ಗುರುವಾರ , ಆಗಸ್ಟ್ 5, 2021
23 °C
ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣಕುಮಾರ್ ಮನವಿ

ಸಾಲ ಮರುಪಾವತಿಸಿ, ನಿಗಮ ಬೆಳೆಸಿ: ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿಗೆ ‘ನೇರ ಸಾಲ ಯೋಜನೆ’ ಹಾಗೂ ‘ಅರಿವು ಶೈಕ್ಷಣಿಕ ಸಾಲ ಯೋಜನೆ’ ಜಾರಿಯಲ್ಲಿವೆ. ಮುಂದಿನ ವರ್ಷದಿಂದ ‘ಫುಡ್ ಟ್ರಕ್ ಯೋಜನೆ’ ಹಾಗೂ ‘ಗಂಗಾಕಲ್ಯಾಣ’ ಯೋಜನೆಯಡಿ ನಿಗಮದಿಂದ ನೆರವು ಒದಗಿಸಲು ಕಾರ್ಯಕ್ರಮ ರೂಪಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣಕುಮಾರ್ ಹೇಳಿದರು.

ನಗರದ ಪ್ರವಾಸಿ ಮಂದಿರಲ್ಲಿ ಸೋಮವಾರ ನಿಗಮದ ನೇರ ಸಾಲ ಮಂಜೂರಾದ ಫಲಾನುಭವಿಗಳಿಗೆ ತಲಾ ₹1 ಲಕ್ಷ ಸಾಲ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು. ನಿಗಮದಿಂದ ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಸಕಾಲದಲ್ಲಿ ಮರುಪಾವತಿ ಮಾಡಿದರೆ ಆರ್ಯ ವೈಶ್ಯ ಸಮಾಜದ ಇತರ ಬಡ ಜನರಿಗೆ ಮತ್ತೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಆರ್ಯ ವೈಶ್ಯ ನಿಗಮ ಸ್ಥಾಪನೆಯಾದ ಮೇಲೆ ಆರ್ಯ ವೈಶ್ಯ ಜನಾಂಗದ ಬಡವರಿಗೆ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಶೇ 4ರ ವಾರ್ಷಿಕ ಬಡ್ಡಿ ದರದಲ್ಲಿ ಮತ್ತು ₹ 20 ಸಾವಿರ ಸಹಾಯಧನದೊಂದಿಗೆ ₹1 ಲಕ್ಷ ಸಾಲವನ್ನು ನೀಡಲು ನೇರ ಸಾಲ ಯೋಜನೆ ರೂಪಿಸಲಾಗಿದೆ. ಈ ಜನಾಂಗದ ಬಡ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಶೇ 2ರ ಬಡ್ಡಿ ದರದಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ನಿಗಮದಿಂದ ಜಾರಿಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ನೇರ ಸಾಲ ಯೋಜನೆಯಡಿ 1665 ಹಾಗೂ ಶೈಕ್ಷಣಿಕ ಅರಿವು ಸಾಲ ಯೋಜನೆಯಡಿ 65 ಜನರಿಗೆ ನೆರವು ಒದಗಿಸಲಾಗುವುದು ಎಂದರು. 

ಅನುದಾನ ಒದಗಿಸಲು ಕೋರಿಕೆ:

ಮುಂದಿನ ಆರ್ಥಿಕ ವರ್ಷದಿಂದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಆರ್ಯ ವೈಶ್ಯ ಸಮಾಜದ ಕೃಷಿ ಕಾರ್ಯಕ್ಕೆ ಬೆಂಬಲಿಸಲು ಗಂಗಾ ಕಲ್ಯಾಣ ಯೋಜನೆಯಡಿ ನೆರವು ನೀಡುವ ಉದ್ದೇಶ ಹೊಂದಲಾಗಿದೆ. ನಿಗಮದಿಂದ ಕೊಳವೆಬಾವಿ ಕೊರೆಸಿಕೊಡಲು ನಿಗಮಕ್ಕೆ ಕನಿಷ್ಠ ₹1 ಕೋಟಿ ಅನುದಾನ ಒದಗಿಸಲು ಮುಖ್ಯಮಂತ್ರಿ ಅವರನ್ನು ಕೋರಲಾಗಿದೆ ಹಾಗೂ ಸಣ್ಣ-ಪುಟ್ಟ ತಿಂಡಿ ತಿನಿಸು ತಯಾರಿಸುವ ವೃತ್ತಿಯಲ್ಲಿ ತೊಡಗಿರುವ ಆರ್ಯ ವೈಶ್ಯ ಸಮಾಜದ ಜನರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ‘ಫುಡ್ ಟ್ರಕ್’ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಈ ಕುರಿತಂತೆ ಚರ್ಚಿಸಲಾಗಿದೆ. ಒಂದು 100 ಫುಡ್ ಟ್ರಕ್‍ಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಆರ್ಯವೈಶ್ಯ ಜನಾಂಗದವರು ಆನ್‍ಲೈನ್ ಮುಖಾಂತರ ನಿಗಮಕ್ಕೆ ಅರ್ಜಿ ಸಲ್ಲಿಸಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಹಾಗೂ ಈ ಜನರ ಏಳಿಗೆಗಾಗಿ 2019ರ ಜನವರಿಯಲ್ಲಿ ಆರ್ಯ ವೈಶ್ಯ ಸಮುದಾಯ ನಿಗಮ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳಿದರು.

ಪರಿಸ್ನೇಹಿ: 

ನಿಗಮದ ಪ್ರಚಾರದ ಸಾಮಗ್ರಿಗಳನ್ನು ಪರಿಸರಸ್ನೇಹಿಯಾಗಿ ಮುದ್ರಿಸಲಾಗಿದೆ. ಈ ಮುದ್ರಣ ಸಾಮಗ್ರಿಗಳಲ್ಲಿ ಹೂವು-ಹಣ್ಣು, ಇತರ ಜಾತಿಯ ಬೀಜಗಳನ್ನು ಕಾಗದದ ಒಳಗೆ ಸೇರಿಸಿ ಮುದ್ರಿಸಲಾಗಿದೆ. ಬಳಕೆಯಾದ ನಂತರ ಎಸೆದಾಗ ನೆಲದಲ್ಲಿ ಬಿದ್ದ ಈ ಪ್ರಚಾರ ಪತ್ರಗಳ ಒಳಗಿರುವ ಪತ್ರಗಳು ಮಣ್ಣಲ್ಲಿ ಸೇರಿ ಒಂದು ಸಸಿಯಾಗಿ ಪರಿವರ್ತನೆಯಾಗುತ್ತದೆ. ಮೊಟ್ಟಮೊದಲ ಬಾರಿಗೆ ನಿಗಮ ಈ ರೀತಿಯ ಪ್ರಚಾರ ಸಾಮಗ್ರಿಗಳನ್ನು ರೂಪಿಸಿರುವುದು ವಿಶೇಷವಾಗಿದೆ ಎಂದು ಹೇಳಿದರು.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚನ್ನಬಸಪ್ಪ ಡಿ.ಹಾವಣಗಿ, ಆರ್ಯ ವೈಶ್ಯ ಸಮಾಜದ ಮುಖಂಡರಾದ ಡಿ.ಅರುಣಕುಮಾರ ಶೆಟ್ಟರ್, ಮಂಜುನಾಥ್ ಶೆಟ್ಟಿ, ಪ್ರಶಾಂತ ಗುತ್ತಲ, ಮಂಜುನಾಥ ಬೆಟದೂರ, ಬಸವರಾಜ, ಆನಂದ ಹಾಗೂ ಫುಂಡಲಿಕ್ ಇದ್ದರು. 

ಕುಮಾರಿ ಅಕ್ಷತಾ ಚಿಕ್ಕೇರೂರ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ನಿಗಮದಿಂದ ಮಂಜೂರಾಗಿರುವ ವಿವಿಧ ಸಾಲದ ಮಂಜೂರಾತಿ ಪ್ರಮಾಣಪತ್ರವನ್ನು ವಿತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.