ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಅಭಿವೃದ್ಧಿ, ಸುರಕ್ಷತೆಗಾಗಿ ಮೋದಿಗೆ ಜನರ ಬೆಂಬಲ: ಎಸ್.ವಿ.ಸಂಕನೂರ

Published 15 ಮಾರ್ಚ್ 2024, 10:43 IST
Last Updated 15 ಮಾರ್ಚ್ 2024, 10:43 IST
ಅಕ್ಷರ ಗಾತ್ರ

ಹಾವೇರಿ: ‘ದೇಶದ ಅಭಿವೃದ್ಧಿ ಮತ್ತು ಸುರಕ್ಷತೆಗಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ಜನರು ಬೆಂಬಲಿಸಲಿದ್ದಾರೆ. ಈ ಬಾರಿ ಬಿಜೆಪಿ 370 ಸ್ಥಾನಗಳನ್ನು ಪಡೆದು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಅಭಿಪ್ರಾಯಪಟ್ಟರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೋದಿ ಅವರು ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತು ನೀಡಿದ್ದಾರೆ. ಬಡವರಿಗೆ 3 ಕೋಟಿ ಮನೆಗಳು, ಜಲಜೀವನ್‌ ಮಿಷನ್‌ ಯೋಜನೆ ಮೂಲಕ 13 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರು, 11 ಕೋಟಿ ಮನೆಗಳಿಗೆ ಉಜ್ವಲ ಸೌಲಭ್ಯ... ಹೀಗೆ ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.

ಹದಗೆಟ್ಟ ಕಾನೂನು ವ್ಯವಸ್ಥೆ

‘ಕಾಂಗ್ರೆಸ್‌ ಸರ್ಕಾರ ಬರ ನಿರ್ವಹಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಹಾನಗಲ್‌ ಸಾಮೂಹಿಕ ಅತ್ಯಾಚಾರ ಮತ್ತು ಬೆಳಗಾವಿ ಜಿಲ್ಲೆಯ ವಂಟಮೂರಿ ಪ್ರಕರಣಗಳು ನಾಗರಿಕರನ್ನು ತಲೆ ತಗ್ಗಿಸುವಂತೆ ಮಾಡಿವೆ. ದೇಶದ್ರೋಹಿ ಕೃತ್ಯಗಳು ಹೆಚ್ಚಾಗಿವೆ. ದೇಶಭಕ್ತರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಕೃಷಿ ಯೋಜನೆ ಮತ್ತು ಸೌಲಭ್ಯಗಳನ್ನು ನಿಲ್ಲಿಸುವ ಮೂಲಕ ರೈತ ವಿರೋಧಿ ಸರ್ಕಾರ ಎಂಬ ಅಪಖ್ಯಾತಿ ಗಳಿಸಿದೆ’ ಎಂದು ಆರೋಪಿಸಿದರು.

ಸುಳ್ಳು ಹೇಳಿ ಹಾದಿ ತಪ್ಪಿಸುವ ಸಿಎಂ

‘ಮನಮೋಹನ್‌ ಸಿಂಗ್‌ ಅವಧಿಯಲ್ಲಿ ರಾಜ್ಯಕ್ಕೆ ₹81 ಸಾವಿರ ಕೋಟಿ ಬಂದಿದ್ದರೆ, ಮೋದಿ ಅವಧಿಯಲ್ಲಿ ₹2 ಲಕ್ಷಕ್ಕೂ ಅಧಿಕ ಹಣ ಬಿಡುಗಡೆಯಾಗಿದೆ. ಮೋದಿಜಿ ಬಂದ ನಂತರ ರಾಜ್ಯಕ್ಕೆ ಕೊಡುವ ಪಾಲನ್ನು ಶೇ 32ರಿಂದ ಶೇ 42ಕ್ಕೆ ಹೆಚ್ಚಿಸಿದ್ದಾರೆ. ಇದೆಲ್ಲಾ ಗೊತ್ತಿದ್ದರೂ ಸಿದ್ದರಾಮಯ್ಯನವರು ಪದೇ ಪದೇ ಸುಳ್ಳು ಹೇಳುವ ಮೂಲಕ ರಾಜ್ಯದ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ’ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಗಿರೀಶ ತುಪ್ಪದ, ನಿರಂಜನ ಹೇರೂರು, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಮಂಜುನಾಥ ಗಾಣಿಗೇರ, ವರುಣ ಆನವಟ್ಟಿ ಇದ್ದರು.

‘ಜನರಿಗೆ ನೀರು ಕೊಡುವಲ್ಲಿ ಸರ್ಕಾರ ವಿಫಲ’

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ‘ಬೇಸಿಗೆಯ ಈ ಸಂದರ್ಭದಲ್ಲಿ ಜನರು ಕುಡಿಯುವ ನೀರಿಗೆ ಬವಣೆ ಪಡುವಂತಾಗಿದೆ. ಎಲ್ಲ ಕಡೆ ಖಾಸಗಿ ಟ್ಯಾಂಕರ್‌ಗಳ ಭರಾಟೆ ಜೋರಾಗಿದೆ. ರಾಜ್ಯ ಸರ್ಕಾರ ಜನರಿಗೆ ಕುಡಿಯುವ ನೀರು ಕೊಡುವಲ್ಲಿ ವಿಫಲವಾಗಿದೆ. ಇದು ಬೇಜವಾಬ್ದಾರಿ ಸರ್ಕಾರವಾಗಿದ್ದು, ಜನ ಕಲ್ಯಾಣದ ಬಗ್ಗೆ ನಿರ್ಲಕ್ಷ್ಯ ತೋರಿದೆ’ ಎಂದು ಟೀಕಿಸಿದರು.

‘ಗೃಹಲಕ್ಷ್ಮಿ ಹಣ ಎರಡು ತಿಂಗಳಿಂದ ಗೃಹಿಣಿಯರ ಖಾತೆಗೆ ಬಂದಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳು ಬಡ ಜನರನ್ನು ತಲುಪುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಬಂದ ನಂತರ ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವೊಬ್ಬ ಸಚಿವರೂ ಮೃತ ರೈತರ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವನ ಹೇಳಿಲ್ಲ, ಪರಿಹಾರವನ್ನೂ ಕೊಟ್ಟಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಬರ ಪರಿಹಾರ ನೀಡಿಲ್ಲ’ ಎಂದು ದೂರಿದರು.

ದರಿದ್ರ ಸ್ಥಿತಿಗೆ ರಾಜ್ಯ

‘ಸದನದಲ್ಲಿ ಮಸೂದೆಗಳನ್ನು ಪಾಸು ಮಾಡಲು ಎಲ್ಲ ಸಚಿವರು ಆಸಕ್ತಿ ತೋರಿದರು. ಆದರೆ, ರೈತರ ಸಮಸ್ಯೆ ಬಗ್ಗೆ, ಜನರು ಗುಳೇ ಹೋಗುತ್ತಿರುವ ಬಗ್ಗೆ ಗಂಭೀರ ಚರ್ಚೆಯನ್ನೇ ನಡೆಸಲಿಲ್ಲ. ಗ್ಯಾರಂಟಿ ಯೋಜನೆಗಳಿಗಾಗಿ ಸಾಲ ಮಾಡಿ, ರಾಜ್ಯವನ್ನು ದರಿದ್ರ ಸ್ಥಿತಿಗೆ ಸಿದ್ದರಾಮಯ್ಯ ಕೊಂಡೊಯ್ಯುತ್ತಿದ್ದಾರೆ. ಸಿದ್ದರಾಮಯ್ಯನವರ ಸುಳ್ಳುಗಳಿಗೆ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT