ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ತೊಡಕು; ಕೈಸೇರದ ‘ಬೆಳೆ ವಿಮೆ’

ಪಾರದರ್ಶಕತೆ ಕಾಯ್ದುಕೊಳ್ಳದ ವಿಮಾ ಕಂಪನಿಗಳು: ಸಕಾಲದಲ್ಲಿ ಸಿಗದ ಪರಿಹಾರ– ರೈತರ ಆಕ್ರೋಶ
Last Updated 12 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಹಾವೇರಿ:ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟವನ್ನು ‘ಬೆಳೆ ವಿಮೆ’ ಮೂಲಕ ರೈತರು ಸ್ಥಿರ ಆದಾಯ ಪಡೆದುಕೊಳ್ಳಲಿ ಎಂದು ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆ’ಯನ್ನು ಜಾರಿಗೊಳಿಸಲಾಗಿದೆ. ಆದರೆ, ಬೆಳೆವಿಮೆ ನೋಂದಣಿಗೆ ಕಾಲಮಿತಿ ಹಾಕಿದಂತೆ ಬೆಳೆವಿಮೆ ಪರಿಹಾರ ಪಾವತಿಗೂ ಕಾಲಮಿತಿ ನಿಗದಿಗೊಳಿಸದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

2018ರ ಮುಂಗಾರು ಹಂಗಾಮಿನಲ್ಲಿ 79,897 ರೈತರು ಬೆಳೆ ವಿಮೆ ಮಾಡಿಸಿದ್ದು, ₹163 ಕೋಟಿ ಪರಿಹಾರ ಮಂಜೂರಾಗಿದೆ. 582 ರೈತರ ಬೆಳೆ ಹೊಂದಾಣಿಕೆಯಾಗದೇ ₹ 66 ಲಕ್ಷ ಜಮಾ ಆಗಿಲ್ಲ.2019ರ ಮುಂಗಾರು ಹಂಗಾಮಿಗೆ 95,050 ರೈತರು ವಿಮೆ ಮಾಡಿಸಿದ್ದು, ₹195 ಕೋಟಿ ಪರಿಹಾರ ಮಂಜೂರಾಗಿದೆ. 2,095 ರೈತರ ಖಾತೆಗೆ ಬೆಳೆ ವಿಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.

ಹಿಂಗಾರು ಹಂಗಾಮಿಗೆ 29,096 ರೈತರಿಗೆ ₹ 28 ಕೋಟಿ ಮಂಜೂರಾಗಿದೆ. ಆಧಾರ್‌ ಸಂಖ್ಯೆ ಸಮಸ್ಯೆಯಿಂದ 114 ರೈತರ ಖಾತೆಗೆ ಬೆಳೆ ವಿಮೆ ಜಮಾ ಮಾಡುವ ಕಾರ್ಯ ವಿಳಂಬವಾಗಿದೆ.2020ರ ಮುಂಗಾರು ಹಂಗಾಮಿಗೆ 1,17,608 ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ₹ 32.63 ಕೋಟಿ ವಿಮಾ ಪರಿಹಾರ ಮಂಜೂರಾಗಿದ್ದು, ಇನ್ನೂ ರೈತರ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಬೆಳೆ, ಆಧಾರ್‌ ಸಂಖ್ಯೆ, ಪಹಣಿ ಸಂಖ್ಯೆ, ಬ್ಯಾಂಕ್‌ ಖಾತೆ ಮುಂತಾದವು ಹೊಂದಾಣಿಕೆಯಾಗದೇ ಇರುವುದು ಸೇರಿದಂತೆ ಹಲವಾರು ತಾಂತ್ರಿಕ ಕಾರಣಗಳಿಂದ ಬೆಳೆ ವಿಮೆ ಸಕಾಲದಲ್ಲಿ ರೈತರಿಗೆ ಸಿಗುತ್ತಿಲ್ಲ.ಬೆಳೆವಿಮೆ ಸಮೀಕ್ಷೆ ನಂತರ 45 ದಿನದೊಳಗೆ ಫಲಾನುಭವಿಗಳಿಗೆ ಪರಿಹಾರ ಹಣ ಪಾವತಿಯಾಗಬೇಕು. ಈವರೆಗೆ ತಾಂತ್ರಿಕ ಕಾರಣಗಳಿಂದ ತಡವಾಗಿರುವ ವಿಮೆ ಪರಿಹಾರವನ್ನು ಅರ್ಹರಿಗೆ ಪಾವತಿಸಬೇಕು ಎಂಬುದು ರೈತ ಮುಖಂಡರ ಒತ್ತಾಯ.

ರೈತರು ಬೆಳೆ ಸಾಲ ಮಾಡುವಾಗ ವಿಮಾ ಪ್ರೀಮಿಯಂ ಮುರಿದುಕೊಂಡು ವಿಮಾ ಕಂಪನಿಗೆ ಜಮಾ ಮಾಡುವ ಬ್ಯಾಂಕ್‌ಗಳು ಪರಿಹಾರದ ಹಣ ನೀಡಬೇಕಾದ ಸಂದರ್ಭದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತವೆ. ವಿಮಾ ಕಂಪನಿ ಪರಿಹಾರ ನೀಡಿದರೆ ರೈತರ ಖಾತೆಗೆ ಜಮಾ ಮಾಡುತ್ತೇವೆ ಎಂದು ಬ್ಯಾಂಕ್‌ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಒಟ್ಟಿನಲ್ಲಿ ‘ಬೆಳೆ ವಿಮೆ’ ಎಂಬುದು ರೈತರ ಮೂಗಿಗೆ ಸವರಿದ ತುಪ್ಪದಂತಾಗಿದೆ.

ಬೆಳೆ ಸಾಲಕ್ಕೆ ವಿಮೆ ಕಡ್ಡಾಯ

ಹಿರೇಕೆರೂರು: ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಿಲ್ಲ, ಬೆಳೆ ಸಾಲ ಮಾಡುವ ರೈತರಿಗೆ ವಿಮೆ ಮಾಡಿಸುವುದು ಕಡ್ಡಾಯವಾಗಿದೆ. ಹಾಗಾಗಿ ವರ್ಷಕ್ಕಿಂತ ವರ್ಷಕ್ಕೆ ವಿಮೆ ಮಾಡಿಸುವ ರೈತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ವಿಮಾ ಕಂಪನಿಗಳು ಪರಿಹಾರವನ್ನು ಸರಿಯಾಗಿ ನೀಡುತ್ತಿಲ್ಲ ಎಂಬುದು ರೈತರ ಆರೋಪ.

‘ಬೆಳೆವಿಮೆ ಎಂಬುದೇ ರೈತರ ಪಾಲಿಗೆ ಒಂದು ದೊಡ್ಡ ವಂಚನೆ. ಇದರಲ್ಲಿ ಪಾರದರ್ಶಕತೆ ಇಲ್ಲ, ವಿಮಾ ಕಂಪನಿಗಳು ಪ್ರೀಮಿಯಂ ಹಣ ಪಡೆದುಕೊಂಡು ಲಾಭ ಮಾಡಿಕೊಳ್ಳುತ್ತವೆ. ಆದರೆ, ರೈತರಿಗೆ ಸರಿಯಾಗಿ ಪರಿಹಾರ ನೀಡುವುದಿಲ್ಲ, ವಿಮಾ ಯೋಜನೆಯಿಂದ ರೈತರಿಗೆ ಅನಾನುಕೂಲವೇ ಆಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

ಬ್ಯಾಡಗಿ ತಾಲ್ಲೂಕಿನಲ್ಲಿ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 18,466 ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ.ರೈತರು ಹೊಸ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ರೈತರೇ ಬೆಳೆ ಸಮೀಕ್ಷೆ ಮಾಡಬೇಕು ಎಂದರೆ ಹೇಗೆ ಸಾಧ್ಯ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಪ್ರಶ್ನಿಸುತ್ತಾರೆ.

ಹಾನಗಲ್‌ಗೆ ಸಿಂಹಪಾಲು

ಹಾನಗಲ್: ಬೆಳೆವಿಮೆ ವಿಷಯದಲ್ಲಿ ಹಾನಗಲ್ ಜಾಗೃತ ತಾಲ್ಲೂಕು ಎಂದು ಹೆಸರು ಪಡೆದಿದೆ. ಪ್ರತಿವರ್ಷ ಇಲ್ಲಿನ ರೈತರು ಕೃಷಿಯ ಒಂದು ಮುಖ್ಯ ಪದ್ಧತಿಯಂತೆ ಬೆಳೆವಿಮೆ ಕಂತು ಕಟ್ಟುತ್ತಾರೆ. ಹೀಗಾಗಿ ವಿಮಾ ಪರಿಹಾರ ಜಿಲ್ಲೆಯಲ್ಲಿ ಹಾನಗಲ್‌ಗೆ ಸಿಂಹಪಾಲು ಇರುತ್ತದೆ.

2020–21ರಲ್ಲಿ ತಾಲ್ಲೂಕಿನಲ್ಲಿ 27,481 ರೈತರು ಬೆಳೆ ಕಂತು ಭರಿಸಿದ್ದರು. 2021–22ರಲ್ಲಿ 32 ಸಾವಿರ ರೈತರು ಬೆಳೆವಿಮೆ ಕಂತು ಕಟ್ಟಿದ್ದಾರೆ. ಈ ಬಾರಿ ಸುಮಾರು 5 ಸಾವಿರ ರೈತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ವಿಮಾ ಪರಿಹಾರ ಸಮರ್ಪಕ ವಿತರಣೆ ಆಗುತ್ತಿಲ್ಲ, ಬೆಳೆವಿಮೆ ಬಾಕಿ ಮೊತ್ತ ಬಿಡುಗಡೆಗೊಳ್ಳಬೇಕು ಎಂದು ತಾಲ್ಲೂಕಿನ ರೈತ ಮುಖಂಡ ಮಾಲತೇಶ ಪರಪ್ಪನವರ ಆಗ್ರಹಿಸಿದರು.

ಬಾರದ ವಿಮೆ: ಬೇಸತ್ತ ರೈತರು

ಸವಣೂರ: ತಾಲ್ಲೂಕಿನಲ್ಲಿ 2019-20ನೇ ಸಾಲಿನಲ್ಲಿ ರೈತರಿಗೆ ಮಾಹಿತಿ ಕೊರತೆಯಿಂದ 6 ಸಾವಿರಕ್ಕೂ ಕಡಿಮೆ ರೈತರು ವಿಮೆ ಮಾಡಿಸಿಕೊಂಡಿದ್ದರು. ಹಲವಾರು ವರ್ಷಗಳಿಂದ ಬೆಳೆ ನಾಶವಾದ ನಂತರವೂ ವಿಮೆ ಬಾರದೇ ಇರುವುದರಿಂದ ಬೇಸತ್ತು ರೈತರು ವಿಮೆ ಮಾಡಿಸುವುದನ್ನೇ ಕೈಬಿಟ್ಟಿದ್ದಾರೆ.

‘ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 11 ಸಾವಿರಕ್ಕೂ ಹೆಚ್ಚು ರೈತರು ಬೆಳೆವಿಮೆ ಮಾಡಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ 1300ಕ್ಕೂ ಹೆಚ್ಚು ರೈತರ ಪಹಣಿ ಮತ್ತು ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಜೋಡಣೆ ಸರಿಯಾಗಿ ಆಗದ ಕಾರಣ ಉಳಿದ ರೈತರಿಗೆ ವಿಮೆ ಜಮಾವಣೆಯಾಗಿಲ್ಲ. ಅವುಗಳ ಹೊಂದಾಣಿಕೆ ಕಾರ್ಯ ನಡೆದಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ತಿಳಿಸಿದರು.

ತಪ್ಪದ ರೈತರ ಅಲೆದಾಟ

ರಾಣೆಬೆನ್ನೂರು: ಪ್ರಸಕ್ತ ಸಾಲಿಗೆ ತಾಲ್ಲೂಕಿನಾದ್ಯಂತ 35 ಸಾವಿರಕ್ಕೂ ಹೆಚ್ಚು ರೈತರು ಬೆಳೆ ವಿಮೆ ತುಂಬಿದ್ದಾರೆ. ಅಗ್ರಿಕಲ್ಚರ್‌ ಆಫ್‌ ಇಂಡಿಯಾ ಇನ್ಸೂರೆನ್ಸ್‌ ಕಂಪನಿ ಬೆಳೆ ವಿಮೆ ತುಂಬಿಸಿಕೊಂಡಿದೆ.

ಆಧಾರ್ ಜೋಡಣೆ ಹೊಂದಾಣಿಕೆಯಾಗದೇ 2016ರಿಂದ 2020-21ವರೆಗೂ ವಿಮೆ ಜಮೆ ಆಗದಿದ್ದಕ್ಕೆ ಅನೇಕ ಪ್ರಕರಣಗಳು ಬಾಕಿ ಉಳಿದಿವೆ. ರೈತರು ಕೃಷಿ ಇಲಾಖೆ ಮತ್ತು ಬ್ಯಾಂಕಿಗೆ ಅಲೆದಾಡುವಂತಾಗಿದೆ. ವಿಮೆ ಕಂಪನಿ ಅಧಿಕಾರಿಗಳು ಸರಿಯಾಗಿ ಸಂಪರ್ಕಕ್ಕೆ ಸಿಗಲ್ಲ. ಸರಿಯಾಗಿ ಮಾಹಿತಿ ನೀಡಲ್ಲ. ನಾವು ರೈತರಿಗೆ ಸ್ಪಷ್ಟ ಮಾಹಿತಿ ನೀಡಲು ತೊಂದರೆಯಾಗುತ್ತದೆ. ವಿಮಾ ಹಣ ಬಂದಿಲ್ಲ ಎಂದು ರೈತರು ನಮ್ಮ ಮೇಲೆ ಒತ್ತಡ ಹಾಕುತ್ತಾರೆ ಎಂದು ಕೃಷಿ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಮಾಹಿತಿಯ ಕೊರತೆ: ರೈತರಿಗೆ ನಷ್ಟ

ಶಿಗ್ಗಾವಿ:ಬೆಳೆ ಹಾನಿ ಕುರಿತು ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವುದಿಲ್ಲ. ವಿಮೆ ಕಟ್ಟುವ ಮಾಹಿತಿ ಸರಿಯಾಗಿ ರೈತರಿಗೆ ತಿಳಿಸುವುದಿಲ್ಲ. ಎಕರೆಗೆ ಎಷ್ಟು ಹಣ, ಯಾವ ಅವಧಿಯಲ್ಲಿ ಕಟ್ಟಬೇಕು ಎಂಬ ಮಾರ್ಗದರ್ಶನವಿಲ್ಲದೆ ರೈತರು ಪ್ರತಿ ವರ್ಷ ನಷ್ಟ ಅನುಭವಿಸುವಂತಾಗಿದೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ತಪ್ಪು ವರದಿ ಮಾಡುವುದರಿಂದ ರೈತನಿಗೆ ಹಾನಿ ಉಂಟಾಗುತ್ತಿದೆ ಎಂದು ನಾರಾಯಣಪುರದ ರೈತ ಶಶಿಧರ ಹೊನ್ನಣ್ಣವರ ಸಮಸ್ಯೆ ತೋಡಿಕೊಂಡರು.

ಬಂಕಾಪುರ ಹೋಬಳಿಯಲ್ಲಿ 9,800 ಜನ ರೈತರಿಗೆ ವಿಮೆ ಮಾಡಲಾಗಿದೆ. ಅದರಲ್ಲಿ ಶೇ 85ರಷ್ಟು ರೈತರಿಗೆ ವಿಮೆ ಬಿಡುಗಡೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸುರೇಶಬಾಬು ದೀಕ್ಷಿತ್‌ ಹೇಳಿದರು.

* ಜಿಲ್ಲೆಯಲ್ಲಿ 2015-16ನೇ ಸಾಲಿನ ₹6 ಕೋಟಿ ವಿಮಾ ಮೊತ್ತ ಇಲ್ಲಿಯವರೆಗೆ ರೈತರ ಖಾತೆಗಳಿಗೆ ಜಮಾ ಆಗದೇ ಬ್ಯಾಂಕ್‌ಗಳಲ್ಲಿದೆ
– ರಾಮಣ್ಣ ಕೆಂಚಳ್ಳೇರ, ಜಿಲ್ಲಾ ಘಟಕದ ಅಧ್ಯಕ್ಷ, ರೈತ ಸಂಘ

* ಬ್ಯಾಂಕಿನವರು ಬೆಳೆ ವಿಮೆ ಹಣವನ್ನು ಸಾಲ ಮನ್ನಾಕ್ಕೆ ಜಮಾ ಮಾಡಿಕೊಳ್ಳುವುದರಿಂದ ರೈತರು ಬೆಳೆ ವಿಮೆಯಿಂದ ವಂಚಿತರಾಗುತ್ತಿದ್ದಾರೆ
– ಹನುಮಂತಪ್ಪ ಕಬ್ಬಾರ, ಮಣಕೂರಿನ ರೈತ

* ತಾಲ್ಲೂಕಿಗೊಂದು ವಿಮಾ ಕಚೇರಿ ತೆರೆಯಬೇಕೆಂದು ಕೃಷಿ ಸಚಿವರು ಸೂಚಿಸಿ 2 ವರ್ಷ ಕಳೆದರೂ ವಿಮಾ ಕಂಪನಿಗಳು ಕಚೇರಿ ತೆರೆದಿಲ್ಲ
– ಎಚ್‌.ಬಿ.ಗೌಡಪ್ಪಳವರ, ಕೃಷಿ ಸಹಾಯಕ ನಿರ್ದೇಶಕ, ರಾಣೆಬೆನ್ನೂರು

* ಜಿಲ್ಲೆಯವರೇ ಕೃಷಿ ಸಚಿವರಾಗಿದ್ದು, ಜಿಲ್ಲೆಯವರೇ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, ಬೆಳೆ ವಿಮೆ ಪರಿಹಾರ ಮಾತ್ರ ಶೂನ್ಯ
– ಮಲ್ಲಿಕಾರ್ಜುನ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ರೈತ ಸಂಘ

***

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಮುಕ್ತೇಶ್ವರ ಕೂರಗುಂದಮಠ, ಎಂ.ವಿ.ಗಾಡದ, ಕೆ.ಎಚ್‌.ನಾಯಕ, ಮಾರುತಿ ಪೇಟಕರ, ಪ್ರಮೀಳಾ ಹುನಗುಂದ, ಗಣೇಶಗೌಡ ಎಂ.ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT