ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಎಸ್ಪಿ ಕಚೇರಿ ನಗರಕ್ಕೆ ಬಂತು

14 ವರ್ಷಗಳ ‘ಗ್ರಾಮೀಣ ವಾಸ’ದ ಬಳಿಕ ಹಳೇ ಕೋರ್ಟ್ ಆವರಣಕ್ಕೆ ಸ್ಥಳಾಂತರ
Last Updated 22 ಜೂನ್ 2018, 16:55 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್ಪಿ) ಕಚೇರಿಯು ನಗರದ ಮಹಾತ್ಮ ಗಾಂಧಿ ವೃತ್ತದ ಬಳಿಯ ಹಳೇ ಕೋರ್ಟ್ ಆವರಣಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಬಹುವರ್ಷಗಳ ಕನಸೊಂದು ಈಡೇರುತ್ತಿದೆ. ಸ್ಥಳಾಂತರ ಪ್ರಕ್ರಿಯೆ ಆರಂಭಗೊಂಡಿದ್ದು, ಹಂತ ಹಂತವಾಗಿ ನಡೆಯುತ್ತಿವೆ.

ಜಿಲ್ಲಾ ಕೇಂದ್ರ ಆಯಾ ಜಿಲ್ಲೆಯ ಮುಖದಂತಿದ್ದರೆ, ಡಿ.ಸಿ. ಹಾಗೂ ಎಸ್ಪಿ ಕಚೇರಿಗಳು ಕಣ್ಣುಗಳಂತೆ. ಆಡಳಿತ, ನಿರ್ವಹಣೆ, ಅಭಿವೃದ್ಧಿ, ಜನಸ್ಪಂದನೆ, ಕಾನೂನು ಸುವ್ಯವಸ್ಥೆ ಸೇರಿದಂತೆ ಪ್ರಮುಖ ಕೆಲಸಗಳು ಇಲ್ಲಿ ಕೇಂದ್ರೀಕೃತವಾಗಿರುತ್ತವೆ. ಆದರೆ, ಹಾವೇರಿ ಜಿಲ್ಲೆಯ ‘ಕಣ್ಣು’ಗಳೆರಡೂ ಹೊರಗಿತ್ತು.

ಧಾರವಾಡ ಜಿಲ್ಲೆಯ ಉಪವಿಭಾಗವಾಗಿದ್ದ ಹಾವೇರಿ 1997ರ ಆಗಸ್ಟ್ 24ರಂದು ಜಿಲ್ಲೆಯಾಯಿತು. ನಗರದ ಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿ ಜಿಲ್ಲಾಧಿಕಾರಿ (ಡಿ.ಸಿ) ಮತ್ತು ಎಸ್ಪಿ ಕಚೇರಿಗಳು ಆರಂಭಗೊಂಡವು. ಅಂದು ಜನಸ್ಪಂದನೆ, ಆಡಳಿತ, ಅಭಿವೃದ್ಧಿಗೂ ಪೂರಕವಾಗಿತ್ತು ಎಂದು ನಗರದ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಆದರೆ, 2004ರ ಫೆ. 8ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯು ನಗರ ಹೊರವಲಯದ ಕೆರಿಮತ್ತಿಹಳ್ಳಿ ಗ್ರಾಮದಲ್ಲಿನ ಪೊಲೀಸ್ ಭವನಕ್ಕೆ ಸ್ಥಳಾಂತರಗೊಂಡಿತು. ಸಮೀಪದಲ್ಲೇ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಪೊಲೀಸ್ ವಸತಿ ಗೃಹ, ಪರೇಡ್‌ ಮೈದಾನ ಸೇರಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಭಾಗಗಳೆಲ್ಲ ಅಲ್ಲಿಗೆ ಹೋದವು.

ಸಾವಿರ ಸಮಸ್ಯೆಗಳು:

‘ಈ ಸ್ಥಳವು ಹೆಗ್ಗೇರಿ ಕೆರೆಯ ದಡದಲ್ಲಿದ್ದು, ಮಳೆಗಾಲದಲ್ಲಿ ಇಲ್ಲಿನ ಸಮಸ್ಯೆ ಹೇಳತೀರದಾಗಿದೆ. ಭಾರಿ ಮಳೆಗೆ ಶಸ್ತ್ರಾಸ್ತ್ರ ಕೊಠಡಿ ಹಾಗೂ ಸುತ್ತಲೂ ನೀರಿನಿಂದ ಆವೃತಗೊಳ್ಳುತ್ತವೆ. ಜಿಲ್ಲೆಗೆ ಭದ್ರತೆ ನೀಡಬೇಕಾದ ಪೊಲೀಸರೇ ಹಾವು, ಚೇಳು, ಹುಳು, ವಿಷಜಂತುಗಳ ಭಯದಲ್ಲಿ ಬದುಕುವ ವಾತಾವರಣ ನಿರ್ಮಾಣಗೊಳ್ಳುತ್ತದೆ. ಅಲ್ಲದೇ, ಇಲ್ಲಿನ ಡ್ರೈನೇಜ್ (ಒಳಚರಂಡಿ) ವ್ಯವಸ್ಥೆಯೂ ಸಂಪೂರ್ಣ ಹದಗೆಟ್ಟು ಹೋಗಿದ್ದು, ಕಲುಷಿತ ನೀರು ಹೆಗ್ಗೇರಿ ಕೆರೆ ಸೇರುತ್ತದೆ ಎಂಬ ಆತಂಕವೂ ಮನೆ ಮಾಡಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪೊಲೀಸ್‌ ಸಿಬ್ಬಂದಿ ತಿಳಿಸಿದರು.

ನಗರದಿಂದ ಸುಮಾರು 7 ಕಿ.ಮೀ. ದೂರವಿರುವ ಕೆರಿಮತ್ತಿಹಳ್ಳಿ ಪೊಲೀಸ್ ಆವರಣಕ್ಕೆ ತೆರಳಲು ಸೂಕ್ತ ರಸ್ತೆಗಳು ಇಲ್ಲ. ತಿರುವುಗಳಿಂದ ಕೂಡಿದ ಅಗಲ ಕಿರಿದಾದ ರಸ್ತೆ ಇದೆ. ರಾಷ್ಟ್ರೀಯ ಹೆದ್ದಾರಿ–4ರ ಕೆಳಸೇತುವೆಯನ್ನು ಮಳೆಗಾಲದಲ್ಲಿ ದಾಟಿ ಹೋಗುವುದೇ ದುಸ್ತರ. ಅಷ್ಟು ಮಾತ್ರವಲ್ಲ, ನಗರದಲ್ಲಿ ಅಹಿತಕರ ಘಟನೆ ನಡೆದರೆ, ಸ್ಥಳಕ್ಕೆ ಬರಲು ಡಿಎಆರ್ (ಜಿಲ್ಲಾ ಸಶಸ್ತ್ರ ಮೀಸಲು ಪಡೆ) ಪೊಲೀಸರೂ ಹರಸಾಹಸ ಪಡಬೇಕು.

ಜಿಲ್ಲೆಯ ವಿವಿಧೆಡೆಯಿಂದ ಅಹವಾಲು ಸಲ್ಲಿಸಲು ಬರುವವರೂ ಕಷ್ಟಪಡಬೇಕಿದೆ. ಇಂಥ ಹಲವಾರು ಸಮಸ್ಯೆಗಳಿಂದ ‘ಪೊಲೀಸ್ ಭವನ’ ಜನರ ಪಾಲಿಗೆ ದೂರವಾಗಿತ್ತು.

ಕಚೇರಿಯನ್ನು ನಗರಕ್ಕೆ ಸ್ಥಳಾಂತರಿಸಲು ಈ ಹಿಂದಿನ ಹಲವಾರು ಎಸ್ಪಿಗಳು ಪ್ರಯತ್ನ ಪಟ್ಟರೂ, ಫಲ ದೊರೆತಿರಲಿಲ್ಲ. ಕೊನೆಗೂ ಜನರ ಸಮಸ್ಯೆಗಳನ್ನರಿತ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಎಸ್ಪಿ ಸ್ಥಳಾಂತರದ ಮೊದಲ ಹೆಜ್ಜೆಯಲ್ಲಿ ಯಶ ಸಾಧಿಸಿದ್ದಾರೆ. ಸುಮಾರು 14 ವರ್ಷಗಳ ವನವಾಸದ ಬಳಿಕ (2004–2018) ಎಸ್ಪಿ ಕಚೇರಿಯು ನಗರಕ್ಕೆ ಬರುತ್ತಿದೆ.

ನಗರದ ಹಳೇ ಕೋರ್ಟ್ ಆವರಣದಲ್ಲಿ ಜಿಲ್ಲಾ ನ್ಯಾಯಾಲಯವು ತೆರವುಗೊಂಡ ಬಳಿಕ ಅಲ್ಲಿ ಕಾಲೇಜುಗಳು ನಡೆಯುತ್ತಿದ್ದವು. ಆ ಬಳಿಕ ಅದು ಖಾಲಿ ಬಿದ್ದಿತ್ತು. ಈಗ ಆ ಕಟ್ಟಡವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಗೊಂಡಿದೆ.

‘ಇಲ್ಲಿ ಪೊಲೀಸ್ ಇಲಾಖೆಯ ಎಲ್ಲ ಸೇವೆಗಳು ಲಭ್ಯವಾಗಲಿವೆ. ಎಸ್ಪಿ ಕಚೇರಿ ಜೊತೆಗೆ ಸ್ಪೆಷಲ್‌ ಬ್ರಾಂಚ್ ಇನ್‌ಸ್ಪೆಕ್ಟರ್, ಡಿಸಿಐಬಿ, ಸಹಾಯಕ ಆಡಳಿತಾಧಿಕಾರಿ (ಡಿಪಿಒ), ನಿಯಂತ್ರಣ ಕೊಠಡಿ, ಪಿಟಿಷನ್ ಸೆಕ್ಷನ್ (ಅಹವಾಲು ಸಲ್ಲಿಕೆ) ಬರಲಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ತಿಳಿಸಿದರು.

‘ಇಲಾಖೆಯ ಶಸ್ತ್ರಗಳನ್ನು ಹೊಂದಿರುವ ಶಸ್ತ್ರಗಾರ, 150 ವಾಹನ, 350 ಸಿಬ್ಬಂದಿಯನ್ನು ಹೊಂದಿದ ಡಿಎಆರ್‌ನ ಕೆರಿಮತ್ತಿಹಳ್ಳಿಯಲ್ಲಿನ ಆವರಣವು ಮಳೆಗಾಲದಲ್ಲಿ ನೀರಿನಿಂದ ಆವೃತಗೊಳ್ಳುತ್ತದೆ. ಅದಕ್ಕಾಗಿ ಸಮೀಪದಲ್ಲಿ ಹಳೇ ಕೋರ್ಟ್‌ ಸಮೀಪದ ನಗರಸಭೆ ಇರುವ ಸ್ಥಳವನ್ನು ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಅವರು ವಿವರಿಸಿದರು.

ಸದ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಅಪರಾಧ ಮಾಹಿತಿ ವಿಭಾಗ, ಆಂತರಿಕ ಭದ್ರತಾ ವಿಭಾಗಗಳು ಕೆರಿಮತ್ತಿಹಳ್ಳಿಯ ಪೊಲೀಸ್‌ ಭವನದಲ್ಲೇ ಕಾರ್ಯ ನಿರ್ವಹಿಸಲಿವೆ. ಡಿಎಆರ್, ಆರ್‌ಪಿಐಗಳ ಕಚೇರಿ, ಸಿಇಎನ್‌ ಘಟಕದ ಕಚೇರಿಗಳೂ ಅಲ್ಲಿರಲಿವೆ. ಅದೇ ಕವಾಯತು ಮೈದಾನವನ್ನು ಬಳಸಿಕೊಳ್ಳಲಾಗುವುದು. ಗ್ರಾಮೀಣ ಸರ್ಕಲ್ ಇನ್‌ಸ್ಪೆಕ್ಟರ್‌ ಕಚೇರಿಯನ್ನೂ ಅಲ್ಲಿಗೆ ವರ್ಗಾಯಿಸುವ ಚಿಂತನೆ ಇದೆ ಎಂದರು.

ಡಿ.ಸಿ. ಕಚೇರಿ ಬಳಿ ಇಲಾಖೆಯ ಐದು ಎಕರೆ ಜಾಗವಿದ್ದು, ಸದ್ಯ ಯಾವುದೇ ಯೋಜನೆಗಳು ಇಲ್ಲ ಎಂದರು.

ಡಿ.ಸಿ. ಕಚೇರಿಯನ್ನು ನಗರಕ್ಕೆ ತನ್ನಿ

ತಾಲ್ಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿದ್ದ ಎಸ್ಪಿ ಕಚೇರಿಯನ್ನು ನಗರಕ್ಕೆ ಸ್ಥಳಾಂತರಿಸಿದ ಮಾದರಿಯಲ್ಲೇ, ದೇವಗಿರಿ ಗ್ರಾಮದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನೂ (ಡಿ.ಸಿ.) ನಗರಕ್ಕೆ ಸ್ಥಳಾಂತರಿಸಬೇಕು. ಹೊಸದಾಗಿ ಮಂಜೂರಾಗುವ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಈಗಿನ ಡಿ.ಸಿ. ಕಚೇರಿಯ ಕಟ್ಟಡ ನೀಡಬಹುದು ಎಂಬುದು ಜನರ ಬೇಡಿಕೆಯಾಗಿದೆ ಎನ್ನುತ್ತಾರೆ ಮುಖಂಡ ಮಾಲತೇಶ ಬೇವಿನಹಿಂಡಿ.

ನಗರದ 38 ಸಿ.ಸಿ. ಟಿವಿ ಕ್ಯಾಮೆರಾಗಳು ದುರಸ್ತಿಯಾಗಿದ್ದು, ಕಾರ್ಯಾಚರಣೆ ಆರಂಭಗೊಂಡಿದೆ. ಸಂಚಾರ, ಅಪರಾಧಗಳ ಮೇಲೆ ಇನ್ನಷ್ಟು ನಿಗಾ ಇಡಲು ಸಾಧ್ಯವಾಗಿದೆ
ಕೆ.ಪರಶುರಾಂ,ಎಸ್ಪಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT