ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಲ: ಮುಂಡಗೋಡದಲ್ಲಿ ವ್ಯಕ್ತಿ ಮೇಲೆ ಕರಡಿ ದಾಳಿ

ವಿಡಿಯೊ ತಂದ ಅವಾಂತರ: ಬೆಳವಗಿ ಗ್ರಾಮದಲ್ಲಿ ಗಾಯಾಳು ಹುಡುಕಿದ ಗ್ರಾಮಸ್ಥರು
Last Updated 7 ಅಕ್ಟೋಬರ್ 2020, 2:41 IST
ಅಕ್ಷರ ಗಾತ್ರ

ಗುತ್ತಲ: ಹಾವೇರಿ ತಾಲ್ಲೂಕಿನ ಬೆಳವಗಿ ಗ್ರಾಮದ ವ್ಯಾಪ್ತಿಯಲ್ಲಿ ಕರಡಿ ಕಾಣಿಸಿಕೊಂಡಿದ್ದು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದೆ ಎನ್ನಲಾದ ವಿಡಿಯೊವೊಂದು ವೈರಲ್ ಆದ ಹಿನ್ನೆಲೆಯಲ್ಲಿ ಗ್ರಾಮಸ್ಥರು, ರೈತರು ಮಂಗಳವಾರ ಅರಣ್ಯಾಧಿಕಾರಿಗಳೊಂದಿಗೆ ಕರಡಿ ಹುಡುಕಿ ಕೊಂಡು ಹೊಲಗಳಿಗೆ ಹೋದ ಘಟನೆ ನಡೆದಿದೆ.

ಆದರೆ ಕರಡಿ ದಾಳಿ ಮಾಡಿದ್ದು ನೆರೆಯ ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಎನ್ನುವುದು ಅವರಿಗೆ ತಡವಾಗಿ ಅರಿವಿಗೆ ಬಂದಿದೆ. ವಿಡಿಯೊ ತಂದ ಅವಾಂತರದಿಂದಾಗಿ ಗ್ರಾಮಸ್ಥರೆಲ್ಲ ಗಾಬರಿ ಬೀಳುವಂತಾಗಿತ್ತು.

ಶನಿವಾರ ಮುಂಡಗೋಡಿನ ಹೊರವಲಯದ ಜಮೀನಿನಲ್ಲಿ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿತ್ತು. ಆ ವ್ಯಕ್ತಿ ಮರವನ್ನೇರಿ ಕುಳಿತು, ‘ನನ್ನ ಮೇಲೆ ಕರಡಿ ದಾಳಿ ಮಾಡಿದೆ ಇಲ್ಲಿಯೇ ಸಮಿಪದ ಚೂರಿಯವರ ಜಮೀನಿನಲ್ಲಿ ಮರವನ್ನೇರಿ ಕುಳಿತಿದ್ದೇನೆ’ ಎಂದು ಅಳುತ್ತ ತಲೆಯಲ್ಲಿ ರಕ್ತ ಬಿಳಿಸುವ ವಿಡಿಯೊ ತನ್ನ ಸ್ನೇಹಿತರಿಗೆಲ್ಲ ಕಳುಹಿಸಿದ್ದ.

ಅದನ್ನು ಮುಂಡಗೋಡದಲ್ಲಿ ಶಿಕ್ಷಣ ಪಡೆಯುತ್ತಿರುವ ಹಾವೇರಿ ಯುವಕ ಈ ಗ್ರಾಮದವರಿಗೆ ಕಳುಹಿಸಿದ್ದ. ಇದೇ ಗೊಂದಲಕ್ಕೆ ಕಾರಣವಾಗಿತ್ತು.

ಅರಣ್ಯ ಅಧಿಕಾರಿಗಳು, ನೂರಾರು ರೈತರು ಕಬ್ಬಿಣದ ರಾಡ್‌, ಕೋಲು, ಬಡಗಿಯನ್ನು ಟ್ರಾಕ್ಟರ್‌ನಲ್ಲಿ ಹಾಕಿಕೊಂಡು ಕಬ್ಬಿನ ಗದ್ದೆ, ಗೋವಿನ ಜೋಳದ ಜಮೀನಿನಲ್ಲಿ ಕರಡಿ ಹಾಗೂ ಗಾಯಗೊಂಡ ವ್ಯಕ್ತಿಗಾಗಿ ಹುಡುಕಾಟ ಪ್ರಾರಂಭಿಸಿದರು. ಆದರೆ ಎಲ್ಲಿಯೂ ಪತ್ತೆಯಾಗಲಿಲ್ಲ.

ಬಳಿಕ ವಲಯ ಅರಣ್ಯ ಅಧಿಕಾರಿ ರಾಮಪ್ಪ ಪೂಜಾರ, ಆ ವಿಡಿಯೊ ಎಲ್ಲಿಂದ ಬಂತು ಎಂಬ ವಿಷಯವನ್ನು ಕಲೆ ಹಾಕಲು ಆರಂಭಿಸಿದಾಗ ಮುಂಡಗೋಡಿನಿಂದ ಎನ್ನುವ ಮಾಹಿತಿ ದೊರಕಿದೆ. ಕರಡಿ ದಾಳಿಗೊಳಗಾದ ವ್ಯಕ್ತಿ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ದೊರೆತ ಬಳಿಕ ನಿಟ್ಟುಸಿರು ಬಿಟ್ಟ ಜನರು, ಅಧಿಕಾರಿಗಳು ಶೋಧ ಕಾರ್ಯ ಬಿಟ್ಟು ಮರಳಿ ಗ್ರಾಮಗಳಿಗೆ ತೆರಳಿದರು.

ಡಿಆರ್‌ಎಫ್‌ ಗಳಾದ ಎ.ಎಸ್.ಹುಬ್ಬಳ್ಳಿ, ಸಂತೋಷ ಮಲ್ಲನಗೌಡ್ರ, ಕೃಷ್ಣಾನಾಯ್ಕ, ಎಂ.ಪಿ.ಭಜಂತ್ರಿ, ಲಕ್ಕಪ್ಪ ಲಮಾಣಿ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT