ರಾಣೆಬೆನ್ನೂರು: ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಶಾಸಕ ಪ್ರಕಾಶ ಕೋಳಿವಾಡ ತಹಶೀಲ್ದಾರ್ ಕಚೇರಿಗೆ ಬುಧವಾರ ಭೇಟಿ ನೀಡಿ ತಾವೇ ಸ್ವತ್ಃ ಕಸ ಗುಡಿಸಿದರು. ತಹಶೀಲ್ದಾರ್ ಆರ್.ಎಚ್. ಭಾಗವಾನ ಮತ್ತು ನಗರಸಭೆ ಪೌರಾಯುಕ್ತ ಎಫ್.ಐ. ಇಂಗಳಗಿ ಸಹ ಅವರೊಂದಿಗೆ ಕೈಜೋಡಿಸಿದರು.
ತಹಶೀಲ್ದಾರ್ ಕಚೇರಿ ಸೇರಿದಂತೆ ನಗರದ ವಿವಿಧ ಕಚೇರಿಗಳಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಈಚೆಗೆ ಸುದ್ದಿ ಪ್ರಕಟವಾಗಿತ್ತು. ಸಾರ್ವಜನಿಕರಿಂದಲೂ ಈ ಬಗ್ಗೆ ದೂರುಗಳು ಬಂದ ಕಾರಣ ಈ ಕ್ರಮ ಕೈಗೊಂಡರು.
ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, ‘ನಗರದ ಸ್ವಚ್ಛತೆ ಬಹಳ ಮುಖ್ಯ. ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ 24 ಕೊಠಡಿಗಳಿವೆ. ಜನರು ಎಲ್ಲಿ ಬೇಕೆಂದರಲ್ಲಿ ಉಗುಳಬಾರದು, ಕಸ, ಪ್ಲಾಸ್ಟಿಕ್ ತಂದು ಎಸೆಯಬಾರದು. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಡೆಂಗಿ ಹಾವಳಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪರಿಸರ ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯ’ ಎಂದರು.
‘ಸ್ವಚ್ಚ ಭಾರತ ಎಂದರೆ ಬರೀ ಸ್ಲೋಗನ್ ಹಾಕಿಕೊಂಡು ತಿರುಗಾಡುವುದಲ್ಲ. ಕಸಬರಿಗೆ ಹಿಡಿದು ಪೋಸು ಕೊಡುವುದಲ್ಲ. ಅದು ನಿರಂತರ ಪ್ರಕ್ರಿಯೆಯಾಗಬೇಕು. ಕಚೇರಿ ಆವರಣದಲ್ಲಿ ಉಗುಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು. ನಗರದ ಎಲ್ಲ ಕಚೇರಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ವೀಕ್ಷಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಾರ್ವಜನಿಕರು ಕಚೇರಿಗೆ ವಿವಿಧ ಕೆಲಸಕ್ಕೆ ಬಂದಾಗ ಅವರಿಗೆ ಕುಡಿಯುವ ನೀರು, ಕೂಡಲು ಆಸನ ಒದಗಿಸಬೇಕು. ಯಾವುದೇ ದಾಖಲೆಗಳು ಹಾಳಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎಂದು ತಹಶೀಲ್ದಾರ್‌ಗೆ ಸೂಚಿಸಿದರು.
‘ವಾಹನಗಳ ಪಾರ್ಕಿಂಗ್ ಮಾಡಲು ಸೂಕ್ತ ಸ್ಥಳ ಗುರುತಿಸಬೇಕು. ಕಚೇರಿ ಮುಂದೆ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಓಡಾಡಲು ಅನಾನುಕೂಲವಾಗುತ್ತದೆ. ನಗರದ ಸ್ವಚ್ಛತೆ ಬಗ್ಗೆ ಮತ್ತು ಸಾರ್ವಜನಿಕರ ಕುಂದು ಕೊರತೆ ಬಗ್ಗೆ ವಾರ್ಡ್ ವೈಸ್ ಸಭೆ ಮಾಡಲಾಗುವುದು’ ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಎಫ್.ಐ.ಇಂಗಳಗಿ ಅವರು ತಾವು ಅಧಿಕಾರ ವಹಿಸಿಕೊಂಡ ಮೇಲೆ ನಗರದ ಸ್ವಚ್ಛತೆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಶಾಸಕರಿಗೆ ವಿವರಿಸಿದರು.
ತಹಶೀಲ್ದಾರ್ ಆರ್.ಎಚ್. ಭಾಗವಾನ್, ಉಪತಹಶೀಲ್ದಾರ್ ವೀಣಾ ಕಲ್ಲಮ್ಮನವರ, ಕಾಂಗ್ರೆಸ್ ಯುವ ಮುಖಂಡ ಇರ್ಫಾನ್ ದಿಡಗೂರ, ನಗರಸಭೆ ಸದಸ್ಯ ಶಶಿಧರ ಬಸೆನಾಯಕ, ಮಂಜುನಾಥ ಕೆಂಚರಡ್ಡಿ, ವಾಗೀಶ ಮಳೇಮಠ, ಅಶೋಕ ಅರಳೇಶ್ವರ, ಮಧು ಕಂಬಳಿ, ರಾಘು ಗಾವಡೆ ಹಾಗೂ ನಗರಸಭೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.
ತಹಶೀಲ್ದಾರ ಕಚೇರಿ ಸಿಬ್ಬಂದಿ ಹಾಗೂ ನಗರಸಭೆ ಪೌರಕಾರ್ಮಿಕರು ಸೇರಿ ತಹಶೀಲ್ದಾರ್ ಕಚೇರಿ ಸ್ವಚ್ಛಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.