ಸೋಮವಾರ, ಸೆಪ್ಟೆಂಬರ್ 26, 2022
24 °C
ಬೆಳೆಹಾನಿ ಸಮೀಕ್ಷೆ ಬಗ್ಗೆ ಅಸಮಾಧಾನ; ಕೃಷಿ ಸಚಿವ ಬಿ.ಸಿ.ಪಾಟೀಲ ಎಚ್ಚರಿಕೆ

ತಪ್ಪು ವರದಿ ನೀಡಿದರೆ ನಿರ್ದಾಕ್ಷಿಣ್ಯ ಕ್ರಮ: ಬಿ.ಸಿ.ಪಾಟೀಲ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆಹಾನಿಯ ಬಗ್ಗೆ ತಪ್ಪು ವರದಿ ಕೊಟ್ಟರೆ, ರೈತರಿಗೆ ಅನ್ಯಾಯ ಮಾಡಿದರೆ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರವಾಹ ಪರಿಸ್ಥಿತಿ ಹಾಗೂ ಬೆಳೆಹಾನಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. 

ಅತಿವೃಷ್ಟಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಾನವೀಯತೆ, ಹೃದಯವಿಶಾಲತೆಯಿಂದ ನಿಖರವಾಗಿ ಬೆಳೆಹಾನಿ ಸಮೀಕ್ಷೆ ಕೈಗೊಳ್ಳಬೇಕು. ರೈತರ ಹೊಲಗಳಿಗೆ ತೆರಳಿ ಹಾನಿಯನ್ನು ಪರಿಶೀಲಿಸಬೇಕು. ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳ್ಳುವವರೆಗೂ ಯಾವೊಬ್ಬ ಕೃಷಿ ಅಧಿಕಾರಿಗಳು ರಜೆ ಮೇಲೆ ತೆರಳಬಾರದು ಎಂದು ಸೂಚನೆ ನೀಡಿದರು. 

ಜಿಲ್ಲೆಯ ಬಹುಪಾಲು ಗ್ರಾಮಗಳಿಗೆ ಮಳೆಯಿಂದ ಕುಡಿಯುವ ನೀರಿನ ಪೈಪ್‍ಗಳು ಹಾಳಾಗಿ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಕುಡಿಯುವ ನೀರು ಪೂರೈಕೆ ಪಂಪ್‍ಗಳು ಹಾಳಾಗಿವೆ. ಈ ಕುರಿತಂತೆ ತ್ವರಿತ ಕ್ರಮಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಅವರಿಗೆ ಸೂಚನೆ ನೀಡಿದರು.

144 ಲೈಸೆನ್ಸ್‌ ರದ್ದು:

ಕೃತಕ ಅಭಾವ ಸೃಷ್ಟಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಕೃಷಿ ಜಾಗೃತ ದಳದಿಂದ ಕಳಪೆ ಬೀಜ-ಗೊಬ್ಬರ, ಕೃತಕ ಅಭಾವ ಸೃಷ್ಟಿಸಿದವರ ವಿರುದ್ಧ ಕ್ರಮ ಜರುಗಿಸಿದ್ದೇವೆ. 144 ಪರವಾನಗಿಗಳನ್ನು ರದ್ದುಪಡಿಸಿದ್ದೇವೆ. 15 ಪ್ರಕರಣಗಳಲ್ಲಿ ಶಿಕ್ಷೆ ಹಾಗೂ ದಂಡ ಹಾಕಲಾಗಿದೆ. ₹28 ಕೋಟಿ ಮೊತ್ತದ ಕಳಪೆ ಬೀಜ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. 

ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅವರು ಮಳೆಯಿಂದ ಬೆಳೆಹಾನಿ ಮಾಹಿತಿಯನ್ನು ಸಭೆಗೆ ವಿವರಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಇದ್ದರು.

***

‘ರಸಗೊಬ್ಬರ ಕೊರತೆ ಇಲ್ಲ’

ಮುಂಗಾರು ಹಂಗಾಮಿಗೆ ಹಳೆಯ ದಾಸ್ತಾನು ಸೇರಿ 1,16,827 ಮೆಟ್ರಿಕ್ ಟನ್ ರಸಗೊಬ್ಬರ ಜಿಲ್ಲೆಗೆ ಪೂರೈಕೆಯಾಗಿದೆ. 1,08,495 ಮೆಟ್ರಿಕ್ ಟನ್ ವಿತರಿಸಲಾಗಿದೆ. 9,732 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ. ಯೂರಿಯಾ ಗೊಬ್ಬರದ ಬದಲು ನ್ಯಾನೋ ಗೊಬ್ಬರ ಬಳಸಬೇಕು. ಈ ಕುರಿತಂತೆ ರೈತರಿಗೆ ಜಾಗೃತಿ ಮೂಡಿಸಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

***

‘40 ಸಾವಿರ ಹೆಕ್ಟೇರ್‌ ಬೆಳೆಹಾನಿ’

ಜಿಲ್ಲೆಯಲ್ಲಿ 450 ಮಿ.ಮೀ ವಾಡಿಕೆ ಮಳೆ ಎದುರು 632 ಮಿ.ಮೀ. ಮಳೆಯಾಗಿದೆ. ಶೇ 40ರಷ್ಟು ಹೆಚ್ಚಿನ ಮಳೆಯಾಗಿದೆ. 3.8 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆಯಾಗಿದ್ದು, ಅತಿವೃಷ್ಟಿಯಿಂದ ಜುಲೈನಿಂದ ಆಗಸ್ಟ್ 5ರವರೆಗೆ ಅಂದಾಜು 27,353 ಹೆಕ್ಟೇರ್, ಆಗಸ್ಟ್ 8ರವರೆಗೆ 40,027 ಹೆಕ್ಟೇರ್ ಬೆಳೆಹಾನಿಯಾಗಿದೆ. ಈ ಸಮೀಕ್ಷೆ ನನಗೆ ತೃಪ್ತಿ ತಂದಿಲ್ಲ. ಹಾನಗಲ್‍ನಂತಹ ಮಲೆನಾಡು ಪ್ರದೇಶದಲ್ಲಿ ಕೇವಲ ಎರಡು ಸಾವಿರ ಹೆಕ್ಟೇರ್ ಬೆಳೆಹಾನಿಯಾಗಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಹೇಳಿದರು. 

***

ವಿಮಾ ಕಂಪನಿಗಳು ಸೂಚಿಸಿದಂತೆ ಕೃಷಿ ಅಧಿಕಾರಿಗಳು ವರದಿ ನೀಡಬಾರದು. ಸ್ಥಳ ಪರಿಶೀಲನೆ ನಡೆಸಿ ವಿಮೆ ಸೌಲಭ್ಯ ಕಲ್ಪಿಸಬೇಕು
– ಬಿ.ಸಿ.ಪಾಟೀಲ, ಕೃಷಿ ಸಚಿವ

***

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು