ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ| ಸುಡುಗಾಡು ಸಿದ್ಧರಿಗೆ ಸ್ವಂತ ಸೂರಿಲ್ಲ, ಸಮಸ್ಯೆಗಳಿಗೆ ಕೊನೆಯಿಲ್ಲ!

ಶೌಚಾಲಯ, ಚರಂಡಿ ಸೌಲಭ್ಯವಿಲ್ಲದೆ ಸುಡುಗಾಡು ಸಿದ್ಧರ ಪರದಾಟ; ರಾತ್ರಿಯಾದರೆ ವಿಷಜಂತುಗಳ ಕಾಟ
Last Updated 21 ಜನವರಿ 2020, 19:30 IST
ಅಕ್ಷರ ಗಾತ್ರ

ಹಾವೇರಿ: ಅವರು ಹಾವು– ಚೇಳುಗಳನ್ನು ಕ್ಷಣಾರ್ಧದಲ್ಲೇ ಸೃಷ್ಟಿಸುತ್ತಾರೆ, ಮುಳ್ಳುಗಳನ್ನೇ ಗುಳುಂ ಮಾಡುತ್ತಾರೆ, ನಾಣ್ಯಗಳನ್ನು ಬಾಯಲ್ಲಿ ನುಂಗಿ ನೆರೆದವರನ್ನು ಚಕಿತಗೊಳಿಸುತ್ತಾರೆ... ಹೀಗೆ ‘ಜಾದೂ ಕಲೆ’ಯನ್ನೇ ಜೀವನದ ಉಸಿರಾಗಿಸಿಕೊಂಡವರು ಸುಡುಗಾಡು ಸಿದ್ಧ ಸಮುದಾಯದವರು. ಅಷ್ಟೇ ಏಕೆ, ಊರುಗಳಿಗೆ ಹೋಗಿ ‘ಶಕುನ’ ನುಡಿಯುವುದರಲ್ಲೂ ಇವರು ಸಿದ್ಧಹಸ್ತರು.

ಆದರೆ, ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳಿಂದ ಪಾರಾಗುವ ‘ಜಾದೂ ವಿದ್ಯೆ’ ಇವರಿಗೆ ತಿಳಿದಿಲ್ಲ. ಇವರ ಮನೆಯ ಆಸುಪಾಸಿನಲ್ಲಿ ಇದುವರೆಗೂ ಹಾಲಕ್ಕಿ ಕುಳಿತು ‘ಶುಭ ಶಕುನ’ ನುಡಿದಿಲ್ಲ. ಇವರ ಗ್ರಹಗತಿ ನಿವಾರಣೆಗೆ ಯಾವ ‘ಶಂಖನಾದ‘ವೂ ಮೊಳಗಿಲ್ಲ!

ಹೌದು, ಹಾವೇರಿ ನಗರದ ಹೊರವಲಯದ ಗಣಜೂರು ರಸ್ತೆ ಪಕ್ಕ ಸರ್ಕಾರಿ ಜಮೀನಿನಲ್ಲಿ ‘ತಗಡಿನ ಶೆಡ್ಡು’ ಮತ್ತು ‘ಕೌದಿ ಗುಡಿಸಲು’ಗಳಲ್ಲಿ ತಾತ್ಕಾಲಿಕ ನೆಲೆ ಕಂಡು ಕೊಂಡಿರುವ ಸುಡುಗಾಡು ಸಿದ್ಧರ ಮನೆಯ ಅಂಗಳಕ್ಕೆ ಕಾಲಿಟ್ಟರೆ ಸಮಸ್ಯೆಗಳೇ ಕಣ್ಣಿಗೆ ರಾಚುತ್ತವೆ.

ಇಲ್ಲಿನ ತಗಡಿನ ಶೆಡ್ಡುಗಳಲ್ಲಿ 26 ಕುಟುಂಬಗಳ 110 ಮಂದಿ ವಾಸಿಸುತ್ತಿದ್ದಾರೆ. 20 ಮಕ್ಕಳು ಶಾಲೆಗೆ ಹೋಗುತ್ತಾರೆ. ಈ ಸುಡುಗಾಡು ಸಿದ್ಧ ಸಮುದಾಯದವರು ಪರಿಶಿಷ್ಟ ಜಾತಿಗೆ (ಎಸ್‌.ಸಿ) ಸೇರುತ್ತಾರೆ. ಇವರು ಮೂಲತಃ ಅಲೆಮಾರಿಗಳು. ಕಾಲ ಬದಲಾದಂತೆ ಒಂದೆಡೆ ನೆಲೆ ನಿಲ್ಲಬೇಕು, ಸ್ವಂತ ಸೂರು ಕಟ್ಟಿಕೊಳ್ಳಬೇಕು ಎಂದು ಹಂಬಲಿಸುತ್ತಿದ್ದಾರೆ. ಮೂಲಸೌಕರ್ಯ ವಂಚಿತ ಈ ಸಮುದಾಯದವರು ಹೆಚ್ಚು ಓದಿದವರಲ್ಲ. ಎರಡಕ್ಷರ ಕಲಿತವರು ಸೌಲಭ್ಯಕ್ಕಾಗಿ ಕಾಗದ ಪತ್ರ ಹಿಡಿದು, ಎಡತಾಕದ ಜನಪ್ರತಿನಿಧಿಗಳ ಮನೆಯಿಲ್ಲ, ಸರ್ಕಾರಿ ಕಚೇರಿಗಳಿಲ್ಲ!

10x13 ಅಡಿ ವಿಸ್ತೀರ್ಣದ ಉಸಿರುಗಟ್ಟಿಸುವ ಕಿರಿದಾದ ಶೆಡ್‌ಗಳಲ್ಲಿ ಐದಾರು ಮಂದಿ ವಾಸಿಸುತ್ತಿದ್ದಾರೆ. ಕೆಲವರು ಜಾಗ ಸಾಲುವುದಿಲ್ಲ ಎಂದು ಹಳೆಯ ಕೌದಿ ಗುಡಿಸಲುಗಳಿಗೆ ಹೋಗಿ ಮಲಗುತ್ತಾರೆ. ವಿಷಜಂತುಗಳ ಕಾಟದಿಂದ ನಿವಾಸಿಗಳು ರೋಸಿ ಹೋಗಿದ್ದಾರೆ. ನಿತ್ಯ ಒಂದಾದರೂ ಹಾವು ಅಥವಾ ಚೇಳನ್ನು ಹೊಡೆದು ಹಾಕುತ್ತಾರೆ. ಒಂದನೇ ತರಗತಿಯ ಬಾಲಕನೊಬ್ಬ ಮಲಗಿದ್ದಾಗ ಹಾವು ಕಡಿತದಿಂದ ಮೃತಪಟ್ಟಿರುವ ಘಟನೆ ಇವರನ್ನು ಬೆಚ್ಚಿ ಬೀಳಿಸಿದೆ.

ಕೊಳಚೆ ನೀರಿನ ದುರ್ವಾಸನೆ:

ಚರಂಡಿ ವ್ಯವಸ್ಥೆಯಿಲ್ಲದೆ ಮನೆಯ ಅಂಗಳದಲ್ಲೇ ಕೊಳಚೆ ನೀರು ಹರಿಯುತ್ತದೆ. ಈ ದುರ್ವಾಸನೆಯ ನಡುವೆಯೇ ಅಮ್ಮಂದಿರು ಮಕ್ಕಳಿಗೆ ಘಮ–ಘಮ ಎನಿಸುವ ಅಡುಗೆ ಮಾಡಿ ಬಡಿಸಬೇಕು. ಕೊಳಕು ನೀರಿನ ಪಕ್ಕದಲ್ಲೇ ಥಳ– ಥಳ ಹೊಳೆಯುವಂತೆ ಪಾತ್ರೆಗಳನ್ನು ತೊಳೆಯಬೇಕು. ರೋಗ ಹರಡುವ ಸೊಳ್ಳೆ–ನೊಣಗಳಿಂದ ಕಂದಮ್ಮಗಳನ್ನು ಪಾರು ಮಾಡಿ ಜೋಗುಳ ಹಾಡಿ ಮಲಗಿಸಬೇಕು.

ಶೌಚಕ್ಕೆ ಬಯಲೇ ಗತಿ!

‘ನಮಗೆ ಇಂದಿಗೂ ಶೌಚಾಲಯ ಸೌಲಭ್ಯವಿಲ್ಲ. ಹಾಗಾಗಿ ಶೌಚಕ್ಕಾಗಿ ನಿತ್ಯ ಕೆರೆ–ಕಟ್ಟೆ, ಹೊಲಗಳತ್ತ ಅರ್ಧ ಕಿ.ಮೀ. ನಡೆದು ಹೋಗಬೇಕು. ನಮಗೆ (ಮಹಿಳೆಯರು, ಬಾಲಕಿಯರು) ಚೊಂಬು ಹಿಡಿದುಕೊಂಡು ಹೋಗಲು ತುಂಬಾ ಹಿಂಸೆಯಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ನಮ್ಮ ಗೋಳು ಕೇಳುವವರಿಲ್ಲ’ ಎಂದು ಮಹಿಳೆಯರು ಅಳಲು ತೋಡಿಕೊಂಡರು.

‘ನಮ್ಮ ತಾತಾ ಮತ್ತು ತಂದೆ ಒಂದೊಂದು ಊರಿನಲ್ಲಿ ಎರಡೆರಡು ದಿನ ಇರುತ್ತಾ, 40 ವರ್ಷಗಳ ಹಿಂದೆ ಹಾವೇರಿ ನಗರಕ್ಕೆ ಬಂದು ನೆಲೆ ನಿಂತರು. ಆರಂಭದಲ್ಲಿ ರೈಲ್ವೆ ಸ್ಟೇಷನ್‌, ಅಶ್ವಿನಿ ನಗರ, ಉದ್ಯಾನಗಳು... ಹೀಗೆ ಒಟ್ಟು 34 ಕುಟುಂಬಗಳು ಅಲ್ಲಿ ಇಲ್ಲಿ ವಾಸಿಸುತ್ತಿದ್ದವು. ಹಾವೇರಿ ನಗರಸಭೆಯವರು ಎಲ್ಲರನ್ನೂ ಎತ್ತಂಗಡಿ ಮಾಡಿಸಿದರು. 2008ರಲ್ಲಿ ಶಾಂತಿನಗರ ಸಮೀಪವಿರುವ ಈ ಸರ್ಕಾರಿ ಭೂಮಿಗೆ ಬಂದೆವು. ಮುಳ್ಳುಕಂಟಿಗಳಿಂದ ಕೂಡಿದ್ದ ಈ ಜಾಗ ವಾಸಕ್ಕೆ ಯೋಗ್ಯವಾಗಿರಲಿಲ್ಲ. ಆದರೆ, ಬೇರೆ ಸ್ಥಳವಿಲ್ಲದ ಕಾರಣ ಮುಳ್ಳಿನ ಗಿಡಗಳನ್ನು ತೆಗೆದು, ಸ್ವಚ್ಛ ಮಾಡಿ ‘ಕೌದಿ ಗುಡಿಸಲು’ ಹಾಕಿಕೊಂಡೆವು ಎಂದು ನಿವಾಸಿ ಶೆಟ್ಟಿ ವಿಭೂತಿ ತಿಳಿಸಿದರು.

ನೆರೆ ಎಳೆದ ಬರೆ:

2015ರಲ್ಲಿ ನೆರೆ ಬಂದಾಗ 20 ದಿನ ಗಂಜಿ ಕೇಂದ್ರಗಳಲ್ಲಿ ಇವರು ಆಶ್ರಯ ಪಡೆದಿದ್ದರು. ಆಗ ಹೊಸಮಠ, ಹುಕ್ಕೇರಿಮಠದ ಸ್ವಾಮೀಜಿಗಳು ಮತ್ತು ಸರ್ಕಾರಿ ಅಧಿಕಾರಿಗಳು ನೆರವು ನೀಡಿದರು. ನೆರೆ ಇಳಿದ ನಂತರ ಮತ್ತೆ ಅನಿವಾರ್ಯವಾಗಿ ಕೌದಿ ಗುಡಿಸಲುಗಳಿಗೆ ಹಿಂದಿರುಗಿದರು.

2019ರ ಆಗಸ್ಟ್‌ನಲ್ಲಿ ಬಂದ ಭೀಕರ ಪ್ರವಾಹಕ್ಕೆ ಅಕ್ಷರಶಃ ಈ ನಿವಾಸಿಗಳು ನಲುಗಿ ಹೋದರು. ತಗ್ಗು ಪ್ರದೇಶಗಳಲ್ಲಿದ್ದ ಗುಡಿಸಲುಗಳಲ್ಲಿ ಸೊಂಟದ ಮಟ್ಟ ನೀರು ನಿಂತಿತು. ಪಾತ್ರೆ–ಪಗಡೆ, ದವಸ–ಧಾನ್ಯ, ಬಟ್ಟೆ–ಬರೆ ಎಲ್ಲವೂ ನೀರುಪಾಲಾದವು. ರಸ್ತೆ ಸಂಪರ್ಕ ಕಡಿತಗೊಂಡಿತು. ಪ್ರಾಣ ಉಳಿದರೆ ಸಾಕು ಎಂದು ಎತ್ತರದ ಪ್ರದೇಶಗಳಿಗೆ ಓಡಿ ಹೋಗಿ ಗಂಜಿ ಕೇಂದ್ರಗಳನ್ನು ಸೇರಿಕೊಂಡರು.

‘ಈ ಎಲ್ಲ ಸಮಸ್ಯೆಗಳಿಂದ ರೋಸಿ ಹೋಗಿ ದಯಾಮರಣಕ್ಕೆ ಅರ್ಜಿ ಬರೆಯಲು ಇಡೀ ಸಮುದಾಯ ಸಿದ್ಧವಾಗಿತ್ತು. ಮಠಗಳ ಅಜ್ಜನವರು, ಶಾಸಕರು, ಅಧಿಕಾರಿಗಳು ನಮ್ಮ ಮನವೊಲಿಸಿ ಅದನ್ನು ತಡೆದರು. ವಾಸ ಮಾಡಲು 10x13 ಅಡಿ ವಿಸ್ತೀರ್ಣದ 26 ತಗಡಿನ ಶೆಡ್ಡುಗಳನ್ನು ನಿರ್ಮಿಸಿಕೊಟ್ಟರು. ಪ್ರತೀ ಕುಟುಂಬಕ್ಕೆ ₹ 10 ಸಾವಿರ ಸಹಾಯಧನ ನೀಡಿದರು. ನಮ್ಮೆಲ್ಲ ಹೋರಾಟಗಳಿಂದ ಈಗ ನಮಗೆ ಕುಡಿಯುವ ನೀರು, ಬೀದಿ ದೀಪ, ಮನೆಗಳಿಗೆ ಸೌರದೀಪ ಸೌಲಭ್ಯಗಳು ಸಿಕ್ಕಿವೆ. ಆದರೆ, ಶೌಚಾಲಯ, ಚರಂಡಿ ವ್ಯವಸ್ಥೆ ಸಿಕ್ಕಿಲ್ಲ. ‘ಸ್ವಂತ ಸೂರು’ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ’ ಎನ್ನುತ್ತಾರೆ ನಿವಾಸಿ ಬಸವರಾಜ ಡಿ.ಬಾದಗಿ.

’ಸಿನಿಮಾ, ಇಂಟರ್‌ನೆಟ್‌ಗಳ ಭರಾಟೆಯಲ್ಲಿ ನಮ್ಮ ಜಾದೂ ಪ್ರದರ್ಶನ ಕಲೆಗೆ ಮನ್ನಣೆ ಸಿಗುತ್ತಿಲ್ಲ. ಹಳ್ಳಿಗಳಿಗೆ ಹೋದರೆ ಶಕುನ ಹೇಳುತ್ತೇವೆಂದರೆ ಕೇಳುವವರೇ ಇಲ್ಲ. ಹಾಗಾಗಿ ನಾವು ಅನಿವಾರ್ಯವಾಗಿ ರೈತರ ಜಮೀನುಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತೇವೆ. ಕೆಲವರು ಬಳೆ, ಕ್ಯಾಲೆಂಡರ್‌ ವ್ಯಾಪಾರ ಮಾಡುತ್ತಾರೆ. ಕೆಲವರಿಗೆ ಗ್ಯಾಸ್‌ ಸಂಪರ್ಕ ಸಿಕ್ಕಿದೆ. ಇನ್ನು ಕೆಲವರಿಗೆ ಉರುವಲು ಒಲೆಯೇ ಗತಿ. ಕೆಲವರಿಗೆ ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಸಿಕ್ಕಿಲ್ಲ. ಅವಕಾಶ ವಂಚಿತ ನಮ್ಮ ಸಮುದಾಯಕ್ಕೆ ಅರ್ಹ ಸವಲತ್ತುಗಳನ್ನು ಅಧಿಕಾರಿಗಳು ಕಲ್ಪಿಸಿಕೊಟ್ಟು, ನಮ್ಮನ್ನು ಸಮಾಜದ ಮುಖ್ಯವಾಹಿನಿಗೆ ಕರೆದೊಯ್ಯಬೇಕು’ ಎಂಬುದು ನಿವಾಸಿಗಳ ಒಕ್ಕೊರಲ ಒತ್ತಾಯ.


ಹಾವೇರಿ ನಗರದ ಹೊರವಲಯದ ಗಣಜೂರು ರಸ್ತೆ ಪಕ್ಕ ಸರ್ಕಾರಿ ಜಮೀನಿನಲ್ಲಿ ‘ತಗಡಿನ ಶೆಡ್ಡು’ ಮತ್ತು ‘ಕೌದಿ ಗುಡಿಸಲು’ಗಳಲ್ಲಿ ತಾತ್ಕಾಲಿಕ ನೆಲೆ ಕಂಡು ಕೊಂಡಿರುವ ಸುಡುಗಾಡು ಸಿದ್ಧರ ಮನೆಯ ಅಂಗಳಕ್ಕೆ ಕಾಲಿಟ್ಟರೆ ಸಮಸ್ಯೆಗಳೇ ಕಣ್ಣಿಗೆ ರಾಚುತ್ತವೆ. 40 ವರ್ಷಗಳಿಂದ ಅಲೆದಾಡುತ್ತಿರುವ ಈ 26 ಕುಟುಂಬಗಳಿಗೆ ‘ಸ್ವಂತ ಸೂರು’ ಎಂಬುದು ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಇವರ ಬದುಕು–ಬವಣೆಗಳ ಮೇಲೆ ‘ನಮ್ಮ ನಗರ ನಮ್ಮ ಧ್ವನಿ’ ಬೆಳಕು ಚೆಲ್ಲಿದೆ.

ಪ್ರತಿಕ್ರಿಯಿಸಿ: 94484 70141

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT