ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ರಾಜಕೀಯ ಅಧಿಕಾರಕ್ಕಾಗಿ ಈಗ ಶತ್ರುಗಳೇ ಮಿತ್ರರು!

ಕೆಪಿಜೆಪಿಯ ಆರ್. ಶಂಕರ್, ಕಾಂಗ್ರೆಸ್‌ನ ಕೆ.ಬಿ.ಕೋಳಿವಾಡ ಅವರಿಗೆ ಪ್ರತಿಷ್ಠೆಯ ಕಣವಾದ ರಾಣೆಬೆನ್ನೂರು
Last Updated 1 ಡಿಸೆಂಬರ್ 2019, 13:01 IST
ಅಕ್ಷರ ಗಾತ್ರ

ಹಾವೇರಿ: ‘ಯಾರೂ ಶತ್ರುವೂ ಅಲ್ಲ, ಮಿತ್ರರೂ ಅಲ್ಲ’ ಎಂಬ ರಾಜಕೀಯ ನಾಣ್ಣುಡಿಗೆ ರಾಣೆಬೆನ್ನೂರು ಸಾಕ್ಷಿಯಂತಿದೆ. ವಿಧಾನಸಭಾ ಚುನಾವಣೆಯಲ್ಲಿ ಬೀದಿಗಿಳಿದು ಹೋರಾಡಿದ್ದ ಕೆಪಿಜೆಪಿ, ಕಾಂಗ್ರೆಸ್‌ ನಡುವೆ ನಗರಸಭೆಯಲ್ಲಿ ದೋಸ್ತಿಗೆ ‘ಹೈಕಮಾಂಡ್‌’ ಮಟ್ಟದಲ್ಲಿ ಯತ್ನ ನಡೆಯುತ್ತಿದೆ.

ಆದರೆ, ಇಲ್ಲಿ‘ನಮಗೇ ಅಧಿಕಾರ ಬೇಕು’ ಎಂದು ಎರಡೂ ಪಕ್ಷಗಳ ಮುಖಂಡರಾದ ಅರಣ್ಯ ಸಚಿವ ಆರ್. ಶಂಕರ್ ಮತ್ತು ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಪಟ್ಟು ಹಿಡಿದಿದ್ದಾರೆ. ಮೂರು ಅಭ್ಯರ್ಥಿಗಳ ಕೊರತೆ ಎದುರಿಸುತ್ತಿರುವ ಬಿಜೆಪಿ ಅವಕಾಶದ ಕದ ತೆರೆದು ಕಾಯುತ್ತಿದೆ.

ಇಲ್ಲಿ, ಕಾಂಗ್ರೆಸ್ ಮತ್ತು ಕೆಪಿಜೆಪಿ ವಿಧಾನಸಭೆ ಮಾತ್ರವಲ್ಲ, ನಗರಸಭೆ ಚುನಾವಣೆಯಲ್ಲೂ ಜಿದ್ದಿನಿಂದ ಹೋರಾಡಿತ್ತು. ಇವರ ಪೈಪೋಟಿಯ ಸಂಪೂರ್ಣ ಲಾಭ ಪಡೆಯಲು ಬಿಜೆಪಿ ವಿಫಲವಾಗಿದೆ. ನಾಯಕತ್ವ ಕೊರತೆಯೇ ಇದಕ್ಕೆ ಕಾರಣವಾಗಿದೆ. ಆದರೂ, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಫಲಿತಾಂಶ ಹೊರಬಿದ್ದ ಒಂದೇ ದಿನದಲ್ಲಿ ಕೋಳಿವಾಡ–ಶಂಕರ್ ದೋಸ್ತಿ ಮಾಡಿಸಲು ‘ಹೈಕಮಾಂಡ್‌’ ಸಜ್ಜಾಗಿದೆ. ಆದರೆ, ‘ಅಧ್ಯಕ್ಷ’ ಹುದ್ದೆಯನ್ನು ತೆಕ್ಕೆಗೆ ಪಡೆಯಲು ಸ್ಥಳೀಯವಾಗಿ ಕಸರತ್ತು ಮುಂದುವರಿದಿದೆ.

ರಾಣೆಬೆನ್ನೂರು ನಗರಸಭೆಗೆ 160 ವರ್ಷಗಳ ಇತಿಹಾಸವಿದ್ದು, 1858 ಜುಲೈ 1ರಂದು ಬ್ರಿಟಿಷ್‌ ಆಡಳಿತದಲ್ಲಿ ಆರಂಭಗೊಂಡಿತ್ತು. ಕಳೆದ ಸಾಲಿನ ರಾಜಕೀಯವನ್ನು ಅವಲೋಕಿಸಿದರೆ, ಶಂಕರ್ ಬೆಂಬಲಿಗರಾದ ಪಕ್ಷೇತರರು, ಬಿಜೆಪಿ ಹಾಗೂ ಕಾಂಗ್ರೆಸ್‌ ಜೊತೆ ಕೈ ಜೋಡಿಸಿದ್ದಾರೆ. ಆದರೆ, ಈಗ ಶಂಕರ್, ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರು.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಸೂತ್ರದೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸಿದ್ದೇವೆ. ಇದೇ ಸಿದ್ಧಾಂತಕ್ಕೆ ರಾಣೆಬೆನ್ನೂರಿನಲ್ಲೂ ಬದ್ಧವಾಗಿದ್ದೇವೆ. ನಮ್ಮ ಪಕ್ಷಕ್ಕೆ ನಾನೇ ಹೈಕಮಾಂಡ್. ಕಾಂಗ್ರೆಸ್ ಹೈಕಮಾಂಡ್‌ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಅರಣ್ಯ ಸಚಿವ ಆರ್‌.ಶಂಕರ್ ಪ್ರತಿಕ್ರಿಯಿಸಿದ್ದಾರೆ.

ಗರಿಷ್ಠ ನೋಟಾ: ಮೂರು ಪಕ್ಷಗಳ ಜಿದ್ದಾಜಿದ್ದಿ ಕಂಡ ಹಲವು ಮತದಾರರು ನೋಟಾ ಮೊರೆ ಹೋಗಿದ್ದಾರೆ. ಒಟ್ಟು 498 ನೋಟಾ ಮತಗಳು ಬಿದ್ದಿದ್ದು, ಜಿಲ್ಲೆಯಲ್ಲಿ ಗರಿಷ್ಠ ಎನ್ನಲಾಗಿದೆ.

ನೇರ ಸ್ಪರ್ಧೆ: ಒಟ್ಟು ನಗರಸಭೆಯಲ್ಲಿ ತ್ರಿಕೋನ ಸ್ಪರ್ಧೆಯಿದ್ದರೂ, ಬಹುತೇಕ ವಾರ್ಡ್‌ಗಳಲ್ಲಿ ಎರಡು ಪಕ್ಷಗಳ ನಡುವೆ ನೇರ ಸ್ಪರ್ಧೆ ನಡೆದಿದೆ. ಬಿಜೆಪಿಯ ರಾಮಪ್ಪ ಕೋಲಕಾರ, ಮಲ್ಲಿಕಾರ್ಜುನ ಅಂಗಡಿ, ಕವಿತಾ ಹೆದ್ದೇರಿ ಮತ್ತಿತರ ಮತ ಪ್ರಮಾಣದಲ್ಲಿ ನೇರ ಸ್ಪರ್ಧೆಯನ್ನು ಕಾಣಬಹುದಾಗಿದೆ.

32ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿಲ್ಲ. ಇಲ್ಲಿ ಕೆಪಿಜೆಪಿಯ ಪ್ರಕಾಶ್ ಬುರಡೀಕಟ್ಟಿ ಜಿಲ್ಲೆಯಲ್ಲೇ ಅತ್ಯಧಿಕ 1790 ಮತ ಪಡೆದಿರುವುದಲ್ಲದೇ, ಸುಮಾರು 1404 ಮತಗಳಿಂದ ಜಯಗಳಿಸಿದ್ದಾರೆ. 16ನೇ ವಾರ್ಡ್ ಖಾದರ್ ಅಬ್ಬಾಸ್ ಆಲಿ, 27ನೇ ವಾರ್ಡ್ ಸುಭಾಸ್ ಅಡ್ಡಿ ಮತ್ತಿತರ ಪಕ್ಷೇತರರು ಪ್ರಬಲ ಪೈಪೋಟಿ ನೀಡಿದ್ದಾರೆ. ನಿರ್ದಿಷ್ಟ ಸಮುದಾಯ ಪ್ರಬಲವಾಗಿರುವ ವಾರ್ಡ್‌ಗಳಲ್ಲಿ ಅದೇ ಸಮುದಾಯದ ಅಭ್ಯರ್ಥಿಯತ್ತ ಮತಗಳು ಕ್ರೋಡೀಕರಣಗೊಂಡಿವೆ.

ವಿಧಾನಸಭಾ ಚುನಾವಣೆಯಲ್ಲಿ ನಿರ್ದಿಷ್ಟ ಸಮುದಾಯಗಳ ಮತಗಳು ಕ್ರೋಡೀಕರಣಗೊಂಡಿದ್ದವು.

16 ಆಕಾಂಕ್ಷಿಗಳ ನಡುವಿನ ಹೊಂದಾಣಿಕೆಯ ಕೊರತೆಯಿಂದ ಬಿಜೆಪಿ ಮತ ಕ್ರೋಡೀಕರಣದಲ್ಲಿ ಹಿಂದುಳಿದಿತ್ತು. ಅದೇ ಛಾಯೆಯೂ ಈ ಚುನಾವಣೆಯಲ್ಲೂ ಗೋಚರಿಸಿದೆ.

ಅಧಿಕಾರದ ಸಲುವಾಗಿ ಯಾವುದೇ ರೀತಿಯ ಬೆಳವಣಿಗೆ ನಡೆದರೂ ವಿಶೇಷವಿಲ್ಲ. ಯಾರು ಯಾರ ಜೊತೆ ಹೊಂದಾಣಿಕೆ ನಡೆಸುತ್ತಾರೆ ಎಂಬುದೇ ಕೊನೆ ತನಕದ ಕುತೂಹಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT