ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಎಸ್‌.ಟಿ. ಮೀಸಲಾತಿಗಾಗಿ ಪಾದಯಾತ್ರೆ ಜ.15ರಿಂದ

ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿಕೆ
Last Updated 8 ನವೆಂಬರ್ 2020, 14:37 IST
ಅಕ್ಷರ ಗಾತ್ರ

ಹಾವೇರಿ: ‘ರಾಜ್ಯದ ಕುರುಬ ಸಮುದಾಯಕ್ಕೆ ಎಸ್‌.ಟಿ. ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ, ಕುರುಬ ಸಮುದಾಯದ ನಾಲ್ಕು ಪೀಠಾಧಿಪತಿಗಳ ನೇತೃತೃದಲ್ಲಿ ಸಾವಿರಾರು ಜನರೊಂದಿಗೆ ಕಾಗಿನೆಲೆಯಿಂದ ಬೆಂಗಳೂರಿಗೆ ಜ.15ರಿಂದ ಫೆ.7ರವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದು ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಬ್ಯಾಡಗಿ ತಾಲ್ಲೂಕು ಕಾಗಿನೆಲೆಯಲ್ಲಿ ‘ಕುರುಬರ ಎಸ್‌.ಟಿ. ಹೋರಾಟ ಸಮಿತಿ’ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಮಹಿಳೆಯರ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.ಸಮಾಜದ ಋಣ ತೀರಿಸಬೇಕು ಎಂಬ ಮನೋಭಾವ ಇರುವ ಎಲ್ಲರೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂದರು.

ನಿತ್ಯ 20 ಕಿ.ಮೀ. ನಡೆಯುವ ಮೂಲಕ 340 ಕಿ.ಮೀ. ದೂರದ ಬೆಂಗಳೂರನ್ನು ತಲುಪಲಿದ್ದೇವೆ. ಇದಕ್ಕೂ ಮುನ್ನ ನಾಲ್ಕು ಸಮಾವೇಶಗಳನ್ನು ನಡೆಸಲಿದ್ದೇವೆ. ಜ.14ರಂದು ಮಕರ ಸಂಕ್ರಮಣದಂದು ಸೂರ್ಯ ಪಥ ಬದಲಿಸುತ್ತಾನೆ. ಅದರಂತೆ ನಾವು ಜ.15ರಿಂದ ಹೋರಾಟಕ್ಕೆ ದೊಡ್ಡ ತಿರುವು ನೀಡೋಣ. ನಮ್ಮ ಹಕ್ಕು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸೋಣ ಎಂದರು.

ಪರಿಹಾರ ನೀಡದಿದ್ದರೆ ಸತ್ಯಾಗ್ರಹ

ಹೊಸದುರ್ಗ ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ಕುರಿ ಮೃತಪಟ್ಟರೆ ₹5 ಸಾವಿರ ಪರಿಹಾರ ನೀಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಅದನ್ನು ಸ್ಥಗಿತಗೊಳಿಸಿದೆ. ಈ ಪರಿಹಾರವನ್ನು ಮತ್ತೆ ಕೊಡಲೇಬೇಕು. ಇಲ್ಲದಿದ್ದರೆ ಕುರುಬ ಸಮುದಾಯದ ನಾಲ್ಕು ಗುರುಪೀಠಗಳ ಸ್ವಾಮೀಜಿಗಳು ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಚಿವ ಸ್ಥಾನ ಸಿಗುವ ವಿಶ್ವಾಸ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚುನಾವಣೆ ಫಲಿತಾಂಶ ನಂತರ ನ.20ರೊಳಗೆ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್‌ರಚನೆ ಎಂದು ಹೇಳಿದ್ದಾರೆ. ನಾನು ಸಮ್ಮಿಶ್ರ ಸರ್ಕಾರದಲ್ಲಿ ಸಚಿವನಾಗಿದ್ದವನು ರಾಜೀನಾಮೆ ಕೊಟ್ಟು ಬಂದಿದ್ದೇನೆ. ಹಾಗಾಗಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಯಾವುದೇ ಖಾತ ಕೊಟ್ಟರು ನಿಭಾಯಿಸುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಟಿ.ಬಿ.ನಾಗರಾಜ್‌ ಹೇಳಿದರು.

ವಿಶ್ವನಾಥ್‌, ಆರ್.ಶಂಕರ್‌ ಸೇರಿದಂತೆ ನಾವೆಲ್ಲರೂ ಬಿಜೆಪಿ ಸೇರ್ಪಡೆಯಾಗಿದ್ದೇವೆ. ಹಾಗಾಗಿ ನಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಿ, ನಿಮ್ಮ ಕೈಯನ್ನು ಬಲಪಡಿಸುತ್ತೇವೆ ಎಂದು ಕೆ.ಎಸ್‌.ಈಶ್ವರಪ್ಪ ಅವರಿಗೆ ವೇದಿಕೆ ಮೇಲೆ ಎಂ.ಟಿ.ಬಿ.ನಾಗರಾಜ್‌ ಮನವಿ ಮಾಡಿದರು.

‘ಕುರುಬರು ಅಂದ್ರೆ ಈಶ್ವರಪ್ಪ, ಸಿದ್ದರಾಮಯ್ಯ ಮಾತ್ರವಲ್ಲ’

ಕುರುಬರು ಅಂದ್ರೆ ಈಶ್ವರಪ್ಪ, ಸಿದ್ದರಾಮಯ್ಯ, ಎಂಟಿಬಿ, ಎಚ್‌.ಎಂ.ರೇವಣ್ಣ ಮುಂತಾದ ಶ್ರೀಮಂತ ರಾಜಕಾರಣಿಗಳು ನೆನಪಿಗೆ ಬರುತ್ತಾರೆ. ಹಾಗಾಗಿ ನಿಮಗೇಕೆ ಮೀಸಲಾತಿ ಎಂದು ಕೆಲವರು ಕಿಚಾಯಿಸುತ್ತಾರೆ. ಗುಡ್ಡಗಾಡುಗಳಲ್ಲಿ ಗುಡಿಸಲಿನಲ್ಲಿ ತಿನ್ನಲು ಅನ್ನವಿಲ್ಲದೆ ಪರದಾಡುತ್ತಿರುವ ಬಡ ಕುರುಬರಿಗಾಗಿ ನಾವು ಎಸ್‌.ಟಿ. ಮೀಸಲಾತಿ ಕೇಳುತ್ತಿದ್ದೇವೆಯೇ ಹೊರತು ನಮಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಪಕ್ಷದ ವಿಚಾರ ಬಂದ್ರೆ ಪಕ್ಷ ಬಿಡುವ ಮಾತೇ ಇಲ್ಲ. ಆದರೆ, ಇಲ್ಲಿ ಪಕ್ಷದ ಲೆಕ್ಕವನ್ನು ಬಿಟ್ಟು ಪಕ್ಷಾತೀತವಾಗಿ ಸಮುದಾಯಕ್ಕಾಗಿ ನಾವೆಲ್ಲರೂ ಒಂದಾಗಿದ್ದೇವೆ. ಎಸ್‌.ಟಿ.ಮೀಸಲಾತಿ ಸಿಕ್ಕಿದರೆ ಬಡ ಕುರುಬರಿಗೆ ಉಚಿತ ಭೂಮಿ, ಶಿಕ್ಷಣ, ಉದ್ಯೋಗ ಮುಂತಾದ ಸೌಲಭ್ಯಗಳು ಸಿಗುತ್ತವೆ. ಹಾಗಾಗಿ ನೀವೆಲ್ಲರೂ ಅಹಲ್ಯಾಬಾಯಿ ಹೋಳ್ಕರ್‌, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣನಂತೆ ಹೋರಾಟ ನಡೆಸಿ ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT