ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ: ಕೆಲಸ ಕೊಟ್ಟ ಮಾಲೀಕನ ಮಗಳ ಮೇಲೆ ಅತ್ಯಾಚಾರ

* 12 ವರ್ಷದ ಬಾಲಕಿ ಎರಡು ತಿಂಗಳ ಗರ್ಭಿಣಿ * ಪೋಕ್ಸೊ ಕಾಯ್ದೆಯಡಿ ಆರೋಪಿ ಬಂಧನ
Published : 1 ಸೆಪ್ಟೆಂಬರ್ 2024, 16:10 IST
Last Updated : 1 ಸೆಪ್ಟೆಂಬರ್ 2024, 16:10 IST
ಫಾಲೋ ಮಾಡಿ
Comments

ಹಾವೇರಿ: ಜಿಲ್ಲೆಯ ಗ್ರಾಮವೊಂದರಲ್ಲಿ 12 ವರ್ಷ ವಯಸ್ಸಿನ ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆದಿದ್ದು, ಕೃತ್ಯ ಎಸಗಿದ್ದ ಆರೋಪಿ ಬಸನಗೌಡ (23) ಎಂಬುವವರನ್ನು ಹಾವೇರಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಬಸನಗೌಡ, ತಾನು ಕೆಲಸಕ್ಕಿದ್ದ ಮಾಲೀಕರ ಮಗಳ ಮೇಲೆಯೇ ನಿರಂತರವಾಗಿ ಒತ್ತಾಯದಿಂದ ಅತ್ಯಾಚಾರ ಎಸಗಿದ್ದಾನೆ. ವಿಷಯ ಗೊತ್ತಾಗುತ್ತಿದ್ದಂತೆ ಬಾಲಕಿಯ ತಾಯಿ ದೂರು ನೀಡಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಹಾಗೂ ಅತ್ಯಾಚಾರ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪ್ರಕರಣ ದಾಖಲಾಗುತ್ತಿದ್ದಂತೆ, ತನಿಖೆ ಕೈಗೊಂಡು ಆರೋಪಿ ಬಸನಗೌಡನನ್ನು ಸೆರೆ ಹಿಡಿಯಲಾಗಿದೆ. ಇದೊಂದು ಬಾಲಕಿಗೆ ಸಂಬಂಧಪಟ್ಟ ಸೂಕ್ಷ್ಮ ಪ್ರಕರಣವಾಗಿರುವುದರಿಂದ, ಬಾಲಕಿಯ ಗುರುತು ಗೌಪ್ಯವಾಗಿರಿಸಲಾಗಿದೆ’ ಎಂದು ತಿಳಿಸಿದರು.

ಪ್ರೀತಿಸುವುದಾಗಿ ನಾಟಕ: ‘ಆರೋಪಿ ಬಸನಗೌಡ, ಕೂಲಿ ನಂಬಿ ಜೀವನ ಸಾಗಿಸುತ್ತಿದ್ದ. ಸಂತ್ರಸ್ತ ಬಾಲಕಿಯ ತಂದೆ, ಬಸನಗೌಡನಿಗೆ ತನ್ನ ಮನೆಯಲ್ಲಿ ಕೆಲಸ ನೀಡಿದ್ದರು. ಉತ್ತಮ ರೀತಿಯಲ್ಲಿ ಸಂಬಳವನ್ನೂ ನೀಡುತ್ತಿದ್ದರು. ಮನೆ ಮಗನಂತೆ ನೋಡಿಕೊಳ್ಳುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮನೆ ಕೆಲಸದ ನೆಪದಲ್ಲಿ ಆರೋಪಿ, ಬಾಲಕಿಯನ್ನು ಮಾತನಾಡಲಾರಂಭಿಸಿದ್ದ. ಪರಸ್ಪರ ಪರಿಚಯವಾಗುತ್ತಿದ್ದಂತೆ, ಬಾಲಕಿ ಮೇಲೆ ಆರೋಪಿ ಕಣ್ಣು ಹಾಕಿದ್ದ. ಪ್ರೀತಿಸುವುದಾಗಿ ಹೇಳಿದ್ದ ಆರೋಪಿ, ಮದುವೆಯಾಗುವುದಾಗಿಯೂ ಹೇಳಿ ಬಾಲಕಿಯನ್ನು ಪುಸಲಾಯಿಸಿದ್ದ. ಬಾಲಕಿ ಅಪ್ರಾಪ್ತೆ ಎಂಬುದು ಗೊತ್ತಿದ್ದರೂ ದೈಹಿಕವಾಗಿ ಸಲುಗೆ ಬೆಳೆಸುವಂತೆ ಹಲವು ಆಮಿಷವೊಡ್ಡಿದ್ದ’ ಎಂದು ತಿಳಿಸಿವೆ.

ಜೀವ ಬೆದರಿಕೆಯೊಡ್ಡಿ ಅತ್ಯಾಚಾರ: ‘ಬಾಲಕಿಯ ಮನೆಯಲ್ಲಿ ಆರೋಪಿ ಬಸನಗೌಡ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ವರ್ಷದ ಹಿಂದೆಯಷ್ಟೇ ಬಾಲಕಿಯನ್ನು ಹೆಚ್ಚು ಪರಿಚಯ ಮಾಡಿಕೊಂಡಿದ್ದ ಆರೋಪಿ, ಪುಸಲಾಯಿಸಿ ಮೊದಲ ಬಾರಿಗೆ ಅತ್ಯಾಚಾರ ಎಸಗಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮೊದಲ ಬಾರಿ ಕೃತ್ಯ ಎಸಗಿದ್ದ ಆರೋಪಿ, ವಿಷಯವನ್ನು ಯಾರಿಗೂ ತಿಳಿಸದಂತೆ ಬಾಲಕಿಗೆ ಬೆದರಿಕೆಯೊಡ್ಡಿದ್ದ. ನಂತರ, ಜೀವ ಬೆದರಿಕೆಯೊಡ್ಡಿ ಪದೇ ಪದೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ’ ಎಂದು ಮೂಲಗಳು ಹೇಳಿವೆ.

ಗರ್ಭಿಣಿಯೆಂದ ವೈದ್ಯರು: ‘ಬಾಲಕಿ ಇತ್ತೀಚೆಗೆ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಇದನ್ನು ಗಮನಿಸಿದ್ದ ಪೋಷಕರು, ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ್ದ ವೈದ್ಯರು, ಬಾಲಕಿ ಎರಡು ತಿಂಗಳ ಗರ್ಭಿಣಿ ಎಂಬುದನ್ನು ತಿಳಿಸಿದ್ದರು’ ಎಂದು ಪೊಲೀಸ್ ಮೂಲಗಳು ವಿವರಿಸಿವೆ.

‘ಗರ್ಭಿಣಿಯೆಂಬ ವಿಷಯ ತಿಳಿದ ಪೋಷಕರು, ಅದಕ್ಕೆ ಕಾರಣ ಯಾರು ? ಎಂಬ ಬಗ್ಗೆ ಬಾಲಕಿಯನ್ನು ವಿಚಾರಿಸಿದ್ದರು. ಅವಾಗಲೇ ಬಾಲಕಿ, ಆರೋಪಿಯ ಕೃತ್ಯವನ್ನು ಪೋಷಕರ ಎದುರು ಬಿಚ್ಚಿಟ್ಟಿದ್ದರು. ಬಳಿಕವೇ ಪೋಷಕರು ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಮನೆ ಕೆಲಸಕ್ಕೆ ಯಾರನ್ನಾದರೂ ನೇಮಿಸಿಕೊಳ್ಳುವ ಮುನ್ನ ತಂದೆ–ತಾಯಿ ಎಚ್ಚರಿಕೆ ವಹಿಸಬೇಕು. ಅಪ್ರಾಪ್ತ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಇರಬೇಕು’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಮೂರು ವರ್ಷಗಳಿಂದ ಆರೋಪಿ ಕೆಲಸ ಪ್ರೀತಿಸುವುದಾಗಿ ಆರೋಪಿ ನಾಟಕ ಮಹಿಳಾ ಠಾಣೆ ಪೊಲೀಸರ ತನಿಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT