ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಬದಲಾಯ್ತು ಅವೈಜ್ಞಾನಿಕ ಆಮ್ಲಜನಕ ಪೈಪ್‌ಲೈನ್‌!

ಕೋವಿಡ್‌ ಮರಣ ಪ್ರಮಾಣದಲ್ಲಿ ಹಾವೇರಿ ಮುಂಚೂಣಿ: ಪರಿಣತ ತಜ್ಞವೈದ್ಯರ ತಂಡದ ಸಲಹೆಯ ಅನುಷ್ಠಾನ
Last Updated 29 ಸೆಪ್ಟೆಂಬರ್ 2021, 9:42 IST
ಅಕ್ಷರ ಗಾತ್ರ

ಹಾವೇರಿ: ಕೋವಿಡ್‌ 2ನೇ ಅಲೆಯ ಮರಣ ಪ್ರಮಾಣದಲ್ಲಿ ರಾಜ್ಯದಲ್ಲೇ ಹಾವೇರಿ ಜಿಲ್ಲೆ (ಶೇ 2.92) ಮುಂಚೂಣಿಯಲ್ಲಿದೆ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾದ ‘ಅವೈಜ್ಞಾನಿಕ ಆಮ್ಲಜನಕ ಪೈಪ್‌ಲೈನ್‌’ ಅನ್ನು ಪರಿಣತ ತಜ್ಞವೈದ್ಯರ ತಂಡದ ಸಲಹೆಯಂತೆ ಜಿಲ್ಲಾಸ್ಪತ್ರೆಯಲ್ಲಿ ಬದಲಾವಣೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಕೋವಿಡ್‌ ಒಂದು ಮತ್ತು ಎರಡನೇ ಅಲೆಯಿಂದ ಒಟ್ಟು 646 ಮಂದಿ ಮೃತಪಟ್ಟಿದ್ದಾರೆ. ಈ ಸಾವುಗಳ ಸಂಖ್ಯೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆ ಇದ್ದರೂ, ಶೇಕಡಾವಾರು ಮರಣ ಪ್ರಮಾಣದಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲೇ ಇದೆ.

ತನಿಖೆಗೆ ಸೂಚನೆ:ಎರಡನೇ ಅಲೆಯಲ್ಲಿ ಸಾವುಗಳ ಸಂಖ್ಯೆ ಏರಿಕೆಗೆ ಕಾರಣವೇನು? ಎಂಬ ಬಗ್ಗೆ ತನಿಖೆಗೆ ಬಸವರಾಜ ಬೊಮ್ಮಾಯಿ ಅವರು ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸೂಚನೆ ನೀಡಿದ್ದರು. ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ಪರಿಣತ ತಜ್ಞವೈದ್ಯರ ತಂಡ ಜೂನ್‌ ತಿಂಗಳಲ್ಲಿ ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ, ಮರಣ ಪ್ರಮಾಣ ಏರಿಕೆಗೆ ಕಾರಣಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಪೈಪ್‌ಲೈನ್‌ನಲ್ಲಿ ದೋಷ:ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳಿಗೆ ಸಂಪರ್ಕ ಕಲ್ಪಿಸಿದ್ದ ಪೈಪ್‌ಲೈನ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗದಿರುವುದರಿಂದ, ಕೋವಿಡ್‌ ರೋಗಿಗಳ ಮರಣ ಪ್ರಮಾಣ ಹೆಚ್ಚಲುಕಾರಣವಾಗಿದೆ ಎಂದು ತಜ್ಞರ ತಂಡ ತಮ್ಮ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿತ್ತು. ಇದರಿಂದ ಎಚ್ಚೆತ್ತುಗೊಂಡ ಜಿಲ್ಲಾಡಳಿತ, ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ12 ಎಂ.ಎಂ. ಇದ್ದ ಆಕ್ಸಿಜನ್‌ ಪೈಪ್‌ಲೈನ್‌ ಗಾತ್ರವನ್ನು22 ಎಂ.ಎಂ.ಗೆ ಬದಲಾವಣೆ ಮಾಡಿದೆ.

‘ಕೋವಿಡ್‌ ಮೊದಲನೇ ಅಲೆಯ ಸಂದರ್ಭ ಜಿಲ್ಲಾ ನಿರ್ಮಿತಿ ಕೇಂದ್ರ ಹಾಗೂ ಹೆಲ್ತ್‌ ಎಂಜಿನಿಯರುಗಳ ಸಹಯೋಗದಲ್ಲಿ ₹14 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಪೈಪ್‌ಲೈನ್‌ ಅಳವಡಿಸಲಾಗಿತ್ತು. ಈಗ ₹37 ಲಕ್ಷ ವೆಚ್ಚದಲ್ಲಿ ಪೈಪ್‌ಲೈನ್‌ ಅನ್ನು ಮಾರ್ಪಾಡು ಮಾಡಲಾಗಿದೆ’ ಎಂದು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ತಿಮ್ಮೇಶ್‌ಕುಮಾರ್ ತಿಳಿಸಿದರು.

ಆಮ್ಲಜನಕದ ಕೊರತೆ:ಆಮ್ಲಜನಕ ಲೆಕ್ಕಪರಿಶೋಧನೆಯನ್ನು ಮಾಡದೇ ಇರುವುದು, ತಾಲ್ಲೂಕು ಆಸ್ಪತ್ರೆಗಳಲ್ಲಿ ದ್ರವರೂಪದ ಆಮ್ಲಜನಕ ಸಿಲಿಂಡರ್‌ಗಳ ಕೊರತೆ, ಆಮ್ಲಜನಕ ಪೂರೈಕೆ ಮಾಡುವಲ್ಲಿ ಆಡಳಿತ ವ್ಯವಸ್ಥೆಯ ವೈಫಲ್ಯ ಸೇರಿದಂತೆ ಹಲವಾರು ಲೋಪಗಳ ಬಗ್ಗೆ ಪರಿಣತ ತಜ್ಞ ವೈದ್ಯರ ತಂಡ 3 ತಿಂಗಳ ಹಿಂದೆಯೇ ವರದಿ ನೀಡಿದೆ. ಅಂದು ತನಿಖೆಗೆ ಆದೇಶಿಸಿದ್ದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದು, ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಆಮ್ಲಜನಕ ಘಟಕಗಳ ಸ್ಥಾಪನೆ

‘ಜಿಲ್ಲಾಸ್ಪತ್ರೆಯಲ್ಲಿ ಪಿಎಸ್‌ಎ (ಪ್ರೆಷರ್‌ ಸ್ವಿಂಗ್‌ ಅಬ್ಸಾರ್ಪಷನ್‌) ತಂತ್ರಜ್ಞಾನದ 1,000 ಎಲ್‌ಪಿಎಂ (ಲೀಟರ್‌ ಪರ್‌ ಮಿನಟ್‌) ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕವನ್ನು ನಿರ್ಮಿಸಲಾಗಿದೆ. ಶಿಗ್ಗಾವಿಯಲ್ಲಿ 600 ಎಲ್‌ಪಿಎಂ, ಸವಣೂರಿನಲ್ಲಿ 500 ಎಲ್‌ಪಿಎಂ, ಹಾನಗಲ್‌ನಲ್ಲಿ 390 ಎಲ್‌ಪಿಎಂ ಘಟಕಗಳು ಸಿದ್ಧಗೊಂಡಿವೆ. ಉಳಿದ ತಾಲ್ಲೂಕಗಳಲ್ಲೂ ಸರ್ಕಾರ ಮತ್ತು ಖಾಸಗಿ ಕಂಪನಿಗಳ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ನಿಧಿಯ ಸಹಯೋಗದಲ್ಲಿ ಶೀಘ್ರ ಘಟಕಗಳು ನಿರ್ಮಾಣವಾಗಲಿವೆ’ ಎಂದು ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ ಎಚ್‌.ಎಸ್‌. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

***

ಜಿಲ್ಲಾಸ್ಪತ್ರೆಯ ಆವರಣದಲ್ಲಿ ‘ಪಿಎಸ್‌ಎ’ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಿದ್ದು, ಅದಕ್ಕೆ ಪೂರಕವಾಗಿ ಪೈಪ್‌ಲೈನ್‌ ಗಾತ್ರ ಹೆಚ್ಚಿಸಲಾಗಿದೆ

– ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ, ಹಾವೇರಿ

***

ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್‌ನ 72 ಬೆಡ್‌ಗಳಿಗೆ ತಜ್ಞರ ಸಲಹೆ ಮೇರೆಗೆ ಆಮ್ಲಜನಕ ಪೈಪ್‌ಲೈನ್‌ನಲ್ಲಿ ಮಾರ್ಪಾಡು ಮಾಡಲಾಗಿದೆ

– ಡಾ.ಪಿ.ಆರ್‌.ಹಾವನೂರ, ಜಿಲ್ಲಾ ಶಸ್ತ್ರಚಿಕಿತ್ಸಕ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT