ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ದಿವಾಳಿಯಾದ ಕಾಂಗ್ರೆಸ್‌ ಸರ್ಕಾರ: ಬಿ.ಸಿ. ಪಾಟೀಲ ಟೀಕೆ

Published 29 ಅಕ್ಟೋಬರ್ 2023, 17:15 IST
Last Updated 29 ಅಕ್ಟೋಬರ್ 2023, 17:15 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ರಾಜ್ಯ ಸರ್ಕಾರವು ಆರ್ಥಿಕತೆ ಸೇರಿದಂತೆ ಎಲ್ಲ ಹಂತದಲ್ಲೂ ಸಂಪೂರ್ಣ ದಿವಾಳಿಯಾಗಿದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಮೂಗು, ಬಾಯಿ ಏನೂ ಇಲ್ಲ. ಏನಿದ್ದರೂ ಅವರ ಕಣ್ಣಿಗೆ ಗ್ಯಾರಂಟಿಗಳೆ ಕಾಣುತ್ತಿವೆ’ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಟೀಕಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಳೆ ಕೊರತೆಯಿಂದ ರಾಜ್ಯದಾದ್ಯಂತ ಬರಗಾಲ ಸಾರಿದ್ದಾರೆ. ರೈತರು ಸಾಲ ಭಾರದಿಂದ, ಬಳಲಿ ಬೆಂಡಾಗಿದ್ದಾರೆ. ಮಳೆಬಾರದೆ ಬೆಳೆ ಕಾಣದೆ, ಇಂತಹ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಒಂದು ಪೈಸೆಯು ಬಿಡುಗಡೆ ಮಾಡಿಲ್ಲ‘ ಎಂದು ಆರೋಪಿಸಿದರು.

‘ರೈತ ವಿರೋಧಿ ಸರ್ಕಾರ ಇದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿಟ್ಟಿದ್ದ ₹11 ಸಾವಿರ ಕೋಟಿ ಗ್ಯಾರಂಟಿ ಯೋಜನೆಗೆ ಬಳಸುತ್ತಿದ್ದಾರೆ. ಇದು ಯಾವ ನ್ಯಾಯ, ರಾಜ್ಯದಲ್ಲಿ ಅಭಿವೃದ್ಧಿ ಇಲ್ಲವಾದರೆ ಇಂತಹ ಸರ್ಕಾರ ಏಕೆ ಇರಬೇಕು‘ ಎಂದರು.

‘ನಮ್ಮ ಸರ್ಕಾರದಲ್ಲಿ ಅತಿವೃಷ್ಟಿಯ ಸಮಯದಲ್ಲಿ ರಾಜ್ಯದಾದ್ಯಂತ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಸಾವಿರಾರು ಕೋಟಿ ಹಣ ಮಂಜೂರು ಮಾಡುವ ಮೂಲಕ ಪರಿಹಾರ ನೀಡಿದ್ದೇವೆ. ಈ ಸರ್ಕಾರ ಕೇಂದ್ರದ ಗರಿಬ್ ಕಲ್ಯಾಣ ಯೋಜನೆ ಅಕ್ಕಿ ಮಾತ್ರ ನೀಡುತ್ತಿದೆ. ಬರೀ ಸುಳ್ಳು ಘೋಷಣೆ ಮಾಡುತ್ತಿದ್ದಾರೆ’ ಎಂದರು.

‘ರಾಜ್ಯದ ಶೇ 60ರಷ್ಟು ಮಹಿಳೆಯರಿಗೆ ಇನ್ನೂ ಗೃಹಲಕ್ಷ್ಮಿ ಹಣ ನೀಡಿಲ್ಲ. ಅಸಮರ್ಪಕ ವಿದ್ಯುತ್ ಪೂರೈಸುತ್ತಿದ್ದಾರೆ. ನಿರುದ್ಯೋಗಿ ಯುವಕರಿಗೆ ನಾಮ ಹಾಕಿ ಬರೀ ಗುಂಪುಗಾರಿಕೆ ಮಾಡುತ್ತಾ, ಅಭಿವೃದ್ಧಿಗೆ ಅನುದಾನ ನೀಡದೇ ಜನರನ್ನು ಸತಾಯಿಸುತ್ತಿದೆ‘ ಎಂದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಅರಣ್ಯ ಕಾಯ್ದೆ ಜಾರಿಗೆ ಬಂದು 52 ವರ್ಷ ಗತಿಸಿದೆ. ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ, ಹುಲಿ ಉಗುರು ಹೆಸರಿನಲ್ಲಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ನಾಟಕವಾಡುತ್ತಿದೆ. ಅರಣ್ಯ ಇಲಾಖೆ ಇಲ್ಲಿಯವರೆಗೂ ಕಣ್ಣು ಮುಚ್ಚಿ ಕುಳಿತ್ತಿತ್ತಾ‘ ಎಂದು ಆರೋಪಿಸಿದರು.

‘ಸರ್ಕಾರವು ಜನರ ಭಾವನೆಗಳನ್ನು ಬೇರೆಡೆಗೆ ಹೋಗಲು ಇಂತಹ ಆಟವಾಡುತ್ತಿದೆ. 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಬೀಳಿಸಲ್ಲ. ದೊಡ್ಡ ಸಂಖ್ಯೆಯ ಈ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಪರದಾಡುತ್ತಿದೆ. ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಗದಗ ಅಥವಾ ಹಾವೇರಿ ಜಿಲ್ಲೆಯ ಸ್ಥಳೀಯ ಅಭ್ಯರ್ಥಿಯನ್ನೇ ಬಿಜೆಪಿಯಿಂದ ಕಣಕ್ಕಿಳಿಸಬೇಕು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT