ಶನಿವಾರ, ಸೆಪ್ಟೆಂಬರ್ 25, 2021
24 °C
‘ಬೊಮ್ಮಾಯಿಯವರೇ ನಮಗೆ 2ಎ ಮೀಸಲಾತಿ ಕೊಡಿ’ ಚಳವಳಿ ಆರಂಭಿಸಲು ಕೂಡಲಸಂಗಮಶ್ರೀ ಕರೆ

ಮೀಸಲಾತಿ ಘೋಷಣೆಗೆ ಸೆ.30ರ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಪ್ರತಿ ಹಳ್ಳಿ ಹಳ್ಳಿಯಲ್ಲೂ ಪಂಚಮಸಾಲಿಗಳು ಸಂಘಟಿತರಾಗಿ ‘ಬೊಮ್ಮಾಯಿಯವರೇ ನಮಗೆ 2ಎ ಮೀಸಲಾತಿ ಕೊಡಿ’ ಎಂದು ಹಕ್ಕೊತ್ತಾಯ ಚಳವಳಿ ಆರಂಭಿಸಬೇಕು. ಸೆ.30ರೊಳಗಾಗಿ ಸರ್ಕಾರ ಮೀಸಲಾತಿ ಘೋಷಣೆ ಮಾಡದಿದ್ದರೆ, ಅ.1ರಿಂದ ಬೆಂಗಳೂರಿನಲ್ಲಿ ಧರಣಿ ಕೂರುತ್ತೇವೆ’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು. 

ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯಾರೇ ಸಿಎಂ ಆಗಲಿ ಅಥವಾ ಪಂಚಮಸಾಲಿ ಸಮುದಾಯದವರೇ ಮುಖ್ಯಮಂತ್ರಿಯಾಗಿದ್ದರೂ ನಮ್ಮ ಹೋರಾಟ ನಿಲ್ಲುತ್ತಿರಲಿಲ್ಲ. ನಮ್ಮ ಚಳವಳಿ ಶೇ 90ರಷ್ಟು ಸಾರ್ಥಕಗೊಂಡಿದೆ. ಉಳಿದದ್ದು ಹಾವೇರಿ ಜಿಲ್ಲೆಯ ಪಂಚಮಸಾಲಿಗಳ ಮೇಲೆ ನಿಂತಿದೆ. ನಿಮ್ಮ ಜಿಲ್ಲೆಯವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ನೀವು ಮೀಸಲಾತಿಗಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು. 

ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ನಮಗೆ ಸಿಗಬೇಕಾದ ಅವಕಾಶಗಳು ಕೈತಪ್ಪಿ ಹೋಗಿವೆ. ಮೀಸಲಾತಿ ಸಿಕ್ಕರೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಅನುಕೂಲವಾಗುವ ಜತೆಗೆ ರೈತರಿಗೂ ಅನುಕೂಲವಾಗುತ್ತದೆ. ರಾಜ್ಯದ ಎಲ್ಲ ಪಂಚಮಸಾಲಿ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋರಾಟ ಮಾಡೋಣ ಎಂದರು. 

ನಾನು ಶ್ರಾವಣ ಮಾಸದಲ್ಲಿ ಎಲ್ಲ ಸ್ವಾಮೀಜಿಗಳಂತೆ ಜಪ– ತಪ ಮಾಡಿಕೊಂಡು ಕುಳಿತಿದ್ದರೆ ಮೀಸಲಾತಿ ಹೋರಾಟ ನೀರುಪಾಲಾಗುತ್ತಿತ್ತು. ನಮ್ಮ ಸಮುದಾಯದ ಅಭ್ಯುದಯಕ್ಕಾಗಿ ಪಾದಯಾತ್ರೆ, ಚಳವಳಿ, ಅಭಿಯಾನವನ್ನು ನಿರಂತರವಾಗಿ ನಡೆಸುತ್ತಿದ್ದೇನೆ. ಕೂಡಲಸಂಗಮದ ಪೀಠ ಸ್ಥಾಪನೆಯಾಗಿ 12 ವರ್ಷ ಆಗಿದೆ. ಸಮುದಾಯಕ್ಕೆ ಮೀಸಲಾತಿ ದೊರಕಿಸಿಕೊಟ್ಟಾಗ ಮಾತ್ರ ನಾನು ಪೀಠಾರೋಹಣ ಮಾಡಿದ್ದು ಸಾರ್ಥಕವಾಗುತ್ತದೆ ಎಂದರು. 

ಸಮಾವೇಶದಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ, ಮೈಸೂರಿನ ಪುಟ್ಟೇಸ್ವಾಮಿ, ಬಿ.ಎಸ್. ಪಾಟೀಲ, ಬಸವರಾಜ ಹಾಲಪ್ಪನವರ ಮಾತನಾಡಿದರು. ಶಿವಕುಮಾರ ಸಂಗೂರ, ರಮೇಶ ಬಳ್ಳಾರಿ, ಶಶಿಧರ ಯಲಿಗಾರ, ಡಾ.ಬಸವರಾಜ ವೀರಾಪೂರ, ಮಲ್ಲಿಕಾರ್ಜುನ ಅಗಡಿ, ಲಲಿತಾ ಗುಂಡೇನಹಳ್ಳಿ, ಮಾರುತಿ ಶಿಡ್ಲಾಪುರ, ಮಲ್ಲಿಕಾರ್ಜುನ ಬಿರಾದರ, ಸೋಮಶೇಖರ ಕೋತಂಬರಿ, ನಾಗೇಂದ್ರ ಕಡಕೋಳ ಇದ್ದರು. 

ಪ್ರತಿಜ್ಞಾ ವಿಧಿ ಬೋಧನೆ

‘ಪಂಚಮಸಾಲಿ ಸಮುದಾಯಕ್ಕೆ ಸರ್ಕಾರವು 2ಎ ಮೀಸಲಾತಿ ಹಾಗೂ ಎಲ್ಲ ಲಿಂಗಾಯತರಿಗೂ ಕೇಂದ್ರದ ಒಬಿಸಿ ಮೀಸಲಾತಿಯನ್ನು ಅನುಷ್ಠಾನಗೊಳಿಸುವುದಕ್ಕಾಗಿ ಈ ಚಳವಳಿಯನ್ನು ಬೆಂಬಲಿಸುವ ಯಾವುದೇ ಪಕ್ಷದ ವ್ಯಕ್ತಿಯಾಗಿರಲಿ, ಯಾವುದೇ ಪ್ರದೇಶದವರಾಗಿರಲಿ ನಮ್ಮ ಸಮಾಜವು ಸರ್ವ ರೀತಿಯ ಆಶೀರ್ವಾದ ಮಾಡುತ್ತದೆ. ಬೆಂಬಲಿಸದಿದ್ದಲ್ಲಿ ನಮ್ಮ ಸಮಾಜ ಅಸಹಕಾರ ನೀಡುತ್ತದೆ’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಮುದಾಯದ ಬಾಂಧವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. 

ಮೀಸಲಾತಿ ಚಳವಳಿಯಲ್ಲಿ ತನು ಮನ ಧನದಿಂದ ಭಾಗವಹಿಸುತ್ತೇನೆ ಹಾಗೂ ಮೀಸಲಾತಿ ಪಡೆಯುವವರೆಗೂ ಎಂಥ ತ್ಯಾಗಕ್ಕೂ ಸಿದ್ಧನಿರುತ್ತೇನೆ ಎಂದು ಪ್ರತಿಜ್ಞೆ ಮಾಡಿ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.