ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ| ಸರ್ಕಾರಿ ಶಾಲೆಗಿಲ್ಲ ಸ್ವಂತ ಕಟ್ಟಡ ಭಾಗ್ಯ

ಬೇರೆ ಶಾಲೆಯ ಕೊಠಡಿಗಳಲ್ಲೇ ಪಾಠ, 272 ವಿದ್ಯಾರ್ಥಿಗಳಿಗೆ ಒಬ್ಬರೇ ಕಾಯಂ ಶಿಕ್ಷಕರು
Published 9 ಆಗಸ್ಟ್ 2023, 5:44 IST
Last Updated 9 ಆಗಸ್ಟ್ 2023, 5:44 IST
ಅಕ್ಷರ ಗಾತ್ರ

ಶಿಗ್ಗಾವಿ: ಶಾಲೆಗೆ ಸ್ವಂತ ಕಟ್ಟಡವಿಲ್ಲ. ಬೇರೆ ಶಾಲೆಯ ಕೊಠಡಿ, ಕಟ್ಟೆಯ ಮೇಲೆಯೇ ವಿದ್ಯಾರ್ಥಿಗಳು ಪಾಠ ಕೇಳುವ ಸ್ಥಿತಿ, ಮೂಲ ಸೌಕರ್ಯ ಹಾಗೂ ಕಾಯಂ ಶಿಕ್ಷಕರ ಕೊರತೆ..

ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಮೌಜಾನಾ ಆಜಾದ್ ಮಾದರಿ ಶಾಲೆಯ ವಾಸ್ತವ ಸ್ಥಿತಿ ಇದು.

6ರಿಂದ 10ನೇ ತರಗತಿವರೆಗಿನ ಮೌಜಾನಾ ಆಜಾದ್ ಮಾದರಿ ಶಾಲೆಯಲ್ಲಿ ಸುಮಾರು 272 ವಿದ್ಯಾರ್ಥಿಗಳಿದ್ದಾರೆ. ಆದರೆ, ಕಳೆದ ಆರು ವರ್ಷಗಳಿಂದ ಶಾಲೆಗೆ ಸ್ವಂತ ಕಟ್ಟಡ ಇಲ್ಲದೆ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಕೊಠಡಿಗಳಲ್ಲಿ, ಶಾಲೆಯ ಹೊರಭಾಗದ ಕಟ್ಟೆಗಳ ಮೇಲೆ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಬೋಧನೆ ಮಾಡಲಾಗುತ್ತಿದೆ.

ಉರ್ದು ಶಾಲೆಯ ಮೂರು ಕೊಠಡಿಗಳನ್ನು ಮೌಜಾನಾ ಆಜಾದ್ ಮಾದರಿ ಶಾಲೆಗೆ ನೀಡಲಾಗಿದೆ. ಅದರಲ್ಲಿ1 ಕೊಠಡಿಯನ್ನು ಮುಖ್ಯಶಿಕ್ಷಕರ ಕೊಠಡಿಯಾಗಿ ಹಾಗೂ ಉಳಿದ ಎರಡು ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಕೊಠಡಿಯಾಗಿ ಬಳಸಲಾಗುತ್ತಿದೆ. ಶಾಲೆಗೆ ಸೇರಿದ ವಸ್ತುಗಳನ್ನು ಇಟ್ಟುಕೊಳ್ಳಲು ಜಾಗದ ಸಮಸ್ಯೆಯಿಂದ ಮುಖ್ಯ ಶಿಕ್ಷಕರ ಕೊಠಡಿಯಲ್ಲೇ ಎಲ್ಲ ವಸ್ತುಗಳನ್ನು ಇಡಲಾಗಿದ್ದು, ಗೋಡೌನ್ ಆಗಿ ಮಾರ್ಪಾಡಾಗಿದೆ.

ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರೊಬ್ಬರನ್ನು ಹೊರತುಪಡಿಸಿ ಬೇರಾವ ಕಾಯಂ ಶಿಕ್ಷಕರಿಲ್ಲ. ಅವರು ಕೂಡ ಬೇರೆ ಶಾಲೆಯವರಾಗಿದ್ದು,ನಿಯೋಜನೆ ಮೇರೆಗೆ ವಾರದ ಮೂರು ದಿನಗಳವರೆಗೆ ಮಾತ್ರ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅತಿಥಿ ಶಿಕ್ಷಕರಿಂದಲೇ ಪಠ್ಯ, ಪಠ್ಯೇತರ ಚಟುವಟಿಕೆಗಳನ್ನು ನಡೆಸಿಕೊಡಲಾಗುತ್ತಿದೆ.

ಸರ್ಕಾರಿ ಉರ್ದು ಶಾಲೆಯೂ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಕುಡಿಯುವ ನೀರಿನ ಹಾಗೂ ಸೂಕ್ತ ಶೌಚಾಲಯದ ಸಮಸ್ಯೆಯನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ ಎಂದು ಗ್ರಾಮದ ಬಸವರಾಜ ಕಮ್ಮಾರ ಹೇಳಿದರು.

ಉರ್ದು ಶಾಲೆಗೆ ನೂತನವಾಗಿ ನಿರ್ಮಿಸಿದ ಒಂದು ಕೊಠಡಿಯನ್ನು ಮೌಜಾನಾ ಆಜಾದ್ ಮಾದರಿ ಶಾಲೆಗೆ ನೀಡುವಂತೆ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಯುವಮುಖಂಡ ಎ.ಎನ್.ಪಠಾಣ.

ಕೊಠಡಿ ಸಮಸ್ಯೆಯಿಂದ ಕಟ್ಟೆ ಮೇಲೆಯೇ ಮಕ್ಕಳನ್ನು ಕೂರಿಸಿ ಪಾಠ ಮಾಡುತ್ತಿದ್ದು, ಸೊಳ್ಳೆಗಳ ಕಾಟದಿಂದ ರೋಗಗಳ ಭಯ ಕಾಡುತ್ತಿದೆ. ಮಳೆ, ಬಿಸಿಲಿನಲ್ಲಿ ವಿದ್ಯಾರ್ಥಿಗಳ ಸ್ಥಿತಿ ಹೇಳತೀರದಾಗಿದೆ. ಸರ್ಕಾರ ಕೂಡಲೇ ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಬೇಕು, ಕಾಯಂ ಶಿಕ್ಷಕರ ನೇಮಕ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘ಕಟ್ಟಡ ನಿರ್ಮಾಣಕ್ಕೆ ಜಾಗದ ಸಮಸ್ಯೆ’ ಜಿಲ್ಲೆಯಲ್ಲಿ ಏಳು ಶಾಲೆಗಳಿಗೆ ಸರ್ಕಾರದ ಹಣಕಾಸಿನ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ ಆ ಶಾಲೆಗಳಿಗೆ ಕಾಯಂ ಶಿಕ್ಷಕರ ನೇಮಕವಾಗಿಲ್ಲ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.  ಈ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದು ಉತ್ತಮ ಫಲಿತಾಂಶ ಕೂಡ ಪಡೆಯುತ್ತಿದ್ದಾರೆ. ನೂತನ ಕಟ್ಟಡಕ್ಕೆ ಈಗಾಗಲೇ ಅನುದಾನವಿದ್ದು ಜಾಗದ ಕೊರತೆಯಿದೆ. ಪುರಸಭೆ 8 ಗುಂಟೆ ಜಾಗ ನೀಡಿದಾಕ್ಷಣ 3 ಮಹಡಿಯಲ್ಲಿ ಶಾಲಾ ಕಟ್ಟಡ ನಿರ್ಮಿಸಲಾಗುವುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ ಗದಿಗೌಡ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT