ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಮೂರು ದಿನ ಪಂಚಮಿ ಸಡಗರ

ಶ್ರಾವಣ ಮಾಸದ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
Last Updated 3 ಆಗಸ್ಟ್ 2019, 15:07 IST
ಅಕ್ಷರ ಗಾತ್ರ

ಹಾವೇರಿ: ಶ್ರಾವಣ ಮಾಸ ಶುರುವಾಗಿದ್ದು ಸಾಲು ಸಾಲು ಹಬ್ಬಗಳ ಸಂಭ್ರಮಕ್ಕೂ ಮುನ್ನುಡಿ ಸಿಕ್ಕಿದೆ. ಜಿಲ್ಲೆಯ ದೇವಸ್ಥಾನಗಳು ಹಾಗೂ ಮಠಗಳಲ್ಲಿ ಶುಕ್ರವಾರದಿಂದ ನಿತ್ಯ ವಿಶೇಷ ಪೂಜೆ, ಅಭಿಷೇಕ, ಬಿಲ್ವಾರ್ಚನೆ ಜರುಗುತ್ತಿದೆ.ತಿಂಗಳ ಮೊದಲ ಹಬ್ಬವಾದ ನಾಗರ ಪಂಚಮಿ (ಆ.5ರಂದು) ಆಚರಣೆಗೂ ಜಿಲ್ಲೆಯ ಜನ ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಹಬ್ಬಗಳ ಜತೆ ಈ ತಿಂಗಳಿನಿಂದಶುಭ ಸಮಾರಂಭಗಳೂ ಆರಂಭಗೊಳ್ಳಲಿವೆ. ಇದರಿಂದಾಗಿ ವ್ಯಾಪಾರಿಗಳು ಹೂವು, ಹಣ್ಣು, ತರಕಾರಿ ಬೆಲೆ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದಾರೆ.ದೇವರ ಅಲಂಕಾರಕ್ಕೆ ಬಗೆಬಗೆಯ ರಂಗೋಲಿ, ತೋರಣ, ಹೂವಿನ ಹಾರ, ತೋಮಾಲೆ, ಗೌರಿ ಹಬ್ಬಕ್ಕೆ ಬಾಗಿನ, ಅರಸಿನ ಕುಂಕುಮ ಕೂಡಾ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಹೆಣ್ಣು ಮಕ್ಕಳ ಹಬ್ಬವೆಂದೇ ಕರೆಯಲಾಗುವ ಪಂಚಮಿ ಆಚರಣೆಗೆ ಮಹಿಳೆಯರು ತವರಿಗೆ ಬರುವುದು ಸಂಪ್ರದಾಯ.ಗ್ರಾಮೀಣ ಪ್ರದೇಶಗಳ ಹೆಣ್ಣು ಮಕ್ಕಳು, ‘ಪಂಚಮಿ ಹಬ್ಬಕ ಉಳಿದಾವ ದಿನ ನಾಕ.. ಅಣ್ಣ ಬರಲಿಲ್ಲ ಯಾಕೊ ಕರಿಯಾಕ..’ ಎಂಬ ಹಾಡಿನ ಸಾಲುಗಳ ಮೂಲಕ ತಮ್ಮ ತವರಿಗೆ ಗುರುವಾರವೇ ಸಂದೇಶ ರವಾನಿಸಿದ್ದರು. ಅದರ ಬೆನ್ನಲ್ಲೇ ಪೋಷಕರು ಹಾಗೂ ಸೋದರರು ಮನೆ ಮಗಳನ್ನು ತವರಿಗೆ ಕರೆದುಕೊಂಡು ಬಂದು ಪಂಚಮಿ ಆಚರಣೆ ಕಾರ್ಯದಲ್ಲಿ ತೊಡಗಿದ್ದಾರೆ.

ಜಿಟಿ ಜಟಿ ಮಳೆಯ ನಡುವೆಯೂಮಹಿಳೆಯರು, ಮಕ್ಕಳು ಶನಿವಾರ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು.ಹಾವೇರಿ ಮಾರುಕಟ್ಟೆಯಲ್ಲಿ ನಾಗದೇವರ ಮಣ್ಣಿನ ಮೂರ್ತಿಗಳನ್ನು ₹10ಕ್ಕೆ ಒಂದರಂತೆ ಮಾರಾಟ ಮಾಡಲಾಗುತ್ತಿದೆ. ಏಲಕ್ಕಿ ಬಾಳೆ ಹಾಗೂ ದಾಳಿಂಬೆ ಬೆಲೆ ಕೊಂಚ ಏರಿಕೆಯಾಗಿದ್ದು, ಸೀಸನ್ ಮುಗಿದಿದ್ದರೂ ನೀಲಂ ಮಾವು ಲಭ್ಯವಿದೆ. ಕೆ.ಜಿಗೆ ₹60 ರಿಂದ ₹80ಕ್ಕೆ ಮಾರಾಟವಾಗುತ್ತಿದೆ.

ಮೂರು ದಿನ ಸಂಭ್ರಮ

ಜಿಲ್ಲೆಯಲ್ಲಿ ಮೂರು ದಿನ ಪಂಚಮಿ ಹಬ್ಬ ನಡೆಯಲಿದ್ದು, ಮೊದಲ ದಿನ ರೊಟ್ಟಿ ಪಂಚಮಿ ಆಚರಿಸಲಾಗುತ್ತದೆ. ಮಹಿಳೆಯರು ಎಳ್ಳು ಹಚ್ಚಿ ತಯಾರಿಸಿದ ರೊಟ್ಟಿ, ಚಪಾತಿ, ಕಡ್ಲೆಕಾಳು ಪಲ್ಯ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ಕಡ್ಲೆ ಚಟ್ನಿ, ಶೇಂಗಾ, ತಂಬಿಟ್ಟು ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುತ್ತಾರೆ. ನಂತರ ‘ದೇವರ ಪಾಲು, ದಿಂಡರ ಪಾಲು, ಗುರು–ಹಿರಿಯರ ಪಾಲು, ಎಲ್ಲರ ಪಾಲೂ ನಾಗಪ್ಪನಿಗೆ...’ ಎಂಬ ಹಾಡಿನ ಮೂಲಕ ನಾಗಪ್ಪನಿಗೆ ನಮಿಸಿ, ಮನೆ–ಮಂದಿ ಎಲ್ಲ ಆ ಪ್ರಸಾದವನ್ನು ಹಂಚಿ ತಿನ್ನುತ್ತಾರೆ.

ಎರಡನೇ ದಿನ ನಾಗರ ಪಂಚಮಿ. ಮಹಿಳೆಯರು ಹಾಗೂ ಮಕ್ಕಳು ಹೊಸ ಬಟ್ಟೆ ತೊಟ್ಟು ಬೆಲ್ಲ, ಕಡ್ಲೆಕಾಳು, ಕೊಕ್ಕಬತ್ತಿ (ಹತ್ತಿ ನೂಲಿನ ಬತ್ತಿ), ಹೋಡಬತ್ತಿ (ದಾರದಿಂದ ತಯಾರಿಸಿದ) ಹಾಗೂ ತುಪ್ಪದೊಂದಿಗೆ ನಾಗ ಮೂರ್ತಿಗಳಿಗೆ ಹಾಲೆರೆಯುತ್ತಾರೆ.ನಾಗರ ಹುತ್ತಗಳಿಗೂ ವಿಶೇಷ ಪೂಜೆ ಮಾಡುತ್ತಾರೆ.

ವಿಶೇಷವಾಗಿ ಹುತ್ತದ ಮಣ್ಣಿನಿಂದ ತಯಾರಿಸಿದ ಮೂರ್ತಿಗಳಿಗೆ ಹಾಲೆರೆಯುವುದು ಮೂರನೇ ದಿನದ ನಾಗರಚೌತಿ (ಕರಿಕಟಂಬ್ಲಿ). ಹಾವೇರಿ ನಗರದ ಬಸವೇಶ್ವರನಗರದಲ್ಲಿರುವ ಆಂಜನೇಯ ದೇವಸ್ಥಾನ, ಪುರಸಿದ್ಧೇಶ್ವರ ದೇವಸ್ಥಾನ, ಲೋಕೋಪಯೋಗಿ ವಸತೃಗೃಹದ ಆವರಣದಲ್ಲಿನ ನಾಗರ ಮೂರ್ತಿಗಳಿಗೆ ಹಾಲೆರೆಯುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ನದಿಗಳ ಪೂಜೆ ನಡೆಯುತ್ತದೆ.

ಶನಿವಾರದಿಂದಲೇ ಶುರು: ‘ದೇವಿ ಹೊಸೂರ, ಆಲದಕಟ್ಟಿ, ಸಂಗೂರು, ವೆಂಕಟಾಪುರ, ನಾಗನೂರು, ಬೆಂಚಿಹಳ್ಳಿ, ಹೊಸಳ್ಳಿ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಶನಿವಾರವೇ ರೊಟ್ಟಿ ಪಂಚಮಿ ಆಚರಿಸಲಾಗಿದೆ. ಭಾನುವಾರ ನಾಗರಪಂಚಮಿ ಹಾಗೂ ಸೋಮವಾರ ನಾಗರ ಚೌತಿ ನಡೆಯಲಿದೆ’ ಎಂದು ದೇವಿ ಹೊಸೂರ ಗ್ರಾಮ ಪಂಚಾಯ್ತಿ ಸದಸ್ಯ ನಿಂಗನಗೌಡ ಮುದಿಗ್ರೌಡರ್ ಹೇಳಿದರು. ಇನ್ನೂ ಕೆಲವೆಡೆ ಭಾನುವಾರದಿಂದ ಮೂರು ದಿನ ಪಂಚಮಿ ಆಚರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT