ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಸಿಬ್ಬಂದಿ ಭರ್ತಿಗೆ ಮನವಿ

ಜಿಲ್ಲಾಡಳಿತದೊಂದಿಗೆ ಸಿ.ಎಂ ವಿಡಿಯೊ ಸಂವಾದ
Last Updated 10 ಸೆಪ್ಟೆಂಬರ್ 2020, 16:56 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಕೋವಿಡ್ ಆಸ್ಪತ್ರೆಯ ಆಕ್ಸಿಜನ್ ಸೌಲಭ್ಯ ಸೇರಿದಂತೆ ವೈದ್ಯಕೀಯ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಮಾನವ ಸಂಪನ್ಮೂಲದ ಕೊರತೆ ಇದೆ. ತಜ್ಞವೈದ್ಯರು ಹಾಗೂ ಮೈಕ್ರೋಬಯಾಲಜಿಸ್ಟ್ ನೇಮಕಾತಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡರು.

ಕೋವಿಡ್ ನಿಯಂತ್ರಣ ಹಾಗೂ ಮಳೆ ಹಾನಿ ಕುರಿತಂತೆ ಹಾವೇರಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆರೋಗ್ಯಾಧಿಕಾರಿಗಳೊಂದಿಗೆ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹಕಚೇರಿಯಿಂದ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ವಿಡಿಯೊ ಸಂವಾದ ನಡೆಸಿದರು.

ಜಿಲ್ಲೆಗೆ ಬೆಂಗಳೂರಿನಿಂದ ವೈದ್ಯಕೀಯ ತಂಡ ಭೇಟಿ ನೀಡಿ ವರದಿ ಮಾಡಿರುವ ಅನುಸಾರ ಹಾವೇರಿಗೆ ಅಗತ್ಯವಾದ ವೈದ್ಯರು ಹಾಗೂ ತಜ್ಞವೈದ್ಯರ ನೇಮಕಾತಿ ಮಾಡಬೇಕು. ಎಕ್ಸರೇ ಯಂತ್ರಗಳನ್ನು ಪೂರೈಸಬೇಕು. ಆರ್.ಟಿ.ಪಿ.ಆರ್. ಲ್ಯಾಬ್‍ಗೆ ಮೈಕ್ರೋಬಯಾಲಜಿಸ್ಟ್ ನೇಮಕಗೊಳಿಸುವಂತೆ ಮನವಿ ಮಾಡಿಕೊಂಡರು.

ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಮಳೆಹಾನಿ ಮತ್ತು ನೆರೆಯಿಂದ ಹಾನಿಯಾದ ಬೆಳೆನಷ್ಟ ಹಾಗೂ ಮನೆ ಹಾನಿಗಳ ಪರಿಷ್ಕೃತ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಸಿ.ಎಂ ಸೂಚನೆ ನೀಡಿದರು. ಜಿಲ್ಲೆಯ ಕೋವಿಡ್ ನಿಯಂತ್ರಣ ಹಾಗೂ ಮಳೆಹಾನಿ ಮಾಹಿತಿಯನ್ನು ಮುಖ್ಯಮಂತ್ರಿಗೆ ವಿವರಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಕೋವಿಡ್‍ನಿಂದ ಮರಣ ಹೊಂದುವ ಪ್ರಮಾಣ ಗಣನೀಯವಾಗಿ ಇಳಿಮುಖಗೊಳ್ಳುತ್ತಿದೆ ಎಂದರು.

ಜಿಲ್ಲೆಯಲ್ಲಿ 305 ಆಕ್ಸಿಜನ್ ಬೆಡ್, 945 ನಾನ್ ಆಕ್ಸಿಜನ್ ಬೆಡ್ ವ್ಯವಸ್ಥೆಗಳಿವೆ. 246 ಮಂದಿ ಆಕ್ಸಿಜನ್ ಬೆಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಸ್ತೇಶಿಯಾ ಹಾಗೂ ಫಿಜಿಶಿಯನ್, ಮೈಕ್ರೊಬಯಾಲಜಿಸ್ಟ್ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಿದ್ದು, ಐದು ತಾಲ್ಲೂಕುಗಳಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇದೆ ಎಂದು ವಿವರಿಸಿದರು.

ಮಳೆಹಾನಿ ಕುರಿತಂತೆ ವಿವರಿಸಿ ಆಗಸ್ಟ್ ತಿಂಗಳಲ್ಲಿ ಶೇ 33ರಷ್ಟು ಪ್ರತಿಶತ ಹೆಚ್ಚು ಮಳೆಯಾಗಿದೆ. ವಿಶೇಷವಾಗಿ ಜಿಲ್ಲೆಯ ಶಿಗ್ಗಾವಿ, ಹಾನಗಲ್, ಸವಣೂರಿನಲ್ಲಿ ಹೆಚ್ಚು ಮಳೆಗಾಳಿಯಿಂದ ಮನೆಗಳಿಗೆ ಹಾನಿಯಾಗಿದೆ. 2715 ಹೆಕ್ಟೇರ್ ಕೃಷಿ ಬೆಳೆ, 650 ಎಕರೆ ತೋಟಗಾರಿಕೆ ಬೆಳೆ, 1520 ಮನೆಗಳಿಗೆ ಹಾನಿ ಉಂಟಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT