ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆಯಡಿ ಭತ್ತ ಖರೀದಿ

ನ.30 ರಿಂದ ನೋಂದಣಿ ಆರಂಭ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿಕೆ
Last Updated 12 ನವೆಂಬರ್ 2020, 14:45 IST
ಅಕ್ಷರ ಗಾತ್ರ

ಹಾವೇರಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತ ಖರೀದಿಗೆ ಜಿಲ್ಲೆಯಲ್ಲಿ ಮೂರು ಕೇಂದ್ರಗಳನ್ನು ಆರಂಭಿಸಲಾಗುವುದು. ಪ್ರತಿ ಕ್ವಿಂಟಲ್‍ಗೆ ಸಾಮಾನ್ಯ ಭತ್ತಕ್ಕೆ ₹1868 ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸಲಾಗುವುದು. ನ.30 ರಿಂದ ಡಿ.30ರವರೆಗೆ ಭತ್ತದ ಬೆಳೆದ ರೈತರು ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಬೆಂಬಲ ಬೆಲೆಯಡಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.ಕನಿಷ್ಠ ಬೆಂಬಲ ಬೆಲೆಯಡಿ ಒಬ್ಬ ರೈತನಿಂದ ಪ್ರತಿ ಎಕರೆಗೆ 16 ಕ್ವಿಂಟಲ್‍ನಂತೆ ಗರಿಷ್ಠ 40 ಕ್ವಿಂಟಲ್‍ವರೆಗೆ ಖರೀದಿಸಲಾಗುವುದು ಎಂದರು.

ಹಾನಗಲ್, ಹಿರೇಕೆರೂರು ಹಾಗೂ ಶಿಗ್ಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಭತ್ತ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸೂಚನೆ ನೀಡಿ, ಭತ್ತದ ಗುಣಮಟ್ಟವನ್ನು ಪರಿಶೀಲನೆಗೆ ಕೃಷಿ ಇಲಾಖೆಯಿಂದ ಗ್ರೇಡರ್‌ಗಳನ್ನು ನೇಮಕ ಮಾಡಿ ಅಗತ್ಯ ತರಬೇತಿ ನೀಡುವಂತೆ ಸೂಚನೆ ನೀಡಿದರು.

ಪ್ರತಿ ಕ್ವಿಂಟಲ್‍ಗೆ ಸಾಮಾನ್ಯ ಭತ್ತಕ್ಕೆ ₹1868 ಹಾಗೂ ‘ಎ’ ಗ್ರೇಡ್ ಭತ್ತಕ್ಕೆ ₹1888 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸ್ಥಾಪಿಸಲಾದ ಖರೀದಿ ಕೇಂದ್ರದಲ್ಲಿ ನೋಂದಾಯಿಸಿಕೊಂಡ ರೈತರು ನೋಂದಾಯಿತ ಅಕ್ಕಿ ಗಿರಣಿಗಳಿಗೆ ಭತ್ತವನ್ನು ತೆಗೆದುಕೊಂಡು ಹೋಗಬೇಕು. ರೈತರೇ ತಮ್ಮ ಚೀಲದಲ್ಲಿ ತುಂಬಿಕೊಂಡು ಬಂದಿದ್ದರೆ ಚೀಲದ ದರವಾಗಿ ಪ್ರತಿ ಚೀಲಕ್ಕೆ ಆರು ರೂಪಾಯಿಗಳನ್ನು ಅಕ್ಕಿ ಗಿರಣಿ ಮಾಲೀಕರು ಪಾವತಿಸಬೇಕು. ಅನ್‌ಲೋಡ್‌ ವೆಚ್ಚವನ್ನು ಅಕ್ಕಿ ಗಿರಣಿ ಮಾಲೀಕರೇ ಭರಿಸಬೇಕು ಎಂದು ತಿಳಿಸಿದ್ದಾರೆ.

ಈ ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಯ ಅಕ್ಕಿ ಗಿರಣಿಗಳು ಬೆಂಬಲ ಬೆಲೆಯಡಿ ಭತ್ತ ಖರೀದಿಸಲು ನೋಂದಾಯಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಸಾಗಾಣಿಕೆ ವೆಚ್ಚವನ್ನು ರೈತರಿಗೆ ಸಾರ್ವಜನಿಕ ವಿತರಣಾ ಪದ್ಧತಿ ದರದಂತೆ ಜಿಲ್ಲಾ ಖರೀದಿ ಏಜೆನ್ಸಿ ಮೂಲಕ ರೈತರಿಗೆ ಪಾವತಿಸಬೇಕು. ಕಾಲಮಿತಿಯೊಳಗಾಗಿ ರೈತನಿಗೆ ಆನ್‍ಲೈನ್ ಪಾವತಿ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಕೆ.ಎಫ್.ಸಿ.ಎಸ್.ಸಿ. ಉಪ ವ್ಯವಸ್ಥಾಪಕರು, ಬ್ರ್ಯಾಂಚ್ ಮ್ಯಾನೇಜರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಅಧಿಕಾರಿಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT