ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ರಸ್ತೆ ದುರಸ್ತಿಗೆ ಭಕ್ತರ ಆಗ್ರಹ

ನಗರಸಭೆ ಎದುರು ಪ್ರತಿಭಟನೆ ನಡೆಸಿ, ಪೌರಾಯುಕ್ತರಿಗೆ ಮನವಿ
Last Updated 18 ಫೆಬ್ರುವರಿ 2020, 12:43 IST
ಅಕ್ಷರ ಗಾತ್ರ

ಹಾವೇರಿ: ರಸ್ತೆ ದುರಸ್ತಿ, ಬೀದಿ ದೀಪ ಸರಿಪಡಿಸಬೇಕೆಂದು ಆಗ್ರಹಿಸಿ ದ್ಯಾಮವ್ವ ದೇವಿ ದೇವಸ್ಥಾನ ಸಮಿತಿ ಸದಸ್ಯರು ಸಾರ್ವಜನಿಕರು ನಗರಸಭೆ ಎದುರು ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಅಶೋಕ ಮುದಗಲ್ಲ ಮಾತನಾಡಿ, 115 ವರ್ಷಗಳ ನಂತರ ನಗರದ ಗ್ರಾಮದೇವತೆ ಜಾತ್ರೆಯು ಫೆ.21ರಿಂದ ಫೆ.28ರವರೆಗೆ ನಡೆಯುತ್ತಿದೆ. ಆದರೆ, ನಗರದಲ್ಲಿರುವ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತಗ್ಗು, ಗುಂಡಿಗಳು ಬಿದ್ದಿವೆ. ಈ ಭಾಗದಲ್ಲಿ ನಿತ್ಯ ಓಡಾಡುವ ಜನರಿಗೂ ಓಡಾಡುವುದಕ್ಕೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದ್ಯಾಮವ್ವ ಓಣಿ, ಹಳೇ ಅಂಚೆ ಕಚೇರಿ ರಸ್ತೆ, ಕಮಲ ಕಲ್ಯಾಣ ಮಂಟಪ ರಸ್ತೆ, ಜೈನರ ಓಣಿ, ಬಸ್ತಿ ಓಣಿ, ಗೌಳಿಗಲ್ಲಿ, ಯಾಲಕ್ಕಿ ಓಣಿ, ಪುರದ ಓಣಿ, ಮೇಲಿನ ಪೇಟೆ, ಎಂ.ಜಿ.ರಸ್ತೆ, ಬದಾಮಿ ನಾಯ್ಕರ ಅಂಗಡಿ, ಹಳೇ ಚಾವಡಿ ಸೇರಿದಂತೆ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಈ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಎರಡು ತಿಂಗಳ ಹಿಂದೆ ದುರಸ್ತಿ ಮಾಡುವಂತೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋ‍ಪಿಸಿದರು.

ನಗರದಲ್ಲಿ ಎಲ್ಲೆಂದರಲ್ಲಿ ಕಸ ಮತ್ತು ಘನತ್ಯಾಜ್ಯ ಬಿದ್ದಿರುತ್ತದೆ. ಅದನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ನಿತ್ಯ ತ್ಯಾಜ್ಯ ವಿಲೇವಾರಿ ಮಾಡಬೇಕು. ಈ ಬಗ್ಗೆಯೂ ಹಿಂದೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ನಗರಸಭೆಗೆ ಮುತ್ತಿಗೆ–ಎಚ್ಚರಿಕೆ:

ಫೆ.21ರಿಂದ ಜಾತ್ರೆ ಪ್ರಾರಂಭವಾಗುತ್ತದೆ. ಅದರೊಳಗಾಗಿ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ ಸಾರ್ವಜನಿಕರು ನಗರಸಭೆಗೆ ಮುತ್ತಿಗೆ ಹಾಕಿ, ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಭರವಸೆ:

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಬಸವರಾಜ ಜಿದ್ದಿ, ‘ಈಗಾಗಲೇ ಹುಬ್ಬಳ್ಳಿಯ ಗುತ್ತಿಗೆದಾರರಿಗೆ ಟೆಂಡರ್‌ ಆಗಿದೆ. ತಕ್ಷಣ ಕಾಮಗಾರಿ ಆರಂಭಿಸಲಾಗುತ್ತದೆ. ಚರಂಡಿ ಸ್ವಚ್ಛತೆ ಹಾಗೂ ಬೀದಿದೀಪ ಸರಿಪಡಿಸಲು ಪೌರಕಾರ್ಮಿಕರಿಗೆ ಹಾಗೂ ಸಿಬ್ಬಂದಿಗೆ ತಿಳಿಸುತ್ತೇನೆ. ಜಾತ್ರೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಹೂಗಾರ, ಗೌರವಾಧ್ಯಕ್ಷ ಗಂಗಾಧರ ಹೂಗಾರ ಸಾರ್ವಜನಿಕರು ಹಾಗೂ ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT