ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ–ಸವಣೂರ ಕ್ಷೇತ್ರ: ನನಸಾದ ಸಿಎಂ ಕನಸಿನ ಯೋಜನೆ

ಶಿಗ್ಗಾವಿ–ಸವಣೂರ ಕ್ಷೇತ್ರದಲ್ಲಿ ₹96 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ
Last Updated 1 ಸೆಪ್ಟೆಂಬರ್ 2021, 14:59 IST
ಅಕ್ಷರ ಗಾತ್ರ

ಹಾವೇರಿ: ಶಿಗ್ಗಾವಿ ಏತ ನೀರಾವರಿ ಯೋಜನೆಯ 39 ಕೆರೆಗಳಿಗೆ ನೀರು ತುಂಬಿಸುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಹುದಿನದ ಕನಸಾಗಿತ್ತು. ಈ ಕಾಮಗಾರಿಗೆ ಬುಧವಾರ ಸ್ವತಃ ಬೊಮ್ಮಾಯಿ ಅವರೇ ಚಾಲನೆ ನೀಡುವ ಮೂಲಕ ಕ್ಷೇತ್ರದ ಜನರ ಕನಸನ್ನು ನನಸು ಮಾಡಿದರು.

ಶಿಗ್ಗಾವಿ ತಾಲ್ಲೂಕಿನ ಕಲಕಟ್ಟಿ (ರಾಜೀವ ಗ್ರಾಮ) ಸಮೀಪ ₹34 ಕೋಟಿ ವೆಚ್ಚದ ಶಿಗ್ಗಾವಿ ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಿದ ನಂತರ ಬಸವರಾಜ ಬೊಮ್ಮಾಯಿ ಮಾತನಾಡಿ, ಕೆರೆ ತುಂಬಿಸುತ್ತೇನೆ ಎಂದು ಜನರಿಗೆ ಮಾತನ್ನು ಕೊಟ್ಟಿದ್ದೆ. ಕೊಟ್ಟ ಮಾತನ್ನು ನಡೆಸಿಕೊಟ್ಟಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ವರದಾ ನದಿಯಿಂದ 24 ಸಾವಿರ ಎಕರೆ ರೈತರ ಜಮೀನುಗಳಿಗೆ ತುಂತುರು ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಜಮೀನಿಗೆ ಸಮರ್ಪಕವಾಗಿ ನೀರು ಕೊಟ್ಟರೆ, ರೈತರ ಬೆವರನ್ನು ಸುರಿಸಿ, ಬಂಗಾರದ ಬೆಳೆ ಬೆಳೆಯುತ್ತಾರೆ ಎಂಬ ವಿಶ್ವಾಸವಿದೆ. ಸವಣೂರು ಏತ ನೀರಾವರಿ ಯೋಜನೆಯ 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಉದ್ಘಾಟನೆ ನೆರವೇರಿಸುತ್ತೇನೆ. ಶಿಗ್ಗಾವಿ ಮತ್ತು ಸವಣೂರ ಏತ ನೀರಾವರಿ ಯೋಜನೆಗಳನ್ನು ಹೂವಿನ ಮಾಲೆಯ ರೀತಿ ಪೋಣಿಸಿ, ನೀರು ಕಲ್ಪಿಸಿದ್ದೇನೆ ಎಂದರು.

ರಾಜ್ಯದ ನಾಯಕನಾದವನಿಗೆ ನಾಡಿನ ನಾಡಿಮಿಡಿತ ಗೊತ್ತಿರಬೇಕು. ವಿದ್ಯಾವಂತರಿಗೆ ಭವಿಷ್ಯ ನಿರ್ಮಾಣ ಮಾಡಬೇಕು. ದುಡಿಮೆಗೆ ಬೆಲೆ ಸಿಗುವಂತೆ ಮಾಡಬೇಕು. ರೈತರ ಬೆವರಿಗೆ ಬೆಲೆ ಸಿಗುವಂತೆ ಮಾಡಬೇಕು. ಆಗ ಮಾತ್ರ ನಾಡು ಶ್ರೀಮಂತವಾಗುತ್ತದೆ. ಸಂತೋಷ, ನೆಮ್ಮದಿ ನೆಲೆಸುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣದ ಗುಣಮಟ್ಟಕ್ಕೆ ಕ್ರಮ:

ವಸತಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗಿದೆ. ಸಿಬಿಎಸ್‌ಇ ಶಿಕ್ಷಣದ ಗುಣಮಟ್ಟದ ರೀತಿ ವಸತಿ ಶಾಲೆಗಳಲ್ಲಿ ಶಿಕ್ಷಣ ಸಿಗಬೇಕು. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಾರ್ಯಯೋಜನೆ ತಯಾರಿಸುವಂತೆ ಸೂಚಿಸಿದ್ದೇನೆ ಎಂದರು.

ಜನರಿಂದ ಅದ್ಧೂರಿ ಸ್ವಾಗತ:

ತವರು ಕ್ಷೇತ್ರಕ್ಕೆ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕ್ಷೇತ್ರದ ಜನರಿಂದ ಅದ್ಧೂರಿ ಸ್ವಾಗತ ದೊರೆಯಿತು. ತಡಸ ಗ್ರಾಮದಲ್ಲಿ ರಸ್ತೆಬದಿ ನಿಂತಿದ್ದ ಜನರತ್ತ ಮುಖ್ಯಮಂತ್ರಿ ಕೈಬೀಸಿದಾಗ ಜನರು ಹರ್ಷೋದ್ಗಾರ ಮಾಡಿದರು. ತಡಸದಿಂದ ಕುನ್ನೂರು ಮಾರ್ಗವಾಗಿ ಬರುವಾಗ ದಾರಿಯುದ್ದಕ್ಕೂ ಜನರು ಮುಖ್ಯಮಂತ್ರಿಯನ್ನು ನೋಡಲು ಮತ್ತು ಸ್ವಾಗತಿಸಲು ಕಾತರರಾಗಿ ನಿಂತಿದ್ದರು. ಕುನ್ನೂರಿನಲ್ಲಿ ಸಾಂಪ್ರದಾಯಿಕ ಇಳಕಲ್‌ ಸೀರೆ ಉಟ್ಟ ಮಹಿಳೆಯರು ಮುಖ್ಯಮಂತ್ರಿಗೆ ಆರತಿ ಬೆಳಗಿ, ಸ್ವಾಗತಿಸಿದರು.

‘ಸಂಪುಟದಲ್ಲಿ ಪ್ರತಿಭಾವಂತ ಸಚಿವರಿದ್ದಾರೆ’

ಹಾವೇರಿ: ತಮ್ಮ ಸಚಿವ ಸಂಪುಟದಲ್ಲಿನ ಸಹೋದ್ಯೋಗಿಗಳ ಕಾರ್ಯಕ್ಷಮತೆ ದಕ್ಷತೆ, ಪ್ರತಿಭೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

ತಡಸ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ‘ನನ್ನ ಸಚಿವ ಸಂಪುಟದಲ್ಲಿರುವ ಸಚಿವರು ಪ್ರತಿಭಾವಂತರಿದ್ದಾರೆ. ಕಾರ್ಯಕ್ಷಮತೆಯಿಂದ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ರಾಜ್ಯದ ಜನತೆಗೆ ಉತ್ತಮ ಕಾರ್ಯಕ್ರಮಗಳನ್ನು ಕೊಡಲು ಸಾಧ್ಯವಾಗುತ್ತಿದೆ’ ಎಂದು ಹೇಳಿದರು.

ತಡಸ ಗ್ರಾಮ ಮುಂದಿನ ದಿನಗಳಲ್ಲಿ ಪಟ್ಟಣ, ನಗರವಾಗಿ ಪರಿವರ್ತನೆಯಾಗಲಿದೆ. ಗ್ರಾಮಕ್ಕೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ವಿದ್ಯಾರ್ಥಿನಿಯರ ಜತೆ ಸಿಎಂ ಮಾತುಕತೆ

ಹಾವೇರಿ: ಯಾವ ಕ್ಲಾಸಲ್ಲಿ ಓದ್ತಾ ಇದೀಯಾ? ಕ್ಲಾಸ್ ಶುರು ಆಗಿವೆಯಾ? ಎಲ್ಲರೂ ಚೆನ್ನಾಗಿ ಓದ್ತಾ ಇದ್ದೀರಾ...

ಇವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ವಿಧಾನಸಭೆ ಕ್ಷೇತ್ರದ ಅರಟಾಳ ದುಂಡಶಿ ಗ್ರಾಮದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಮಕ್ಕಳೊಂದಿಗೆ ನಡೆಸಿದ ಸಂಭಾಷಣೆಯ ಮಾತುಗಳು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ ಮುಖ್ಯಮಂತ್ರಿಗಳು ತಡಸ ಗ್ರಾಮದಿಂದ ಹೊರಟ ನಂತರ ಮಾರ್ಗಮಧ್ಯದ ಅರಟಾಳ- ದುಂಡಸಿ ಗ್ರಾಮಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ವಿದ್ಯಾರ್ಥಿಗಳು ಬೊಮ್ಮಾಯಿ ಅವರನ್ನು ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT