ಶನಿವಾರ, ಮೇ 28, 2022
30 °C
ಸಂಗೂರು ಬಳಿ ದುರ್ವಾಸನೆ ಬೀರುತ್ತಿರುವ ನದಿ: ಅನಾರೋಗ್ಯ ಪೀಡಿತರಾಗುತ್ತಿರುವ ಗ್ರಾಮಸ್ಥರು

‘ವರದೆ’ಯ ಒಡಲಿಗೆ ವಿಷಯುಕ್ತ ನೀರು!

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ರಾಸಾಯನಿಕ ಮಿಶ್ರಿತ ವಿಷಯುಕ್ತ ನೀರು ಸೇರಿದ ಪರಿಣಾಮ ಜಿಲ್ಲೆಯ ‘ಜೀವನದಿ’ ಎನಿಸಿರುವ ವರದಾ ನದಿಯ ಒಡಲು ಸಂಪೂರ್ಣ ಮಲಿನಗೊಂಡಿದೆ. ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಅದರ ದುರ್ವಾಸನೆಯು ಸಂಗೂರು ಗ್ರಾಮಸ್ಥರನ್ನು ಉಸಿರುಗಟ್ಟಿಸುತ್ತಿದೆ.

ಎರಡು ತಿಂಗಳಿಂದ ಸಂಗೂರು ಸಕ್ಕರೆ ಕಾರ್ಖಾನೆಯಿಂದ ಹರಿದು ಬರುತ್ತಿರುವ ಹಾನಿಕಾರಕ ಕೊಳಚೆ ನೀರು ಕೃಷಿ ಜಮೀನುಗಳನ್ನು ಹಾದು ವರದಾ ನದಿಯನ್ನು ಸೇರುತ್ತಿದೆ. ಕುಡಿಯುವ ನೀರಿನ ಮೂಲವಾಗಿರುವ ವರದಾ ನದಿ ಕಲುಷಿತಗೊಂಡಿದ್ದು, ಇದೇ ನೀರನ್ನು ಕುಡಿದ ಗ್ರಾಮಸ್ಥರಿಗೆ ಅನೇಕ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. 

ವರದಾ ನದಿಯ ನೀರು ದೇವಿಹೊಸೂರು ಗ್ರಾಮದಲ್ಲಿರುವ ಬಹುಗ್ರಾಮ ಕುಡಿಯುವ ನೀರು ಘಟಕಕ್ಕೆ ಸರಬರಾಜಾಗುತ್ತದೆ. ಅಲ್ಲಿಂದ ಹೊಸಳ್ಳಿ, ದೇವಿಹೊಸೂರು, ವೆಂಕಟಾಪುರ, ಗೌರಾಪುರ, ಸಂಗೂರು, ಬೆಂಚಿಹಳ್ಳಿ ಮುಂತಾದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ನದಿ ಅಶುದ್ಧಗೊಂಡಿರುವ ಕಾರಣ, ನೀರು ಕುಡಿಯಲು ಯೋಗ್ಯವಲ್ಲ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 

ಉಸಿರುಗಟ್ಟಿಸುತ್ತಿರುವ ದುರ್ವಾಸನೆ:

‘ನೀರು ಮಲಿನಗೊಂಡು, ಕೆಟ್ಟ ವಾಸನೆ ಬರುತ್ತಿದೆ. ನದಿಯ ದಡದಲ್ಲಿ ಹತ್ತು ನಿಮಿಷ ನಿಲ್ಲಲು ಸಾಧ್ಯವಾಗುತ್ತಿಲ್ಲ. ಬಾಂದಾರ ದಾಟಿ ಕೃಷಿ ಜಮೀನಿಗೆ ಹೋಗುವ ರೈತರು ಮೂಗು ಮುಚ್ಚಿಕೊಂಡು ಓಡಾಡುವ ಸಂಕಷ್ಟ ಎದುರಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಸರ್ಕಾರಿ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ’ ಎಂದು ರೈತರು ದೂರಿದರು. 

‘ನದಿಯ ಹೊಲಸು ನೀರಿನಲ್ಲಿ ಈಜಾಡಿದ ಪರಿಣಾಮ ಮೈಯಲ್ಲಿ ಗುಳ್ಳೆಗಳು ಎದ್ದು, ಅಲರ್ಜಿ ಸಮಸ್ಯೆ ಕಾಣಿಸಿಕೊಂಡಿದೆ. ನದಿಯಿಂದ ಬರುತ್ತಿರುವ ದುರ್ನಾತದಿಂದ ಆಸ್ತಮಾ ಇರುವವರಿಗೆ ತೀವ್ರ ತೊಂದರೆಯಾಗುತ್ತದೆ. ಗ್ರಾಮಸ್ಥರು ಅನಾರೋಗ್ಯ ಪೀಡಿತರಾದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಗ್ರಾಮದ ಯುವಕ ಶಂಭು ಕರ್ಜಗಿ ನೋವು ತೋಡಿಕೊಂಡರು. 

ಕಾರ್ಖಾನೆಯವರ ಕಣ್ಣಾಮುಚ್ಚಾಲೆ:

‘ರೈತರ ಪ್ರತಿಭಟನೆ ಜೋರಾದ ನಂತರ ಕಾರ್ಖಾನೆಯವರು ಹಗಲಿನ ವೇಳೆ ಕೊಳಚೆ ನೀರನ್ನು ನಿಲ್ಲಿಸಿ, ರಾತ್ರಿ ವೇಳೆ ನದಿಗೆ ಬಿಡುವ ಮೂಲಕ ಗ್ರಾಮಸ್ಥರ ಬಾಳಿನಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಸಂಗೂರು ಬಳಿಯ ಬಾಂದಾರಾದ ಗೇಟ್‌ ತೆರೆದು ಮಲಿನಯುಕ್ತ ನೀರನ್ನು ಹರಿಬಿಟ್ಟರೆ, ಮುಖ್ಯಮಂತ್ರಿ ತವರು ಕ್ಷೇತ್ರದ ಶಿಗ್ಗಾವಿ–ಸವಣೂರ ಏತ ನೀರಾವರಿ ಕಾಲುವೆಗೆ ಹೋಗಿ, ಅಲ್ಲಿಂದ ಕೆರೆಗಳನ್ನು ಸೇರಿ ಅಲ್ಲಿಯೂ ಸಮಸ್ಯೆ ಸೃಷ್ಟಿಯಾಗುತ್ತದೆ. ನದಿಯ ನೀರು ಖಾಲಿಯಾದರೆ ಸಂಗೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ’ ಎಂದು ರೈತ ಮುಖಂಡರಾದ ಭುವನೇಶ್ವರ ಶಿಡ್ಲಾಪುರ, ಬಸವರಾಜ ಗಂಟಿಸಿದ್ದಪ್ಪನವರ ಸಮಸ್ಯೆ ಬಿಚ್ಚಿಟ್ಟರು. 

ಕೃಷಿ ಜಮೀನಿಗೂ ಧಕ್ಕೆ

ಸಕ್ಕರೆ ಕಾರ್ಖಾನೆಯ ಕಲುಷಿತ ನೀರು ಕೃಷಿ ಜಮೀನುಗಳ ಮೂಲಕ ಹಾದು ಬರುವ ಕಾರಣ ಜಮೀನಿನ ಫಲವತ್ತತೆ ನಾಶವಾಗುತ್ತಿದೆ. ಅಡಿಕೆ, ಕಬ್ಬು, ಸೋಯಾಬಿನ್‌ ಬೆಳೆಗಳು ಸೊರಗಿ, ಇಳುವರಿ ಕುಂಠಿತಗೊಳ್ಳುವ ಆತಂಕವನ್ನು ಸೃಷ್ಟಿಸಿದೆ ಎಂದು ರೈತರು ಅಳಲು ತೋಡಿಕೊಂಡರು. 

‘ನದಿಯ ನೀರು ಕುಡಿದ ಜಾನುವಾರುಗಳು ಕಾಯಿಲೆಗೆ ತುತ್ತಾಗುತ್ತಿವೆ. ಹಾಲು ಕರೆಯುವ ಎಮ್ಮೆ ಮತ್ತು ಹಸುಗಳು ಈ ರಾಸಾಯನಿಕ ಮಿಶ್ರಿತ ನೀರನ್ನು ಕುಡಿದರೆ ಹಾಲಿನ ಜತೆ ವಿಷಯುಕ್ತ ಪದಾರ್ಥ ಮನುಷ್ಯರ ದೇಹ ಸೇರಿದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಗ್ರಾಮಸ್ಥರಾದ ಉಡಚಪ್ಪ ವರ್ದಿ, ಮಲ್ಲೇಶಪ್ಪ ಪೂಜಾರ ಸಮಸ್ಯೆ ತೋಡಿಕೊಂಡರು. 

*

ಕಲುಷಿತ ನೀರನ್ನು ನದಿಗೆ ಬಿಡದಂತೆ ಕಾರ್ಖಾನೆಯವರಿಗೆ ಸೂಚಿಸಲಾಗಿದೆ. ನದಿಯ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ
– ಮಹೇಶ್ವರಪ್ಪ ಎಂ.ಎಸ್‌., ಪರಿಸರ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ

*

ನದಿ ನೀರು ಮಲಿನಗೊಂಡ ಬಗ್ಗೆ ಸಂಗೂರು ಸಕ್ಕರೆ ಕಾರ್ಖಾನೆಗೆ ನೋಟಿಸ್‌, ತಿಳಿವಳಿಕೆ ಪತ್ರ ಕಳುಹಿಸಿದರೂ, ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ
– ಜರೀನಾಬೇಗಂ ಕಡಿವಾಳ, ಪಿಡಿಒ, ಸಂಗೂರು ಗ್ರಾಮ ಪಂಚಾಯ್ತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು