ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲೆಂದರಲ್ಲಿ ವಾಹನ ನಿಲುಗಡೆ: ಪಾದಚಾರಿಗಳಿಗೆ ಸಂಕಷ್ಟ

ಫುಟ್‌‌ಪಾತ್ ಆಕ್ರಮಿಸಿಕೊಂಡ ಅಂಗಡಿ: ನಿತ್ಯ ಸಂಚಾರ ದಟ್ಟಣೆ
ಶಂಕರ ಕೊಪ್ಪದ 
Published : 15 ಸೆಪ್ಟೆಂಬರ್ 2024, 4:40 IST
Last Updated : 15 ಸೆಪ್ಟೆಂಬರ್ 2024, 4:40 IST
ಫಾಲೋ ಮಾಡಿ
Comments

ಹಿರೇಕೆರೂರು: ಜಿಲ್ಲೆಯಲ್ಲಿ ಹಿರೇಕೆರೂರು ಪಟ್ಟಣ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಗುರುತಿಸಿಕೊಂಡಿದೆ. ಮಲೆನಾಡಿನ ಸೆರಗಿನಲ್ಲಿರುವ ಈ ತಾಲ್ಲೂಕು ಕೇಂದ್ರ ಹೆಚ್ಚಿದ ಜನಸಂಖ್ಯೆಗೆ ಅನುಗುಣವಾಗಿ ಮೂಲ ಸೌಲಭ್ಯಗಳು ದೊರೆಯುತ್ತಿಲ್ಲ. ವಾಹನಗಳ ಸಂಖ್ಯೆಯೂ ಹೆಚ್ಚಿದ್ದು, ಅವ್ಯವಸ್ಥೆಯ ರಸ್ತೆ, ನಿಯಮ ಪಾಲನೆ ಇಲ್ಲದೇ ದಟ್ಟಣೆ ಉಂಟಾಗುತ್ತಿದೆ.

ಸರ್ವಜ್ಞ ಸರ್ಕಲ್ ಪಟ್ಟಣದ ಪ್ರಮುಖ ವೃತ್ತವಾಗಿದ್ದು. ಪಟ್ಟಣದ ಮುಖ್ಯರಸ್ತೆಯ ಎಡ ಹಾಗೂ ಬಲಭಾಗದಲ್ಲಿ ವಾಣಿಜ್ಯ ಮಳಿಗೆಗಳಿಗೆ ವ್ಯಾಪಾರಕ್ಕೆ ಆಗಮಿಸುವ ಜನರು ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದೇ ರಸ್ತೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೆನರಾ ಬ್ಯಾಂಕ್ ಇರುವುದರಿಂದ ಗ್ರಾಹಕರು ನಿತ್ಯ ಬ್ಯಾಂಕ್‌ಗೆ ಆಗಮಿಸುತ್ತಿದ್ದು, ರಸ್ತೆಯಲ್ಲಿ ವಾಹನ ನಿಲುಗಡೆಯಿಂದ ತೊಂದರೆಯಾಗಿದೆ.

ಮುಂದೆಯೇ ತಹಶೀಲ್ದಾರ್ ಕಚೇರಿ, ತಾಲ್ಲೂಕು ಪಂಚಾಯ್ತಿ,ಪೊಲೀಸ್ ಠಾಣೆ, ಬಸ್ ನಿಲ್ದಾಣ, ಪಟ್ಟಣ ಪಂಚಾಯ್ತಿ ಸೇರಿದಂತೆ ಸರ್ಕಾರಿ ಶಾಲಾ-ಕಾಲೇಜುಗಳು ಇವೆ. ಬೆಳಿಗ್ಗೆ-ಸಂಜೆ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ವಿವಿಧ ಕೆಲಸಗಳಿಗೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿನಿತ್ಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಬಸ್‌ ನಿಲ್ದಾಣದಿಂದ ನಡೆದುಕೊಂಡು ಬರುತ್ತಾರೆ. ರಸ್ತೆಯ ಎರಡು ಬದಿ ಪಾದಚಾರಿಗಳ ಮಾರ್ಗಗಳನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ.

ಅಲ್ಲದೆ ಸರ್ವಜ್ಞ ವೃತ್ತದ ಬಲಗಡೆ ರಸ್ತೆ ಮಾರ್ಗದಲ್ಲಿ ಶಿರಸಿ, ಶಿರಾಳಕೊಪ್ಪ, ಶಿವಮೊಗ್ಗ, ಸಾಗರ, ಜೋಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದೆ. ಆದರೆ ಅದರ ಎಡಗಡೆಗೆ ಚಿಕ್ಕೇರೂರು, ಹಂಸಬಾವಿ ಮಾರ್ಗವಾಗಿ ಹಾವೇರಿಗೆ ವಾಹನಗಳು ಸಂಚರಿಸುತ್ತವೆ. ನಿತ್ಯ ಬೆಳಗ್ಗಿನ ವೇಳೆಯಲ್ಲಿ ಸಂಚಾರ ದಟ್ಟಣೆ ಹೆಚ್ಚೇ ಇರುತ್ತದೆ. ಒಂದು ಕಡೆ ಶಾಲಾ ವಿದ್ಯಾರ್ಥಿಗಳು ಬರುತ್ತಿದ್ದರೆ. ಇನ್ನೊಂದು ಕಡೆ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ.

ಬೈಕ್‌, ಕಾರು, ಬಸ್‌, ಸರಕು ಸಾಗಣೆ ವಾಹನಗಳು ರಸ್ತೆಯ ಜತೆಗೆ ಪಾದಚಾರಿ ಮಾರ್ಗಗಳನ್ನೂ ಆಕ್ರಮಿಸಿಕೊಳ್ಳುತ್ತವೆ. ಸಣ್ಣಪುಟ್ಟ ವ್ಯಾಪಾರಿಗಳು ನಾಗರಿಕರು ಓಡಾಡುವ ಕಡೆಗಳಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಪರಿಣಾಮ ಜನರು ರಸ್ತೆಯಲ್ಲಿ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದಾದ ಮೇಲೊಂದರಂತೆ ವೇಗವಾಗಿ ಮುನ್ನುಗ್ಗುವ ವಾಹನಗಳು ಭಯ ಹುಟ್ಟಿಸುವಂತಿರುತ್ತವೆ.

‘ಬಸ್‌ಗಳು ಮೈಮೇಲೆಯೇ ಬಂದಂತಹ ಅನುಭವವಾಗುತ್ತದೆ. ಎದುರಿನಿಂದ ಬರುವ ವಾಹನ ನೋಡಿಕೊಂಡು ಸಾಗುವುದರ ಜತೆಗೆ ಹಿಂದಿನಿಂದ ಬರುವ ವಾಹನ ನೋಡಿಕೊಂಡು ಹೋಗಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಸಂಚಕಾರ’ ಎನ್ನುತ್ತಾರೆ ಪಾದಚಾರಿ ರಾಜಪ್ಪ ನಿಟ್ಟೂರು.

ತರಕಾರಿ,ಚಾಟ್ಸ್‌ ವ್ಯಾಪಾರಿಗಳು ಫುಟ್‌ಪಾತ್‌ಗೆ ಅಡ್ಡಲಾಗಿ ವ್ಯಾಪಾರ ಮಾಡುತ್ತಿದ್ದಾರೆ.ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಫುಟ್‌ಪಾತ್ ಒತ್ತುವರಿದಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಬೇಕು.ಮಕ್ಕಳು, ವೃದ್ಧರು ಸೇರಿದಂತೆ ನಾಗರಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಶಿವಪುತ್ರಪ್ಪ ಅಂಗಡಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT