ಬುಧವಾರ, ಸೆಪ್ಟೆಂಬರ್ 22, 2021
22 °C

ಹಾವೇರಿ: ‘ಮನ ಮೆಚ್ಚಿದ ಜೋಡಿ’ ಚಿತ್ರೀಕರಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ಹುಕ್ಕೇರಿಮಠದಲ್ಲಿ ಶುಕ್ರವಾರ ನಟ ವಿಜಯರಾಘವೇಂದ್ರ ನಾಯಕ ನಟರಾಗಿ ಅಭಿನಯಿಸುತ್ತಿರುವ ‘ಮನ ಮೆಚ್ಚಿದ ಜೋಡಿ’ ಚಿತ್ರದ ಚಿತ್ರೀಕರಣಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು.

ಸದಾಶಿವ ಸ್ವಾಮೀಜಿ ಮಾತನಾಡಿ, ‘ನಾಯಕ ನಟ ವಿಜಯರಾಘವೇಂದ್ರ ಅವರು ಉತ್ತರ ಕರ್ನಾಟಕದ ಜನ ಮೆಚ್ಚುಗೆಯನ್ನು ಗಳಿಸಿದ್ದಾರೆ. ‘ಶಿವಯೋಗಿ ಪುಟ್ಟಯ್ಯಜ್ಜ’ ಚಿತ್ರದಲ್ಲಿ ನಾಯಕನಟರಾಗಿ ನಟಿಸಿರುವುದರಿಂದ ಇನ್ನು ಮುಂದೆ ಈ ಚಿತ್ರದ ಹೆಸರು ಹೇಳುವ ಮೂಲಕ ಇವರನ್ನು ಗುರುತಿಸುವಂತಾಗಲಿ ಎಂದು ಆಶಿಸಿದರು.

ಉತ್ತರ ಕರ್ನಾಟಕದ ಜನತೆ ಕಲಾವಿದರಿಗೆ ವಿಶೇಷವಾಗಿ ಚಲನಚಿತ್ರ ಕಲಾವಿದರಿಗೆ ಪ್ರೋತ್ಸಾಹ ನೀಡತ್ತಾ ಬಂದಿದ್ದಾರೆ. ಉತ್ತರ ಹಾವೇರಿಯ ಪುಣ್ಯ ಕ್ಷೇತ್ರದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಿರುವುದರಿಂದ ಚಿತ್ರ ನೂರು ದಿನಗಳ ಕಾಲ ಓಡಲಿ, ಮನ ಮೆಚ್ಚಿದ ಜೋಡಿ ಚಿತ್ರವು ಜನ ಮೆಚ್ಚಿದ ಹಾಗೂ ಜಗ ಮೆಚ್ಚಿದ ಚಿತ್ರವಾಗಲಿ ಎಂದು ಹಾರೈಸಿದರು.

ನಾಯಕ ನಟ ವಿಜಯರಾಘವೇಂದ್ರ ಮಾತನಾಡಿ, ಕೊರೊನಾದಂಥ ಸಂದರ್ಭದಲ್ಲಿ ಚಿತ್ರ ಮಾಡುವುದು ಸಾಹಸದ ಕೆಲಸ, ನಿರ್ಮಾಪಕರ ಸಾಹಸದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಲಾಪ್ರೇಕ್ಷಕರ ಆಶೀರ್ವಾದ ಚಿತ್ರದ ಮೇಲಿರಲಿ. ಜನರು ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರದೆ ಮಾಸ್ಕ್‌ ಧರಿಸುವಂತೆ ಮನವಿ ಮಾಡಿದರು.

ಸಿದ್ದನಕೊಳ್ಳ ಮಠದ ಡಾ.ಶಿವಕುಮಾರ ಸ್ವಾಮೀಜಿ ಮಾತನಾಡಿದರು.

ಚಿತ್ರದ ಮೊದಲನೇ ಸನ್ನಿವೇಶವನ್ನು ರಾಜ್ಯಮಟ್ಟದ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ‘ಹಾವೇರಿಯ ರಾಕ್‌ಸ್ಟಾರ್’ ಎಂದೇ ಹೆಸರುವಾಸಿಯಾಗಿರುವ ನಗರದ ಕೊಬ್ಬರಿ ಹೋರಿಯೊಂದಿಗಿನ ವಿಜಯರಾಘವೇಂದ್ರ ಅಭಿನಯದ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು.

ಮಾಜಿ ಶಾಸಕ ಶಿವರಾಜ ಸಜ್ಜನರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿ.ಪಂ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಚಿತ್ರ ನಿರ್ಮಾಪಕಿ, ನಿರ್ದೇಶಕಿ ಮಹಾಲಕ್ಷ್ಮಿ ಎನ್.ಎಚ್, ನಾಗರಾಜ ಜಿ.ಎಚ್, ನಾಯಕ ನಟಿ ಸಿಮ್ರಾನ್, ಕಲಾವಿದ ವೀರಭದ್ರಗೌಡ ಹೊಮ್ಮರಡಿ, ಪ್ರಮುಖರಾದ ಅಶೋಕ ಮರೆಣ್ಣನವರ, ಹೊನ್ನಪ್ಪ ತಗಡಿನಮನಿ, ನಾಗರಾಜ ಮಾಳಗಿ, ಚಿಕ್ಕಪ್ಪ ದೊಡ್ಡತಳವಾರ, ಗಣೇಶ ಪೂಜಾರ, ಸುಭಾಸ್ ಬೆಂಗಳೂರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.