ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಎ ಮೀಸಲಾತಿಗೆ ಆಗ್ರಹ: ಡಿ.11ರಂದು ಮೋಟೆಬೆನ್ನೂರಲ್ಲಿ ಧರಣಿ–ಕೂಡಲಸಂಗಮ ಶ್ರೀ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹ
Published 4 ಡಿಸೆಂಬರ್ 2023, 13:17 IST
Last Updated 4 ಡಿಸೆಂಬರ್ 2023, 13:17 IST
ಅಕ್ಷರ ಗಾತ್ರ

ಶಿಗ್ಗಾವಿ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಲ್ಲಿ ಡಿ.11ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ 30 ನಿಮಿಷ ಲಿಂಗಪೂಜೆ ಮಾಡುವ ಮೂಲಕ ಪ್ರತಿಭಟನೆ ಮಾಡಲಾಗುತ್ತಿದೆ’ ಎಂದು ಕೂಡಲಸಂಗಮ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಭಕ್ತ ಸಮೂಹದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಸುಮಾರು ವರ್ಷಗಳಿಂದ ಪ್ರತಿಭಟನೆ ಮಾಡುತ್ತಾ ಬಂದಿದ್ದು, ಪಾದಯಾತ್ರೆ, ಧರಣಿ ಸತ್ಯಾಗ್ರಹಗಳನ್ನು ಮಾಡಲಾಗಿದೆ. ಆದರೆ ಹಿಂದಿನ ಸರ್ಕಾರ ಕೊನೆ ಗಳಿಗೆಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿ ನೀಡಿದ್ದು, ಅದು ಪರಿಪೂರ್ಣವಾಗಲಿಲ್ಲ. ಹೀಗಾಗಿ ಸಮಾಜಕ್ಕೆ ಅನ್ಯಾಯವಾಗಿದೆ’ ಎಂದರು.

ಪಂಚಮಸಾಲಿ ಸಮಾಜದ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ವಿನಯ ಕುಲಕರ್ಣಿ, ವಿಜಯ ಕಾಶಪ್ಪನವರ ಸೇರಿದಂತೆ ಹಲವು ಶಾಸಕರ ಸಭೆ ಬೆಳಗಾವಿಯಲ್ಲಿ ಮಂಗಳವಾರ ನಡೆಸಲಾಗುತ್ತಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವ ಚಿಂತನೆಯಿದೆ. ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ 2ಎ ಮೀಸಲಾತಿ ಪ್ರಕಟಿಸುವಂತೆ ಒತ್ತಾಯಿಸಲಾಗುವುದು’ ಎಂದರು.

‘ಈಗಾಗಲೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಿಂಗಪೂಜೆ ಮಾಡುವ ಮೂಲಕ ಪ್ರತಿಭಟನೆ ಆರಂಭಿಸಲಾಗಿದೆ. ಹಾವೇರಿ ಜಿಲ್ಲೆ ಹಿರೇಕೆರೂರ ಅಬಲೂರು ಗ್ರಾಮದಲ್ಲಿ ಪ್ರತಿಭಟನೆ ಮಾಡಲಾಗಿದೆ. ಕೆಲವು ಗ್ರಾಮೀಣ ಪ್ರತಿಭಟನೆಗಳನ್ನು ಹತ್ತಿರದ ರಾಜ್ಯ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದರು.

ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಸರಾಜ ಹಾಲಪ್ಪನವರ, ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಬಾಗೂರ, ಬಸವರಾಜ ರಾಗಿ, ಪಾಲಾಕ್ಷಪ್ಪ ಹಾವಣಗಿ, ಚಿ.ವಿ.ಮತ್ತಿಗಟ್ಟಿ, ಸಿದ್ದನಗೌಡ್ರ ಪಾಟೀಲ, ಈರಣ್ಣ ನವಲಗುಂದ, ನಂದೀಶ ಯಲಿಗಾರ, ಎಂಬಿ.ಹಳೆಮನಿ, ವಿಜಯ ಬುಳ್ಳಕ್ಕನವರ, ಸಿದ್ರಾಮಗೌಡ ಮೆಳ್ಳಾಗಟ್ಟಿ, ಧರ್ಮರಾಜ ಕೋರಿವಾಡ, ಸಂಜೀವ ಮಣ್ಣಣ್ಣವರ ಸೇರಿದಂತೆ ವಿವಿಧ ಸಮಾಜ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT