ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ: ಮುಂಗಾರು ಬಿತ್ತನೆಗೆ ಸಜ್ಜಾದ ರೈತ

ಮೇ ತಿಂಗಳಲ್ಲಿ ಉತ್ತಮ ಮಳೆ: ಸಂತಸಗೊಂಡ ಅನ್ನದಾತ
ಎಂ.ವಿ.ಗಾಡದ
Published 21 ಮೇ 2024, 4:12 IST
Last Updated 21 ಮೇ 2024, 4:12 IST
ಅಕ್ಷರ ಗಾತ್ರ

ಶಿಗ್ಗಾವಿ: ಋತುಮಾನಕ್ಕೆ ತಕ್ಕಂತೆ ಪ್ರಸಕ್ತ ವರ್ಷ ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಮುಂಗಾರು ಬಿತ್ತನೆಗೆ ಅಣಿಯಾಗುತ್ತಿದ್ದಾರೆ. ತಾಲ್ಲೂಕಿನ ರೈತ ಸಮೂಹ ಹೊಲಗದ್ದೆಗಳತ್ತ ಮುಖ ಮಾಡಿದ್ದು, ಕಸಕಡ್ಡಿ, ತ್ಯಾಜ್ಯಗಳನ್ನು ತೆಗೆದು, ಜಮೀನಿನ ಸ್ವಚ್ಛತೆ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂದಿತು.

ಅತೀವೃಷ್ಟಿ, ಅನಾವೃಷ್ಟಿ ಹಾಗೂ ಕೋವಿಡ್ ಭೀತಿಗೆ ಸಿಲುಕಿ ರೈತರು ಸಂಕಷ್ಟ ಅನುಭವಿಸಿದ್ದಾರೆ. ಅಲ್ಲದೇ ಕಳೆದ ವರ್ಷ ಮಳೆ ಕೊರತೆಯಿಂದಾಗಿ ಬೆಳೆ ಬಾರದೇ ನಿರೀಕ್ಷಿತ ಆದಾಯವೂ ಬರದೇ ನಷ್ಟ ಅನುಭವಿಸಿದ್ದಾರೆ. ಆದರೆ ಈ ಬಾರಿ ಆರಂಭದಲ್ಲೇ ಮುಂಗಾರು ಮಳೆ ಉತ್ತಮವಾಗುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. 

ರೈತರು ಪ್ರಸಕ್ತ ವರ್ಷ ಮುಂಗಾರಿನ ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದು, ಈ ವರ್ಷದಲ್ಲಿ ಮುಂಗಾರಿಗೆ ಯಾವ ಬೀಜ ಬಿತ್ತನೆ ಮಾಡಬೇಕು. ಯಾವ ಗದ್ದೆಗೆ ಯಾವ ಬೆಳೆ ಬೆಳೆಯಲು ಸಾಧ್ಯವಿದೆ. ಅದರಿಂದ ಬಿತ್ತನೆ ಮಾಡಿರುವ ಬೀಜಗಳನ್ನು ಎಷ್ಟರ ಮಟ್ಟಿಗೆ ಬೆಳೆಯಬಹುದು. ಎಷ್ಟು ಇಳುವರಿ ಬರಬಹುದು ಎಂಬೆಲ್ಲ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 37.515 ಹೆಕ್ಟೇರ್ ಭೂಪ್ರದೇಶ ಸಾಗುವಳಿ ಕ್ಷೇತ್ರವಾಗಿದ್ದು, ಅದರಲ್ಲಿ 2.5 ಸಾವಿರ ಹೆಕ್ಟೇರ್ ಭೂಪ್ರದೇಶ ನೀರಾವರಿ, ಇನ್ನುಳಿದ 35.15 ಹೆಕ್ಟೇರ್ ಭೂಪ್ರದೇಶ ಸಂಪೂರ್ಣ ಒಣ ಬೇಸಾಯ (ಮಳೆಯಾಶ್ರಿತ) ಒಳಗೊಂಡಿದೆ. ಮಳೆಯಾಶ್ರಿತ ಭೂಪ್ರದೇಶ ಹೊಂದಿರುವ ರೈತ ಸಮೂಹದ ಸಂಖ್ಯೆ ತಾಲ್ಲೂಕಿನಲ್ಲಿ ಹೆಚ್ಚಾಗಿದೆ. ಮುಂಗಾರಿನ ಪ್ರಮುಖ ಬೆಳೆಗಳಾದ ಸೋಯಾಬಿನ್, ಶೇಂಗಾ, ಭತ್ತ, ಗೋವಿನ ಜೋಳ, ಮೆಕ್ಕೆಜೋಳ, ಹತ್ತಿ ಹಾಗೂ ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳನ್ನು ತಾಲ್ಲೂಕಿನಲ್ಲಿ ಬೆಳೆಯಲಾಗುತ್ತಿದೆ.

ಬರಗಾಲ ಘೋಷಣೆಯಾದರು ಸಮರ್ಪಕವಾಗಿ ರೈತನಿಗೆ ಸಿಗಬೇಕಾದ ಸೌಲಭ್ಯಗಳು ಸಿಗಲಿಲ್ಲ. ರೈತ ಸಮೂಹವೇ ಆರ್ಥಿಕವಾಗಿ ಕುಗ್ಗಿ ಹೋಗಿದೆ. ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ರೈತರಾದ ದೇವೇಂದ್ರಪ್ಪ ಹಳವಳ್ಳಿ, ಮಾಲತೇಶ ಸಕ್ರಿ, ರುದ್ರೇಶ ಪವಾಡಿ, ಚನ್ನಪ್ಪ ಹಳವಳ್ಳಿ ಮನವಿ ಮಾಡಿದರು.

ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಮೋಸವಾಗದಂತೆ ಗುಣಮಟ್ಟದ ಬೀಜ, ಗೊಬ್ಬರವನ್ನು ವಿತರಿಸಬೇಕು. ಅವಶ್ಯವಿರುವ ಬೀಜ, ಗೊಬ್ಬರ ವಿತರಣೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ರೈತರಾದ ಅಶೋಕ ಹಳವಳ್ಳಿ, ಮಂಜುನಾಥ ಸವೂರ ಆಗ್ರಹಿಸಿದರು.

ಪ್ರಸಕ್ತ ವರ್ಷದ ಬಿತ್ತನೆಗಾಗಿ ರೈತರಿಗೆ ಅಗತ್ಯವಿರುವ ಬೀಜಗಳನ್ನು ತಾಲ್ಲೂಕಿನ ಬಂಕಾಪುರ ಶಿಗ್ಗಾವಿ ದುಂಢಸಿ ಕೃಷಿ ಸಂರ್ಪಕ ಕೇಂದ್ರಗಳ ಮೂಲಕ ರಿಯಾಯತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ

-ಸುರೇಶಬಾಬು ದಿಕ್ಷೀತ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ

ವಾಡಿಕೆಗಿಂತ ಅಧಿಕ ಮಳೆ

‘ಮೇ ತಿಂಗಳಲ್ಲಿ ಈವರೆಗೆ ವಾಡಿಕೆಯಂತೆ ಸುಮಾರು 40 ಮಿ.ಮಿ ಮಳೆಯಾಗಬೇಕಿತ್ತು. ಆದರೆ 80 ಮಿ.ಮಿ ಮಳೆಯಾಗಿದೆ. ವಾಡಿಕೆಗಿಂತ ಅರ್ಧದಷ್ಟು ಹೆಚ್ಚು ಮಳೆ ಸುರಿದಿದೆ. ಹೀಗಾಗಿ ಬಿತ್ತನೆಗೆ ಈಗ ಹದಬರಿತ ಮಳೆಯಾಗಿದ್ದು ಕೊರತೆಯಾಗದಂತೆ ಎಲ್ಲ ಬೀಜಗೊಬ್ಬರ ವಿತರಿಸಲಾಗುತ್ತಿದೆ. ಬಿತ್ತನೆ ಸಂದರ್ಭದಲ್ಲಿ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಲಘು ಪೋಷಕಾಂಶ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡಬೇಕು’ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಸುರೇಶಬಾಬು ದಿಕ್ಷೀತ ರೈತರಿಗೆ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT