ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹ ಫಲಾನುಭವಿಗಳಿಗೆ ವಸತಿ ಕಲ್ಪಿಸಿ

‘ದಿಶಾ’ ಸಭೆಯಲ್ಲಿ ಸಂಸದ ಶಿವಕುಮಾರ ಉದಾಸಿ ಸೂಚನೆ
Last Updated 3 ಡಿಸೆಂಬರ್ 2022, 15:30 IST
ಅಕ್ಷರ ಗಾತ್ರ

ಹಾವೇರಿ: ‘ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ರಾಜ್ಯಕ್ಕೆ 18 ಲಕ್ಷ ಮನೆಗಳು ಮಂಜೂರಾಗಿವೆ. ಇವುಗಳ ಪೈಕಿ ಹಾವೇರಿ ಜಿಲ್ಲೆಗೆ ಸುಮಾರು 50 ಸಾವಿರ ಮನೆಗಳು ಮಂಜೂರಾಗಿವೆ. ಕೂಡಲೇ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದಿಂದ ನಿಖರ ಮಾಹಿತಿ ಪಡೆದು ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು’ ಎಂದು ಸಂಸದ ಶಿವಕುಮಾರ ಉದಾಸಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ‘ದಿಶಾ’ ಕಾರ್ಯಕ್ರಮದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಎಂಎವೈ ಯೋಜನೆಯಡಿ ಜಿಲ್ಲೆಗೆ ಬರಬೇಕಾದ ₹18.85 ಕೋಟಿ ಅನುದಾನ ತರಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣ ಮತ್ತು ನಗರ ವಸತಿ ಯೋಜನೆಯ ಪ್ರಗತಿ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಯಡಿ ಮಂಜೂರಾದ ಮನೆಗಳು, ಮಂಜೂರಾತಿಗೆ ಬಾಕಿ ಇರುವ ಮನೆಗಳ ಕುರಿತಂತೆ ವಾರದಲ್ಲಿ ಸಭೆ ನಡೆಸಿ, ನಿಖರವಾದ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸಂಸದ ಶಿವಕುಮಾರ ಉದಾಸಿ ಸೂಚಿಸಿದರು.

ಟ್ರ್ಯಾಕಿಂಗ್‌ ಸಿಸ್ಟಂ:

ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆಗಳ ಪ್ರಗತಿಯ ಮಾಹಿತಿಯನ್ನು ಜಿ.ಪಂ.ಮುಖ್ಯ ಕಾರ್ಯನಿರ್ವಣಾಧಿಕಾರಿಗಳಿಂದ ಮಾಹಿತಿ ಪಡೆದು, ನೀರು ನಿರ್ವಹಣೆ ಕುರಿತಂತೆ ಡಿಜಿಟಲ್‌ ಮಾನಿಟರಿಂಗ್ ಸಿಸ್ಟಂ ಅಳವಡಿಕೆಗೆ ಕ್ರಮವಹಿಸುವಂತೆ ಸೂಚನೆ ನೀಡಿದರು.

ಡೆಸ್ಕ್‌ ಕೊರತೆ ನೀಗಿಸಿ:

ಕೋವಿಡ್ ನಂತರದ ದಿನಗಳಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಳವಾಗಿದೆ. ಆದರೆ ಡೆಸ್ಕ್‌ಗಳ ಕೊರತೆ ಕಂಡುಬಂದಿದೆ. ಈ ಕುರಿತಂತೆ ಎಲ್ಲ ಶಾಸಕರು ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ವಿಶೇಷ ಅನುದಾನಕ್ಕೆ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸುವಂತೆ ಸಲಹೆ ನೀಡಿದರು.

ವಿಳಂಬ ಕಾಮಗಾರಿ:

ಸಮಾಜ ಕಲ್ಯಾಣ ಇಲಾಖೆಯಿಂದ ಆದರ್ಶ ಗ್ರಾಮ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ನಿಧಾನಗತಿಯಿಂದ ಗ್ರಾಮಸ್ಥರಿಂದ ದೂರುಗಳು ಬರುತ್ತಿವೆ. ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಣವೆಸುಟ್ಟ ಪ್ರಕರಣಗಳಲ್ಲಿ ತ್ವರಿತವಾಗಿ ಪರಿಹಾರ ಪಾವತಿಸಬೇಕು. ಪರಿಹಾರ ವಿಳಂಬ ಕುರಿತಂತೆ ದೂರುಗಳಿವೆ. ರೈತರ ದೂರಿಗೆ ತಕ್ಷಣ ಸ್ಪಂದಿಸಿ ಎಂದು ಸೂಚಿಸಿದರು.

ಮನೆ ಮನೆ ಸರ್ವೆ:

ಜಿಲ್ಲೆಯಲ್ಲಿ ಶೌಚಾಲಯ ರಹಿತರನ್ನು ಗುರುತಿಸಲು ಮನೆ– ಮನೆ ಸಮೀಕ್ಷೆ ಕೈಗೊಳ್ಳಲಾಗಿದೆ. ಶೌಚಾಲಯ ಇಲ್ಲದವರು ನೇರವಾಗಿ ಮಾಹಿತಿ ನೀಡಲು ಸಿಟಿಜನ್ ಆ್ಯಪ್‌ ಹೊರತರಲಾಗಿದೆ. ಈ ಆ್ಯಪ್‌ನಲ್ಲಿ ಅಪ್‍ಲೋಡ್ ಮಾಡಿದರೆ ಶೌಚಾಲಯ ಮಂಜೂರಾತಿ ನೀಡಲಾಗುವುದು ಎಂದು ಸಿಇಒ ಮೊಹಮ್ಮದ್‌ ರೋಶನ್‌ ಹೇಳಿದರು.

‘ಟಿ.ಸಿ ಅಳವಡಿಕೆಗೆ ಕ್ರಮವಹಿಸಿ’

ಹಾವೇರಿ ಜಿಲ್ಲೆಯಲ್ಲಿ 1.20 ಲಕ್ಷ ಪಂಪ್‌ಸೆಟ್‌, 33 ಸಾವಿರ ಟಿ.ಸಿ.ಗಳಿವೆ ಎಂದು ಮಾಹಿತಿ ನೀಡುತ್ತಿದ್ದೀರಿ. ಹೊಸ ಕೊಳವೆಬಾವಿಗಳು ಹೆಚ್ಚಾಗುತ್ತಿವೆ. ವಿದ್ಯುತ್‌ ಪರಿವರ್ತಕಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈಗಿರುವ ಟಿ.ಸಿ.ಗಳಿಗೆ ಓವರ್‌ ಲೋಡ್‌ ಆಗುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಬೇಸಿಗೆ ಕಾಲದಲ್ಲಿ ಸಮಸ್ಯೆ ಉಲ್ಬಣಗೊಳ್ಳತ್ತದೆ. ಫೆಬ್ರುವರಿಯೊಳಗೆ ಟಿಸಿ ಅಳವಡಿಕೆ, ಮಾರ್ಗಗಳ ಸೃಜನೆ ಕಾರ್ಯ ಪೂರ್ಣಗೊಳಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸಂಸದ ಶಿವಕುಮಾರ ಉದಾಸಿ ಸೂಚನೆ ನೀಡಿದರು.

‘ರೈಲ್ವೆ ಸಮಸ್ಯೆ: ಶೀಘ್ರ ಬಗೆಹರಿಸಿ’

ಜಿಲ್ಲೆಯಲ್ಲಿ ರೈಲ್ವೆ ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕೆಳಸೇತುವೆಗಳಲ್ಲಿ ರಸ್ತೆ ದುರಸ್ತಿ, ನೀರು ನಿಲುಗಡೆ ಸಮಸ್ಯೆಗಳ ನಿವಾರಣೆಗೆ ಎಂಜಿನಿಯರುಗಳನ್ನು ಕಳುಹಿಸಿ ಸಮಸ್ಯೆ ಪರಿಹರಿಸಬೇಕು. ಹಾವೇರಿ ಮತ್ತು ಬ್ಯಾಡಗಿ ರೈಲ್ವೆ ನಿಲ್ದಾಣದಲ್ಲಿ ಎಕ್ಸಲೇಟರ್ ಅಳವಡಿಸಬೇಕು. ಬ್ಯಾಡಗಿ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ವಾಶ್‍ರೂಂ ಅನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು. ಯಲವಿಗಿ ಮತ್ತು ಮತ್ತಿಗಟ್ಟಿಯಲ್ಲಿ ರೈಲ್ವೆ ಕ್ರಾಸಿಂಗ್ ಸಮಸ್ಯೆ ಇತ್ಯರ್ಥಪಡಿಸುವಂತೆ ಸಂಸದರು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ರೈಲ್ವೆ ಇಲಾಖೆಯ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿವಿಜಯಾ, ಜಿ.ಪಂ. ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT