದ್ರೋಹಿಗಳ ಪರ ವಕಾಲತ್ತು ವಹಿಸುವ, ತುಕ್ಡೆ ಗ್ಯಾಂಗ್‌ಗಳ ನೇತೃತ್ವ ವಹಿಸುವ ಕಾಂಗ್ರೆಸ್‌ ಈಗ ಅಸ್ತಿತ್ವದಲ್ಲಿದೆ ಎಂದು ಗಂಭೀರ ಆರೋಪ ಮಾಡಿದರು. 

ತಾನು ಕಳ್ಳ, ಪರರನ್ನು ನಂಬ: ಚುನಾವಣೆಯಲ್ಲಿ ಗೋಣಿಚೀಲದಲ್ಲಿ ಹಣ ಹಂಚುತ್ತಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ‘ತಾನು ಕಳ್ಳ ಪರರನ್ನು ನಂಬ’ ಎಂಬ ಮಾತಿನಂತೆ ಹಣ ಹಂಚುವ ರಾಜಕಾರಣ ಆರಂಭಿಸಿದ ಅಪಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಹಣ ಹಂಚುವಲ್ಲಿ ನಾವು ಪರಿಣತರಲ್ಲ. ಜಮೀರ್‌ ಅಹಮದ್‌ ಮತ್ತು ಡಿ.ಕೆ.ಶಿವಕುಮಾರ್‌ ರೀತಿ ನಾವು ಆ ವಿಷಯದಲ್ಲಿ ಡಿಗ್ರಿ, ಪಿಎಚ್‌ಡಿ ಪಡೆದಿಲ್ಲ ಎಂದು ಕುಟುಕಿದರು. 

ಜಾತಿಯ ಸೋಂಕಿಲ್ಲ: ಒಂದು ಸಮುದಾಯವನ್ನು ಓಲೈಸಲು ಸಿದ್ದರಾಮಯ್ಯ ಅವರು ‘ಶಾದಿ ಭಾಗ್ಯ’ ಮತ್ತು ಕೆಲವು ಜಾತಿಯ ಮಕ್ಕಳಿಗೆ ‘ಪ್ರವಾಸ ಭಾಗ್ಯ’ ಕಾರ್ಯಕ್ರಮ ಜಾರಿಗೆ ತಂದಿದ್ದರು. ನಾವು ಜಾರಿಗೊಳಿಸಿದ ಕಿಸಾನ್‌ ಸಮ್ಮಾನ್‌, ಜನಧನ, ಆಯುಷ್ಮಾನ್‌ ಭಾರತ್‌, ಮುದ್ರಾ ಯೋಜನೆಗಳು ಸರ್ವ ಸಮುದಾಯಗಳಿಗೂ ಉಪಯುಕ್ತವಾಗಿವೆ. ಈ ಯೋಜನೆಗಳಲ್ಲಿ ಜಾತಿಯ ಸೋಂಕಿಲ್ಲ ಎಂದು ಹೇಳಿದರು. 

ಆಕಾಶಕ್ಕೆ ಉಗಿಯಬಾರದು: ಆಕಾಶಕ್ಕೆ ಉಗಿದರೆ, ಅವರ ಮುಖದ ಮೇಲೆ ಉಗುಳು ಬೀಳುವಂತೆ, ಆರ್‌ಎಸ್‌ಎಸ್‌ ಬಗ್ಗೆ ಹಗುರವಾಗಿ ಮಾತನಾಡಿದರೆ ಅವರ ಘನತೆಗೇ ಕುಂದುಂಟಾಗುತ್ತದೆ. ಆರ್‌ಎಸ್‌ಎಸ್‌ ಸೂರ್ಯ ಇದ್ದಂತೆ. ರಾಷ್ಟ್ರ ನಿರ್ಮಾಣ ಮತ್ತು ಸಂಸ್ಕಾರ ಕೊಡುವ ಕೆಲಸ ಮಾಡುತ್ತದೆ. ಸಂಘದ ಬಗ್ಗೆ ಮಾತನಾಡುವವರಿಗೆ ನೈತಿಕತೆ ಇರಬೇಕು ಎಂದು ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದರು. 

ಜಮೀರ್‌ ಅಹಮದ್‌ ಮತ್ತು ಎಚ್‌.ಡಿ.ಕುಮಾರಸ್ವಾಮಿ ನೈಜ ಸಂಬಂಧ ಹೊರಬಂದರೆ, ಎರಡೂ ಪಕ್ಷಗಳ ಗೌರವ ಉಳಿಯುವುದಿಲ್ಲ. ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ ಎಂದು ವ್ಯಂಗ್ಯವಾಡಿದರು. 

‘ಸಮಾಜವಾದಿಯಲ್ಲ, ಮಜಾವಾದಿ’
ಕಾಂಗ್ರೆಸ್‌ ತಕ್ಕಡಿ ಏನು ಮಾಡಿದರೂ ಮೇಲೇಳುತ್ತಿಲ್ಲ. ‘ಸಮಾಜವಾದಿ’ ಎಂದು ಹೇಳಿಕೊಳ್ಳುವವರ ಬದುಕನ್ನು ಅಧ್ಯಯನ ಮಾಡಿದರೆ, ಅವರು ‘ಮಜಾವಾದಿ’ ಮತ್ತು ‘ಜಾತಿವಾದಿ’ ಎಂದು ಗೊತ್ತಾಗುತ್ತದೆ. ಹೈಬ್ರಿಡ್‌ ರಾಜಕಾರಣಿಗಳು ದಿಢೀರ್‌ ಉದ್ಭವಾಗುತ್ತಾರೆ. ರಾತ್ರೋರಾತ್ರಿ ನಾಯಕತ್ವ ರೂಪುಗೊಳ್ಳುವುದಿಲ್ಲ. ನಿರಂತರವಾಗಿ ಜನ ಸೇವೆಯಲ್ಲಿ ತೊಡಗಿದಾಗ ಮಾತ್ರ ನಾಯಕತ್ವ ಲಭಿಸುತ್ತದೆ. ಡಿಎನ್‌ಎದಿಂದ ನಾಯಕತ್ವ ಬರುವುದಿಲ್ಲ ಎಂದು ಯಾರ ಹೆಸರನ್ನೂ ಹೇಳದೆ ಸಿ.ಟಿ.ರವಿ ಅವರು ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು