ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಟಿಗೆ ಅಂಬಿಗರ ಸೇರ್ಪಡೆ: ಕೇಂದ್ರಕ್ಕೆ ಸ್ಪಷ್ಟೀಕರಣ- ಸಿದ್ದರಾಮಯ್ಯ

ಶರಣ ಸಂಸ್ಕೃತಿ ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
Published 15 ಜನವರಿ 2024, 20:37 IST
Last Updated 15 ಜನವರಿ 2024, 20:37 IST
ಅಕ್ಷರ ಗಾತ್ರ

ಹಾವೇರಿ: ‘ಗಂಗಾಮತ, ಅಂಬಿಗ, ಕೋಳಿ, ಬೆಸ್ತ ಸಮಾಜ ಸೇರಿ 39 ಉಪ ಜಾತಿಗಳು ಪರಿಶಿಷ್ಟ ಪಂಗಡಕ್ಕೆ ಸೇರಲು ಸಂಪೂರ್ಣ ಅರ್ಹವಾಗಿವೆ. ಈ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸ್ವತಃ ನಾನೇ ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೆ. ಈಗ ಕೇಂದ್ರ ಸರ್ಕಾರ ಕೆಲ ಸ್ಪಷ್ಟೀಕರಣ ಕೋರಿ ರಾಜ್ಯಕ್ಕೆ ಹಿಂದಿರುಗಿಸಿದ್ದು, ಶೀಘ್ರವೇ ಸ್ಪಷ್ಟೀಕರಣ ಕಳುಹಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನರಸೀಪುರದ ನಿಜಶರಣ ಅಂಬಿಗಡರ ಚೌಡಯ್ಯನವರ ಗುರುಪೀಠದಲ್ಲಿ ಸೋಮವಾರ ನಡೆದ  ನಿಜಶರಣ ಅಂಬಿಗರ ಚೌಡಯ್ಯನವರ 6ನೇ ಶರಣ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಹೋರಾಟ 1996ರಿಂದ ಆರಂಭವಾಗಿದೆ. ಬೀದರ್‌  ಶಾಸಕರಾಗಿದ್ದ ದಿ. ಜಿ.ನಾರಾಯಣರಾವ್ ಅವರು ದೊಡ್ಡ ಹೋರಾಟ ನಡೆಸಿದ್ದರು. ಪರಿಶಿಷ್ಟ ಪಂಗಡಗಳ ಇಲಾಖೆ ಅಧಿಕಾರಿಗಳ ಸಭೆ ಶೀಘ್ರವೇ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮುಂದಿನ ಪ್ರಕ್ರಿಯೆಯ ಜವಾಬ್ದಾರಿ ವಹಿಸಿಕೊಳ್ಳಲಿ’ ಎಂದರು.

‘ಈ ಸಮಾಜದ ಅಭಿವೃದ್ಧಿಗೆ ನಾನು ‘ಅಂಬಿಗರ ಚೌಡಯ್ಯ ನಿಗಮ’ ಸ್ಥಾಪಿಸಿದೆ. ಈ ಸಮಾಜಕ್ಕೆ ಆರ್ಥಿಕ ಶಕ್ತಿ ಬರಬೇಕು. ಆರ್ಥಿಕ, ಸಾಮಾಜಿಕ ಶಕ್ತಿಯಿಲ್ಲದ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದಿಲ್ಲ. ಸಮ ಸಮಾಜದ ಕನಸು ನನಸಾಗಲು ಆರ್ಥಿಕ ಸಮಾನತೆ ಬರಬೇಕು. ಸಮಾಜದ ಹಲವು ಬೇಡಿಕೆಗಳಿವೆ. ವಸತಿ ಶಾಲೆಗೆ ₹15 ಕೋಟಿ, ಮಠದ ಸಮಗ್ರ ಅಭಿವೃದ್ಧಿಗೆ ₹25 ಕೋಟಿ ಒಳಗೊಂಡಂತೆ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಆಗದಿದ್ದರೂ ಹಲವು ಬೇಡಿಕೆಗಳನ್ನು ಖಂಡಿತ ಈಡೇರಿಸುವೆ’ ಎಂದರು. ರುದ್ರಾಕ್ಷಿ ಕಿರೀಟ:

8ನೇ ಪೀಠಾರೋಹಣದ ಪ್ರಯುಕ್ತ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗೆ 8ನೇ ಪೀಠಾರೋಹಣ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ರುದ್ರಾಕ್ಷಿ ಕಿರೀಟ’ ತೊಡಿಸಿದರು.

ಅಂಬಿಗರ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಕುರಿತು ರಾಜ್ಯ ಸರ್ಕಾರ ಸ್ಪಷ್ಟೀಕರಣದ ಜೊತೆ ಪ್ರಸ್ತಾವ ಕಳುಹಿಸಿಕೊಟ್ಟರೆ ಸಂಬಂಧಪಟ್ಟವರ ಜೊತೆ ಮಾತನಾಡುವೆ. ಮುಂದಿನ ಕ್ರಮ ತೆಗೆದುಕೊಳ್ಳುವೆ
–ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT