ಮಂಗಳವಾರ, ಮಾರ್ಚ್ 28, 2023
31 °C
ಸಾಹಿತ್ಯ ಸಮ್ಮೇಳನ: ಆಹಾರ ಸಮಿತಿ ಸಭೆ ನಿರ್ಧಾರ

ಸಾಹಿತ್ಯ ಸಮ್ಮೇಳನದಲ್ಲಿ ಘಮಘಮಿಸುವ ಬಿರಂಜಿ ರೈಸ್‌, ಸಿಹಿ ಖಾದ್ಯಗಳ ವಿಶೇಷ ಊಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ನಗರದಲ್ಲಿ ಜ.6,7 ಮತ್ತು 8ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಘಮಘಮಿಸುವ ಬಿರಂಜಿ ರೈಸ್‌ ಹಾಗೂ ಸಿಹಿ ಖಾದ್ಯಗಳಾದ ಕೇಸರಿಬಾತ್‌, ಮೈಸೂರ್‌ ಪಾಕ್‌, ಪಾಯಸ, ಮಾಲ್ದಿ ಸೇರಿದಂತೆ ವಿಶೇಷ ಊಟ ತಯಾರು ಮಾಡಲು ನಿರ್ಧರಿಸಲಾಯಿತು. 

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹಾರ ಸಮಿತಿ ಸಭೆಯು ಶಾಸಕ ಅರುಣಕುಮಾರ ಪೂಜಾರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. 

ಮೊದಲ ದಿನ ಉಪಾಹಾರಕ್ಕೆ ಉಪ್ಪಿಟ್ಟು-ಕೇಸರಿಬಾತ್‌, ಎರಡನೇ ದಿನ ಪುಲಾವ್‌- ಬೆಲ್ಲದ ಉಂಡಿ, ಮೂರನೇ ದಿನ ವಾಂಗೀಬಾತ್-ಮೈಸೂರು ಪಾಕ್ ನೀಡಲು ನಿರ್ಧರಿಸಲಾಯಿತು. ಮಧ್ಯಾಹ್ನದ ಊಟಕ್ಕೆ ಜೋಳದ ರೊಟ್ಟಿ, ಚಪಾತಿ, ಪುಲಾವ್, ಪಲ್ಯ, ಚಟ್ನಿ, ಅನ್ನಸಾರು, ಪ್ರತಿ ದಿನ ಒಂದು ವಿಶೇಷ ರೈಸ್ ಹಾಗೂ ಪಾಯಸ, ರಾತ್ರಿ ಊಟಕ್ಕೆ ಜೋಳದ ರೊಟ್ಟಿ, ಚಪಾತಿ ಪಲ್ಯ, ಅನ್ನಸಾರು ಹಾಗೂ ಕೊನೆಯ ದಿನ ಮಧ್ಯಾಹ್ನ ಬಿರಂಜಿ ರೈಸ್, ಮಾಲ್ದಿ ವಿಶೇಷ ಊಟ ತಯಾರು ಮಾಡಲು ತೀರ್ಮಾನಿಸಲಾಯಿತು.

ನಿತ್ಯ 1.50 ಲಕ್ಷ ಮಂದಿಗೆ ಊಟ:

ಆಹಾರ ಸಮಿತಿಯ ಸದಸ್ಯ ಕಾರ್ಯದರ್ಶಿ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಮಾತನಾಡಿ, ಪ್ರತಿನಿತ್ಯ 1.50 ಲಕ್ಷ ಜನರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗುವುದು. ಸಾಮಾನ್ಯ ವರ್ಗ, ಗಣ್ಯರು, ಅತಿಗಣ್ಯರು ಮೂರು ವರ್ಗದಲ್ಲಿ ಊಟದ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಸಮ್ಮೇಳನದ ಮೂರೂ ದಿನ ನಿಗದಿತ ಅವಧಿಯಲ್ಲಿ ಸಾವಯವ ಬೆಲ್ಲದ ಕಾಫಿ, ಟೀ ಪೂರೈಸಲು ನಿರ್ಧರಿಸಲಾಗಿದೆ ಎಂದರು. 

35 ಎಕರೆಯಲ್ಲಿ ಕಿಚನ್‌:

ಸಮ್ಮೇಳನ ನಡೆಯುವ 128 ಎಕರೆ ವಿಶಾಲವಾದ ಜಾಗದಲ್ಲಿ 35 ಎಕರೆಯಲ್ಲಿ ಕಿಚನ್ ಮತ್ತು ಡೈನಿಂಗ್ ವ್ಯವಸ್ಥೆ ಮಾಡಲಾಗುವುದು. 150 ರಿಂದ 200 ಕೌಂಟರ್‌ಗಳನ್ನು ತೆರೆಯಲಾಗುವುದು. ಪ್ರತಿ ಕೌಂಟರ್ ಉಸ್ತುವಾರಿಗೆ ಒಬ್ಬ ಅಧಿಕಾರಿ, ಮತ್ತು ಸಿಬ್ಬಂದಿ ಹಾಗೂ 20 ಸ್ವಯಂಸೇವಕರನ್ನು ನೇಮಿಸಿಕೊಳ್ಳಲಾಗುವುದು. ಮಹಿಳೆಯರಿಗೆ, ಅಂಗವಿಕಲರಿಗೆ, 70 ವರ್ಷ ಮೇಲ್ಪಟ್ಟ ವೃದ್ಧರಿಗೆ, ಸಮ್ಮೇಳನದ ಸೇವಾ ನಿರತರಿಗೆ ಪ್ರತ್ಯೇಕ ಊಟದ ಕೌಂಟರ್ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು