ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಸಿಬಿ ಪಕ್ಷಗಳ ದುರಾಡಳಿತದಿಂದ ಬೇಸತ್ತ ಜನ: ಪದ್ಮನಾಭ ಪ್ರಸನ್ನಕುಮಾರ್‌

ಕೆಜೆಪಿ ರಾಜ್ಯ ಘಟಕದ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್‌ ಹೇಳಿಕೆ
Last Updated 23 ಫೆಬ್ರುವರಿ 2023, 13:06 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಎರಡು ವಾರದೊಳಗೆ 70 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು ಎಂದು ಕೆಜೆಪಿ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್‌ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದ ಜನ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೆಜೆಪಿ ಸಂಕಲ್ಪ ಮಾಡಿದೆ. ಅರಾಜಕತೆ ಕಿತ್ತು ಹಾಕಿ ನ್ಯಾಯಸಮ್ಮತ ಆಡಳಿತ ನೀಡಲು ‍ಪ್ರಾದೇಶಿಕ ಪಕ್ಷ ಬೆಂಬಲಿಸಿ ಎಂದು ಮನವಿ ಮಾಡಿದರು.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿವೆ. ಸರೋಜಿನಿ ಮಹಿಷಿ ವರದಿಯನ್ನು ರಾಷ್ಟ್ರೀಯ ಪಕ್ಷಗಳು ಅನುಷ್ಠಾನಕ್ಕೆ ತಂದಿಲ್ಲ. ಕರ್ನಾಟಕವು ರಾಷ್ಟ್ರೀಯ ಪಕ್ಷಗಳಿಗೆ ವೋಟ್‌ ಬ್ಯಾಂಕ್‌ ಆಗಿದೆ. ದೇಶಕ್ಕೆ ಅತಿ ಹೆಚ್ಚು ಜಿಎಸ್‌ಟಿ ಕಟ್ಟುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆ ಹಣವನ್ನು ರಾಜ್ಯಕ್ಕೆ ನೀಡದೆ ಕೇಂದ್ರ ಸರ್ಕಾರ ಅನ್ಯಾಯ ಎಸಗಿದೆ ಎಂದು ಕಿಡಿಕಾರಿದರು.

ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ:

ಗಾಲಿ ಜನಾರ್ದನ ರೆಡ್ಡಿ ನೈಸರ್ಗಿಕ ಭೂ ಸಂಪತ್ತನ್ನು ಅಕ್ರಮವಾಗಿ ಸಾಗಿಸಿ, ಲಕ್ಷಾಂತರ ರೂಪಾಯಿ ಲೂಟಿ ಹೊಡೆದು ಲೋಕಾಯುಕ್ತ ತನಿಖೆಯಲ್ಲಿ ಭ್ರಷ್ಟಾಚಾರ ಸಾಬೀತಾಗಿತ್ತು. ಜೈಲಿಗೆ ಹೋಗಿ ಹೊರಬಂದು ಹೊಸ ಪಕ್ಷ ಕಟ್ಟಿಕೊಂಡು ಜಗಜ್ಯೋತಿ ಬಸವಣ್ಣನವರ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸಿಎಂ ಕೊಡುಗೆ ಏನು?

ಹಾವೇರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೊಡುಗೆ ಏನು? ಪ್ಯಾಕೇಜ್‌ ಸಿಎಂ, ಶೇ 40 ಕಮಿಷನ್‌ ಸರ್ಕಾರ ಎಂಬ ಅಪಖ್ಯಾತಿ ಬಂದಿದೆ. ಸಾಕಷ್ಟು ಅಭಿವೃದ್ಧಿ ಕಾಣಬೇಕಾದ ಹಾವೇರಿ ಜಿಲ್ಲೆ ಸಿಎಂ ಅವರ ನಿರ್ಲಕ್ಷ್ಯದಿಂದ ಹಿಂದುಳಿದಿದೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ರಾಜಕುಮಾರ, ರಾಜ್ಯ ಸಂಚಾಲಕ ಇಳಂಗಗೋವನ್‌, ಪ್ರಚಾರ ಸಮಿತಿ ಸದಸ್ಯ ಪುಟ್ಟಸ್ವಾಮಿ, ರಾಜ್ಯ ಯುವ ಘಟಕದ ಕಾರ್ಯದರ್ಶಿ ದೊರೆಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT